ಭಾರತ-ರಶ್ಯ ಬಾಂಧವ್ಯ ಕಾಲದ ಪರೀಕ್ಷೆಯನ್ನು ಗೆದ್ದಿದೆ: ಟ್ರಂಪ್ ಟೀಕೆಗೆ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ

ಡೊನಾಲ್ಡ್ ಟ್ರಂಪ್ | PC : PTI
ಹೊಸದಿಲ್ಲಿ,ಆ.1: ಭಾರತ ಹಾಗೂ ರಶ್ಯಗಳ ನಡುವಣ ಆರ್ಥಿಕ ಹಾಗೂ ವ್ಯೆಹಾತ್ಮಕ ಬಾಂಧವ್ಯಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಟುಟೀಕೆಗಳನ್ನು ಮಾಡಿದ ಬಳಿಕ ಹೊಸದಿಲ್ಲಿ-ಮಾಸ್ಕೋ ನಂಟಿನಲ್ಲಿ ಯಾವುದೇ ಒತ್ತಡ ಉಂಟಾಗಿರುವುದನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ನಿರಾಕರಿಸಿದೆ. ಭಾರತ ಹಾಗೂ ರಶ್ಯ ಸ್ಥಿರವಾದ ಹಾಗೂ ಕಾಲದ ಪರೀಕ್ಷೆಯನ್ನು ಗೆದ್ದ ಪಾಲುದಾರಿಕೆಯನ್ನು ಹೊಂದಿವೆ ಎಂದು ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಉತ್ಪನ್ನಗಳಿಗೆ ಶೇ.25ರಷ್ಟು ಸುಂಕವನ್ನು ವಿಧಿಸಿರುವುದು ಹಾಗೂ ಭಾರತ ಮತ್ತು ರಶ್ಯಾದೇಶಗಳ ಆರ್ಥಿಕತೆ ನಿರ್ಜೀವವಾಗಿದೆ ಎಂದು ಟೀಕಿಸಿರುವ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ.
ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಹೊಸದಿಲ್ಲಿಯಲ್ಲಿ ಶುಕ್ರವಾರ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ,‘‘ ವಿವಿಧ ದೇಶಗಳ ಜೊತೆಗಿನ ಭಾರತದ ದ್ವಿಪಕ್ಷೀಯ ಬಾಂಧವ್ಯಗಳು, ಆಯಾ ಅರ್ಹತೆಯನ್ನು ಆಧರಿಸಿ ನಿಂತಿವೆ. ಅದನ್ನು ತೃತೀಯ ದೇಶದ ದೃಷ್ಟಿಕೋನದಿಂದ ನೋಡಕೂಡದು ಎಂದು ಜೈಸ್ವಾಲ್ ಹೇಳಿದ್ದಾರೆ.
ಭಾರತ ಹಾಗೂ ರಶ್ಯಗಳನ್ನು ಟ್ರಂಪ್ ಅವರು ತನ್ನ ಸಾಮಾಜಿಕ ಜಾಲತಾಣ ವೇದಿಕೆ ಟ್ರೂಥ್ ಸೋಶಿಯಲ್ ನಲ್ಲಿ ಟೀಕಿಸಿದ ಮರುದಿನ ವಿದೇಶಾಂಗ ಸಚಿವಾಲಯ ಈ ಪ್ರತಿಕ್ರಿಯೆಯನ್ನು ನೀಡಿದೆ.
ಭಾರತ ಹಾಗೂ ರಶ್ಯ ಬಾಂಧವ್ಯಗಳ ಬಗ್ಗೆ ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಜೈಸ್ವಾಲ್ ಅವರು ಭಾರತ ಹಾಗೂ ಅಮೆರಿಕ ದೇಶಗಳ ನಡುವಿನ ಪಾಲುದಾರಿಕೆಯ ಮಹತ್ವವನ್ನು ಪುನರುಚ್ಚರಿಸಿದರು. ‘‘ ಭಾರತ ಹಾಗೂ ಅಮೆರಿಕವು ಸಮಗ್ರ ಜಾಗತಿಕ ವ್ಯೆಹಾತ್ಮಕ ಪಾಲುದಾರಿಕೆ, ಪ್ರಜಾತಾಂತ್ರಿಕ ಮೌಲ್ಯಗಳು ಹಾಗೂ ದೃಢವಾದ ಜನತಾ ಸಂಪರ್ಕಗಳನ್ನು ಹೊಂದಿವೆ. ಈ ಪಾಲುದಾರಿಕೆಯು ಹಲವಾರು ಪರಿವರ್ತನೆಗಳನ್ನು ಹಾಗೂ ಸವಾಲುಗಳನ್ನು ಎದುರಿಸಿದೆ. ಈ ಬಾಂಧವ್ಯವು ಮುಂದೆ ಸಾಗುವ ಬಗ್ಗೆ ತಮಗೆ ವಿಶ್ವಾಸವಿದೆ ಎಂದವರು ಹೇಳಿದರು.
ಒಂದು ದಿನ ಭಾರತವು ಪಾಕಿಸ್ತಾನದಿಂದ ತೈಲವನ್ನು ಖರೀದಿಸಲೂ ಬಹುದು ಎಂಬ ಟ್ರಂಪ್ ಅವರ ಹೇಳಿಕೆಯ ಬಗ್ಗೆಯೂ ಪ್ರತಿಕ್ರಿಯಿಸಲು ಜೈಸ್ವಾಲ್ ನಿರಾಕರಿಸಿದರು.
ಭಾರತದ ಇಂಧನ ಆಮದುಗಳ ಬಗ್ಗೆ ಅಭಿಪ್ರಾಯಿಸಿದ ಜೈಸ್ವಾಲ್ ಖರೀದಿ ನಿರ್ಧಾರಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ತೆಗೆದುಕೊಳ್ಳಲಾಗುತ್ತದೆ ಎಂದರು.
ಇತ್ತೀಚಿನ ತಿಂಗಳುಗಳಲ್ಲಿ ರಶ್ಯವು ಭಾರತದ ಅತ್ಯಧಿಕ ತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಭಾರತದ ಒಟ್ಟು ತೈಲ ಆಮದಿನ ಶೇ.35-40ರಷ್ಟು ರಶ್ಯದಿಂದಲೇ ಪೂರೈಕೆಯಾಗುತ್ತಿದೆ. ಉಕ್ರೇನ್ ಯುದ್ಧದ ಮೊದಲು ಇದ್ದುದಕ್ಕಿಂತ ರಶ್ಯದಿಂದ ಭಾರತದ ತೈಲದ ಆಮದಿನಲ್ಲಿ ಶೇ.0.2ರಷ್ಟು ಹೆಚ್ಚಳವಾಗಿದೆ.







