ನಾಳೆಯಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದಿಂದ ಬೃಹತ್ ವೈಮಾನಿಕ ತಾಲೀಮು

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಪಾಕಿಸ್ತಾನಕ್ಕೆ ತಾಗಿಕೊಂಡಿರುವ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಭಾರತವು ಮಹತ್ವದ ವೈಮಾನಿಕ ತಾಲೀಮುಗಳನ್ನು ನಡೆಸಲಿದೆಯೆಂದು ಮೂಲಗಳು ತಿಳಿಸಿವೆ.
ಭಾರತದ ಪಶ್ಚಿಮ ಗಡಿಪ್ರದೇಶದ ಸಮೀಪ ಮೇ 7 ಹಾಗೂ ಮೇ 8ರಂದು ನಡೆಯುವ ಎಲ್ಲಾ ವೈಮಾನಿಕ ಸಿಬ್ಬಂದಿಗೆ ಈ ಬಗ್ಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅವು ಹೇಳಿವೆ.
ಮುಖ್ಯವಾಗಿ ಈ ತಾಲೀಮು ಭಾರತೀಯ ವಾಯುಪಡೆಯ ನೈಋತ್ಯ ಕಮಾಂಡ್ ನ ವ್ಯಾಪ್ತಿಯಲ್ಲಿರುವ ರಾಜಸ್ಥಾನದ ಗಡಿಯಲ್ಲಿ ನಡೆಯಲಿದೆ.
ಭಾರತದ ಅಂತಾರಾಷ್ಟ್ರೀಯ ಗಡಿಯು ಗುಜರಾತ್ ನಿಂದ ಜಮ್ಮುವಿನ ಅಖನೂರುವರೆಗೆ 2400 ಕಿ.ಮೀ.ವರೆಗೆ ಹರಡಿದೆ. ಬುಧವಾರ ರಾತ್ರಿ 9:30ಕ್ಕೆ ಕವಾಯತು ಆರಂಭಗೊಳ್ಳಲಿದ್ದು, 5.5 ತಾಸುಗಳ ಆನಂತರ ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ ಈ ಪ್ರದೇಶದಲ್ಲಿ ಇತರ ವಿಮಾನಗಳ ನಿರ್ಗಮನ ಹಾಗೂ ಲ್ಯಾಂಡಿಂಗ್ ಅನ್ನು ಅಮಾನತಿನಲ್ಲಿರಿಸಲಾಗಿದೆ.
ಜಮ್ಮುಕಾಶ್ಮೀರದ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನವು ಪದೇ ಪದೇ ಕದನವಿರಾಮ ಉಲ್ಲಂಘಿಸುತ್ತಿರುವುದನ್ನು ಮುಂದುವರಿಸಿದ ಬೆನ್ನಲ್ಲೇ ಈ ಬೆಳವಣಿಗೆಯುಂಟಾಗಿದೆ.





