2024ರಲ್ಲಿ ಭಾರತದಲ್ಲಿ ಕೋಮು ಗಲಭೆಗಳಲ್ಲಿ ಶೇ.84ರಷ್ಟು ಏರಿಕೆ; ವರದಿ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಭಾರತದಲ್ಲಿ 2024ರಲ್ಲಿ 59 ಕೋಮು ಗಲಭೆಗಳು ನಡೆದಿದ್ದು, 2023ರ ಇಂತಹ 32 ಘಟನೆಗಳಿಗೆ ಹೋಲಿಸಿದರೆ ಶೇ.84ರಷ್ಟು ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಆ್ಯಂಡ್ ಸೆಕ್ಯುಲಿರಿಸಂ ತನ್ನ Hegemony and Demolitions: The Tale of Communal Riots in India in 2024 ಶೀರ್ಷಿಕೆಯ ವರದಿಯಲ್ಲಿ ತಿಳಿಸಿದೆ.
ಮಾನವ ಹಕ್ಕುಗಳ ಕಾರ್ಯಕರ್ತರಾದ ಇರ್ಫಾನ್ ಇಂಜಿನಿಯರ್,ನೇಹಾ ದಾಭಡೆ ಮತ್ತು ಮಿಥಿಲಾ ರಾವುತ್ ಅವರು ಸಿದ್ಧಪಡಿಸಿರುವ ವರದಿಯು ʼದಿ ಹಿಂದುʼ,ʼದಿ ಟೈಮ್ಸ್ ಆಫ್ ಇಂಡಿಯಾʼ,ʼಶಹಾಫತ್ʼ ಮತ್ತು ʼದಿ ಇಂಕಿಲಾಬ್ʼ ವೃತ್ತಪತ್ರಿಕೆಗಳ ಮುಂಬೈ ಆವೃತ್ತಿಗಳಲ್ಲಿಯ ವರದಿಗಳನ್ನು ಆಧರಿಸಿದೆ.
ಗೃಹ ವ್ಯವಹಾರಗಳ ಸಚಿವಾಲಯ ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ(ಎನ್ಸಿಆರ್ಬಿ) ದೇಶದಲ್ಲಿಯ ಕೋಮು ಗಲಭೆಗಳ ಸಮಗ್ರ ದಾಖಲೆಗಳನ್ನು ನಿರ್ವಹಿಸುತ್ತಿವೆಯಾದರೂ ಅದರ ಡೇಟಾವನ್ನು ನಿಯಮಿತವಾಗಿ ಪ್ರಕಟಿಸುವುದನ್ನು ನಿಲ್ಲಿಸಿವೆ ಎಂದು ಲೇಖಕರು ವರದಿಯಲ್ಲಿ ಬೆಟ್ಟು ಮಾಡಿದ್ದಾರೆ.
ಒಟ್ಟು 59 ಕೋಮುಗಲಭೆಗಳ ಪೈಕಿ ಅತ್ಯಂತ ಹೆಚ್ಚಿನ(12) ಘಟನೆಗಳು ಮಹಾರಾಷ್ಟ್ರದಲ್ಲಿ ನಡೆದಿದ್ದರೆ, ತಲಾ ಏಳು ಘಟನೆಗಳೊಂದಿಗೆ ಉತ್ತರ ಪ್ರದೇಶ ಮತ್ತು ಬಿಹಾರ ನಂತರದ ಸ್ಥಾನದಲ್ಲಿವೆ.
ಈ ಕೋಮುಗಲಭೆಗಳಲ್ಲಿ 10 ಮುಸ್ಲಿಮರು ಮತ್ತು ಮೂವರು ಹಿಂದುಗಳು ಸೇರಿದಂತೆ ಒಟ್ಟು 13 ಜನರು ಮೃತಪಟ್ಟಿದ್ದಾರೆ.
2024 ಎಪ್ರಿಲ್/ಮೇ ತಿಂಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯು ಆ ವರ್ಷ ದೇಶದಲ್ಲಿ ಕೋಮುಗಲಭೆಗಳ ಹೆಚ್ಚಳಕ್ಕೆ ಭಾಗಶಃ ಕಾರಣಗಳಾಗಿದೆ ಎಂದಿರುವ ವರದಿಯು,ಹೆಚ್ಚಿನ ಕೋಮುಗಲಭೆಗಳು(59ರಲ್ಲಿ 26) ಜನವರಿ 2024ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಸಂದರ್ಭದಲ್ಲಿ ನಡೆದಿದ್ದ ನಾಲ್ಕು ಘಟನೆಗಳು ಸೇರಿದಂತೆ ಧಾರ್ಮಿಕ ಉತ್ಸವಗಳು ಅಥವಾ ಮೆರವಣಿಗೆಗಳ ವೇಳೆ ಸಂಭವಿಸಿದ್ದವು. ಸರಸ್ವತಿ ಪೂಜಾ ವಿಗ್ರಹ ವಿಸರ್ಜನೆಗಳ ಸಂದರ್ಭದಲ್ಲಿ ಏಳು,ಗಣೇಶ ಉತ್ಸವಗಳಲ್ಲಿ ನಾಲ್ಕು ಮತ್ತು ಬಕ್ರೀದ್ ಸಂದರ್ಭದಲ್ಲಿ ಎರಡು ಕೋಮುಗಲಭೆಗಳು ನಡೆದಿದ್ದವು. ಕೋಮು ಉದ್ವಿಗ್ನತೆ ಮತ್ತು ರಾಜಕೀಯ ಕ್ರೋಡೀಕರಣವನ್ನು ಉತ್ತೇಜಿಸಲು ಧಾರ್ಮಿಕ ಆಚರಣೆಗಳನ್ನು ಬಳಸಿಕೊಳ್ಳುವುದು ಹೆಚ್ಚುತ್ತಿದೆ ಎನ್ನುವುದನ್ನು ಈ ಡೇಟಾ ಎತ್ತಿ ತೋರಿಸುತ್ತಿದೆ ಎಂದು ಹೇಳಿದೆ.
ಒಟ್ಟು ಕೋಮುಗಲಭೆಗಳ ಪೈಕಿ ಆರು ಘಟನೆಗಳು ವಿವಾದಿತ ಪ್ರಾರ್ಥನಾ ಸ್ಥಳಗಳಿಗೆ ಸಂಬಂಧಿಸಿವೆ. ಮಸೀದಿಗಳು ಮತ್ತು ದರ್ಗಾಗಳನ್ನು ಕಾನೂನುಬಾಹಿರವಾಗಿ ಅಥವಾ ಹಿಂದು ದೇವಸ್ಥಾನಗಳನ್ನು ನೆಲಸಮಗೊಳಿಸಿ ನಿರ್ಮಿಸಲಾಗಿದೆ ಎನ್ನುವುದು ಹಿಂದುತ್ವ ಗುಂಪುಗಳ ವಾದವಾಗಿದೆ.
ವಾರಣಾಸಿಯ ಜ್ಞಾನವಾಪಿ, ಮಥುರಾದ ಶಾಹಿ ಈದ್ಗಾ ಮತ್ತು ಜೌನಪುರದ ಅಟಾಲಾ ಸೇರಿದಂತೆ 10 ಮಸೀದಿಗಳು ಮತ್ತು ಸಮಾಧಿಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ದೇಶಾದ್ಯಂತದ ನ್ಯಾಯಾಲಯಗಳಲ್ಲಿ ಕನಿಷ್ಠ 18 ಮೊಕದ್ದಮೆಗಳು ಬಾಕಿಯುಳಿದುಕೊಂಡಿವೆ. ಪುರಾತನ ಹಿಂದು ದೇವಸ್ಥಾನಗಳನ್ನು ಕೆಡವಿ ಇವುಗಳನ್ನು ನಿರ್ಮಿಸಲಾಗಿದೆ ಎಂದು ಪ್ರಕರಣಗಳಲ್ಲಿಯ ಹಿಂದು ದಾವೆದಾರರು ಪ್ರತಿಪಾದಿಸಿದ್ದಾರೆ.
ಹೆಚ್ಚಾಗಿ ಮುಸ್ಲಿಮರು ಹಿಂಸಾಚಾರದ ಬಲಿಪಶುಗಳಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಕೋಮುಗಲಭೆಗಳ ಪ್ರಕರಣಗಳಲ್ಲಿ ಬುಲ್ಡೋಜರ್ ಕಾರ್ಯಾಚರಣೆಗಳು ಸೇರಿದಂತೆ ಮುಸ್ಲಿಮ್ ಸಮದಾಯವನ್ನು ಹೆಚ್ಚಾಗಿ ಗುರಿಯಾಗಿಸಿಕೊಳ್ಳುವ ಸರಕಾರದ ಪ್ರವೃತ್ತಿಯನ್ನು ತಾವು ಗಮನಿಸಿರುವುದಾಗಿ ವರದಿಯ ಲೇಖಕರು ಹೇಳಿದ್ದಾರೆ.
ಕೋಮುಗಲಭೆಗಳ ಸಂಖ್ಯೆಯಲ್ಲಿನ ಈ ಏರಿಕೆಯು ಯಾವುದೇ ಕೋಮು ಉದ್ವಿಗ್ನತೆಗಳಿಲ್ಲದ ಕಾರಣದಿಂದ ಭಾರತವು ಕೋಮುಗಲಭೆಗಳಿಂದ ಮುಕ್ತವಾಗಿದೆ ಮತ್ತು ತಾನು ಕೋಮು ಸೌಹಾರ್ದವನ್ನು ಕಾಯ್ದುಕೊಂಡಿದ್ದೇನೆ ಎಂಬ ಸರಕಾರದ ನಿರೂಪಣೆಯನ್ನು ಸುಳ್ಳಾಗಿಸಿದೆ ಎಂದು ವರದಿಯು ಹೇಳಿದೆ.