ಭಯೋತ್ಪಾದನೆ ನಿಲ್ಲಿಸಿ, ಇಲ್ಲವೇ ಜಾಗತಿಕ ಭೂಪಟದಲ್ಲಿ ನೀವಿರುವುದಿಲ್ಲ : ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಎಚ್ಚರಿಕೆ

ಉಪೇಂದ್ರ ದ್ವಿವೇದಿ |Photo Credit : ANI
ಜೈಪುರ, ಅ. 3: ಪಾಕಿಸ್ತಾನವು ಸರಕಾರಿ- ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಅದರ ಅಸ್ತಿತ್ವವೇ ಅಪಾಯಕ್ಕೆ ಒಳಪಡುತ್ತದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶುಕ್ರವಾರ ಆ ದೇಶಕ್ಕೆ ಕಟು ಎಚ್ಚರಿಕೆಯನ್ನು ನೀಡಿದ್ದಾರೆ.
ಮತ್ತೊಮ್ಮೆ ಕೆಣಕಿದರೆ ಭಾರತ ಇನ್ನು ಯಾವುದೇ ಸಂಯಮವನ್ನು ತೋರಿಸುವುದಿಲ್ಲ ಎಂದು ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹೇಳಿದರು.
‘‘ಜಾಗತಿಕ ಇತಿಹಾಸ ಮತ್ತು ಭೂಗೋಳದಲ್ಲಿನ ಸ್ಥಾನವನ್ನು ಮುಂದುವರಿಸಿಕೊಂಡು ಹೋಗಲು ಪಾಕಿಸ್ತಾನ ಬಯಸಿದರೆ, ಅದು ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಬೇಕು. ‘ಆಪರೇಶನ್ ಸಿಂಧೂರ 1.0’ ಸೇನಾ ಕಾರ್ಯಾಚರಣೆಯ ವೇಳೆ ನಾವು ಸಂಯಮ ತೋರಿಸಿದ್ದೇವೆ. ಆದರೆ, ಇನ್ನೊಮ್ಮೆ ಕೆಣಕಿದರೆ ನಾವು ಆ ಸಂಯಮವನ್ನು ತೋರಿಸುವುದಿಲ್ಲ. ನಾವು ಒಂದು ಹೆಜ್ಜೆ ಮುಂದೆ ಹೋಗುತ್ತೇವೆ’’ ಎಂದು ಸೇನಾ ಮುಖ್ಯಸ್ಥರು ಹೇಳಿದರು.
‘‘ಮುಂದಿನ ಸೇನಾ ಕಾರ್ಯಾಚರಣೆಯು ಎಷ್ಟು ಬಲಶಾಲಿಯಾಗಿರುತ್ತದೆಂದರೆ, ತನಗೆ ಇತಿಹಾಸ ಮತ್ತು ಭೂಗೋಳದಲ್ಲಿ ಸ್ಥಳ ಬೇಕೋ ಬೇಡವೋ ಎಂಬ ಬಗ್ಗೆ ಪಾಕಿಸ್ತಾನವು ಇನ್ನೊಮ್ಮೆ ಯೋಚನೆ ಮಾಡಬೇಕಾಗಬಹುದು’’ಎಂದು ಅವರು ಹೇಳಿದರು.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಎಪ್ರಿಲ್ 22ರಂದು ನಡೆಸಿದ ದಾಳಿಯಲ್ಲಿ 26 ಮಂದಿ ನಾಗರಿಕರು ಮೃತಪಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಮೇ ತಿಂಗಳ ಆರಂಭದಲ್ಲಿ ‘ಆಪರೇಶನ್ ಸಿಂಧೂರ’ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಶಿಬಿರಗಳ ಮೇಲೆ ದಾಳಿ ನಡೆಸಿತ್ತು.







