ಐದು ವರ್ಷಗಳ ಅಮಾನತಿಗೆ ತೆರೆ : ಚೀನಾದ ಪ್ರವಾಸಿಗರಿಗೆ ಭಾರತದ ವೀಸಾ ಮರು ಜಾರಿ

ಸಾಂದರ್ಭಿಕ ಚಿತ್ರ | NDTV
ಹೊಸದಿಲ್ಲಿ: ಗಾಲ್ವಾನ್ ಕಣಿವೆಯ ಘಟನೆಯ ನಂತರ ಚೀನಾಗೆ ವಿಧಿಸಲಾಗಿದ್ದ ನಿರ್ಬಂಧಕ್ಕೆ ತೆರೆ ಬೀಳುತ್ತಿದ್ದು, ಅಲ್ಲಿನ ನಾಗರಿಕರಿಗೆ ಭಾರತವು ಪ್ರವಾಸಿ ವೀಸಾ ವಿತರಣೆಯನ್ನು ಐದು ವರ್ಷಗಳ ಬಳಿಕ ಮರುಪ್ರಾರಂಭಿಸಿದೆ. ದ್ವಿಪಕ್ಷೀಯ ಸಂಬಂಧಗಳನ್ನು ಸಾಮಾನ್ಯಗೊಳಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆ ಎಂದು ರಾಜತಾಂತ್ರಿಕ ವಲಯಗಳು ಅಂದಾಜಿಸಿವೆ.
ಕೋವಿಡ್ ನಂತರ ಕುಂಠಿತವಾಗಿದ್ದ ಸಂಚಾರ ಮತ್ತು ವಿನಿಮಯಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ವೀಸಾ ಮರುಜಾರಿಯ ಆದೇಶ ಜಾರಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಜೂನ್ನಲ್ಲಿ ಕೈಲಾಸ–ಮಾನಸ ಸರೋವರ ಯಾತ್ರೆ ಐದು ವರ್ಷಗಳ ವಿರಾಮದ ನಂತರ ಪುನರಾರಂಭವಾಗಿತ್ತು. ಇದು ರಾಜತಾಂತ್ರಿಕ ಸಮರ ತಣ್ಣಗಾದ ಸೂಚನೆಯಾಗಿತ್ತು ಎನ್ನಲಾಗಿದೆ. ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷದ ಅಂಗವಾಗಿ ಎರಡೂ ದೇಶಗಳ ನಾಯಕರು ಪರಸ್ಪರ ಅಭಿನಂದನಾ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದರು.
ಜುಲೈನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಬೀಜಿಂಗ್ಗೆ ಭೇಟಿ ನೀಡಿ ಮಾತುಕತೆ ನಡೆಸಿ, “ಸಂಬಂಧಗಳು ಕ್ರಮೇಣ ಸಕಾರಾತ್ಮಕ ದಾರಿಗೆ ಸಾಗುತ್ತಿವೆ” ಎಂದು ಅಭಿಪ್ರಾಯಪಟ್ಟಿದ್ದರು. ಆಗಸ್ಟ್ನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೊಸದಿಲ್ಲಿಗೆ ಭೇಟಿ ನೀಡಿ ಗಡಿ ಸ್ಥಿತಿ ಮತ್ತು ಸಾಮಾನ್ಯೀಕರಣದ ಕುರಿತು ಚರ್ಚೆ ನಡೆಸಿದರು.
ಆಗಸ್ಟ್ 31ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಏಳು ವರ್ಷಗಳ ಬಳಿಕ ಚೀನಾಕ್ಕೆ ಭೇಟಿ ನೀಡಿ ಟಿಯಾಂಜಿನ್ನಲ್ಲಿ ನಡೆದ ಎಸ್ಸಿಒ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಇಬ್ಬರು ನಾಯಕರೂ “ಪ್ರತಿಸ್ಪರ್ಧಿಗಳಿಗಿಂತ ಪಾಲುದಾರಿಕೆ ಮುಖ್ಯ” ಎಂಬ ಸಂದೇಶವನ್ನು ಹಂಚಿಕೊಂಡಿದ್ದರು.
ನವೆಂಬರ್ 10ರಂದು ಐದು ವರ್ಷಗಳ ಬಳಿಕ ಭಾರತ–ಚೀನಾ ನೇರ ವಾಣಿಜ್ಯ ವಿಮಾನ ಸೇವೆ ಪುನರಾರಂಭಗೊಂಡಿದ್ದು, ಶಾಂಘೈಯಲ್ಲಿನ ಭಾರತದ ಕಾನ್ಸುಲ್ ಜನರಲ್ ಪ್ರತೀಕ್ ಮಾಥುರ್ ಹೊಸದಿಲ್ಲಿಯಿಂದ ಆಗಮಿಸಿದ ಮೊದಲ ಪ್ರಯಾಣಿಕರನ್ನು ಸ್ವಾಗತಿಸಿದರು.
ಪ್ರವಾಸಿ ವೀಸಾ ಮರುಜಾರಿಯೊಂದಿಗೆ ವ್ಯಾಪಾರ, ಪ್ರವಾಸೋದ್ಯಮ ಮತ್ತು ಜನರಿಂದ ಜನರಿಗೆ ಸಂಪರ್ಕ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.







