ರಶ್ಯಾದಿಂದ ಹೆಚ್ಚುವರಿ ‘ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ’ ಕೋರಿದ ಭಾರತ

PC : NDTV
ಹೊಸದಿಲ್ಲಿ: ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಹೆಚ್ಚುವರಿ ಘಟಕ ಕೋರಿ ಭಾರತ ಔಪಚಾರಿಕವಾಗಿ ರಶ್ಯಾವನ್ನು ಸಂಪರ್ಕಿಸಿದೆ ಎಂದು ಉನ್ನತ ಸ್ಥಾನದಲ್ಲಿರುವ ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.
‘ಆಪರೇಷನ್ ಸಿಂಧೂರ’ ಸಂದರ್ಭ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಯಶಸ್ವಿ ಬಳಕೆಯ ಹಿನ್ನೆಲೆಯಲ್ಲಿ ಭಾರತ ಇದರ ಹೆಚ್ಚುವರಿ ಘಟಕವನ್ನು ಕೋರಿ ರಶ್ಯವನ್ನು ಸಂಪರ್ಕಿಸಿದೆ.
ಪಶ್ಚಿಮ ಗಡಿಯಾಚೆಯ ವೈಮಾನಿಕ ಬೆದರಿಕೆಗಳನ್ನು ಎದುರಿಸುವಲ್ಲಿ ಈ ವ್ಯವಸ್ಥೆ ಹೆಚ್ಚಿನ ನಿಖರತೆ ಹಾಗೂ ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದ್ದವು ಎಂದು ‘ಆಪರೇಷನ್ ಸಿಂಧೂರ’ ಕುರಿತು ಅರಿವಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರ ಕಾರ್ಯಕ್ಷಮತೆಯಿಂದ ಉತ್ತೇಜನಗೊಂಡ ಭಾರತ ಇನ್ನಷ್ಟು ಘಟಕಗಳನ್ನು ರಶ್ಯಾದಿಂದ ಪಡೆಯುವ ಮೂಲಕ ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ವಿಸ್ತರಿಸಲು ಮುಂದಾಗಿದೆ. ರಷ್ಯ ಸದ್ಯದಲ್ಲೇ ಈ ಕೋರಿಕೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾ ನಿರ್ಮಿತ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತದಲ್ಲಿ ‘ಸುದರ್ಶನ ಚಕ್ರ’ ಎಂದು ಕರೆಯಲಾಗಿದೆ. ಗುರಿಯನ್ನು 600 ಕಿ.ಮೀ. ದೂರದಲ್ಲಿ ಪತ್ತೆ ಹಚ್ಚುವ ಹಾಗೂ 400 ಕಿ.ಮೀ. ವ್ಯಾಪ್ತಿಯಲ್ಲಿ ಅದನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.







