ಭಾರತೀಯ ಬ್ಯಾಂಕುಗಳು 2014-2024ರ ನಡುವೆ ರೈಟ್ ಆಫ್ ಮಾಡಿದ್ದ 16.6 ಲಕ್ಷ ಕೋಟಿ ರೂ.ಸಾಲಗಳ ಶೇ.16ರಷ್ಟು ಮಾತ್ರ ಮರುವಸೂಲಿ
ಆರ್ಟಿಐ ಉತ್ತರದಲ್ಲಿ ಮಾಹಿತಿ ಬಹಿರಂಗ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಭಾರತೀಯ ಬ್ಯಾಂಕುಗಳು ಎ.1, 2014ರಿಂದ ಸೆ.30, 2024ರವರೆಗೆ ಒಟ್ಟು 16,61,310 ಕೋಟಿ ರೂ.ಗಳ ಸಾಲಗಳನ್ನು ರೈಟ್ ಆಫ್ ಮಾಡಿದ್ದು, ಈ ಪೈಕಿ ಕೇವಲ 2,69,795 ಕೋಟಿ ರೂ.ಗಳನ್ನು ಮರುವಸೂಲಿ ಮಾಡಿವೆ. ನಾಗರಿಕ ಹಕ್ಕುಗಳ ಕಾರ್ಯಕರ್ತ ಪ್ರಫುಲ್ ಪಿ.ಸರ್ದಾ ಅವರು ಆರ್ಟಿಐ ಕಾಯ್ದೆಯಡಿ ಆರ್ಬಿಐನಿಂದ ಪಡೆದುಕೊಂಡಿರುವ ಉತ್ತರದಿಂದ ಈ ಮಾಹಿತಿ ಲಭ್ಯವಾಗಿದೆ ಎಂದು
ಸಾರ್ವಜನಿಕ ವಲಯದ ಬ್ಯಾಂಕುಗಳು 12,08,621 ಕೋಟಿ ರೂ.ಗಳ ಸಾಲಗಳನ್ನು ರೈಟ್ ಆಫ್ ಮಾಡಿದ್ದರೆ, ಖಾಸಗಿ ವಲಯದ ಬ್ಯಾಂಕುಗಳು(4,46,669 ಕೋಟಿ ರೂ.) ಮತ್ತು ನಗರ ಸಹಕಾರಿ ಬ್ಯಾಂಕುಗಳು(6,020 ಕೋಟಿ ರೂ.) ನಂತರದ ಸ್ಥಾನಗಳಲ್ಲಿವೆ.
ಈ ಎಲ್ಲ ವಲಯಗಳಲ್ಲಿ ಮರುವಸೂಲಿ ಪ್ರಮಾಣ ಕಡಿಮೆ ಮಟ್ಟದಲ್ಲಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು 2,16,547 ಕೋಟಿ ರೂ. ಮತ್ತು ಖಾಸಗಿ ವಲಯದ ಬ್ಯಾಂಕುಗಳು 53,248 ಕೋಟಿ ರೂ.ಗಳನ್ನು ಮರುವಸೂಲು ಮಾಡಿವೆ. ನಗರ ಸಹಕಾರಿ ಬ್ಯಾಂಕುಗಳ ಮರುವಸೂಲಿ ಮಾಹಿತಿ ಲಭ್ಯವಿಲ್ಲ ಎಂದು ಆರ್ಬಿಐ ತನ್ನ ಉತ್ತರದಲ್ಲಿ ತಿಳಿಸಿದೆ.
13,91,515 ಕೋಟಿ ರೂ.ಗಳು ಇನ್ನೂ ವಸೂಲಾಗದೇ ಉಳಿದುಕೊಂಡಿದ್ದು,ಒಟ್ಟು ಮರುವಸೂಲಿ ಪ್ರಮಾಣವು ಸುಮಾರು ಶೇ.16ರಷ್ಟಿದೆ.
ಕೇಂದ್ರ ಸಹಾಯಕ ವಿತ್ತ ಸಚಿವ ಪಂಕಜ ಚೌಧರಿಯವರು ನವಂಬರ್ 2024ರಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ್ದ ಉತ್ತರದಲ್ಲಿ,2023-24ನೇ ವಿತ್ತವರ್ಷದಲ್ಲಿ ಬ್ಯಾಂಕುಗಳು ರೈಟ್ ಆಫ್ ಮಾಡಿದ ಸಾಲಗಳ ಮೊತ್ತ 1.7 ಲಕ್ಷ ಕೋಟಿ ರೂ.ಗಳಾಗಿದ್ದು,ಇದು ವಿತ್ತವರ್ಷ 2020ರಲ್ಲಿ 2.34 ಲಕ್ಷ ಕೋಟಿ ರೂ.ಗೇರಿದ ನಂತರದ ಐದು ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ ಎಂದು ತಿಳಿಸಿದ್ದರು.
ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ ಪಂಜಾಬ್ ನ್ಯಾಷನಲ್ ಬ್ಯಾಂಕ್,ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಸ್ಬಿಐ ಅತ್ಯಂತ ಹೆಚ್ಚಿನ ಸಾಲಗಳನ್ನು ರೈಟ್ ಆಫ್ ಮಾಡಿದ್ದರೆ, ಖಾಸಗಿ ವಲಯದಲ್ಲಿ ಎಚ್ಡಿಎಫ್ಸಿ ಬ್ಯಾಂಕ್,ಎಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಈ ಸಾಲಿಗೆ ಸೇರಿವೆ.
ವಿತ್ತವರ್ಷ 24ರಲ್ಲಿ ಒಟ್ಟಾರೆ ರೈಟ್ಆಫ್ ಮೊತ್ತ ಕಡಿಮೆಯಾಗಿದ್ದರೂ,ಶೇ.20ಕ್ಕೂ ಅಧಿಕ ಬ್ಯಾಂಕುಗಳು ಹಿಂದಿನ ವರ್ಷಕ್ಕಿಂತ ಹೆಚ್ಚಿನ ರೈಟ್ ಆಫ್ಗಳನ್ನು ವರದಿ ಮಾಡಿವೆ.
ತಾಂತ್ರಿಕ ಮತ್ತು ವಿವೇಚನಾಶೀಲ ಅಥವಾ ಸಂಗ್ರಹ-ಸಂಬಂಧಿತ ಕಾರಣಗಳಿಂದಾಗಿ ಹೆಚ್ಚಿನ ರೈಟ್-ಆಫ್ಗಳು ಸಂಭವಿಸುತ್ತವೆ ಎಂದು ಆರ್ಬಿಐ ವಿವರಿಸಿದೆ. ರೈಟ್-ಆಫ್ ಎನ್ನುವುದು ಪ್ರಾಥಮಿಕವಾಗಿ ಬ್ಯಾಲೆನ್ಸ್ ಶೀಟ್ ನಿರ್ವಹಣೆ ಮತ್ತು ತೆರಿಗೆ ದಕ್ಷತೆಗಾಗಿ ಲೆಕ್ಕಪತ್ರ ಪರಿಪಾಠವಾಗಿರುವುದರಿಂದ ಸಾಲಗಳನ್ನು ರೈಟ್-ಆಫ್ ಮಾಡಿದ ಬಳಿಕವೂ ಅವುಗಳನ್ನು ಮರುವಸೂಲು ಮಾಡುವ ಹಕ್ಕನ್ನು ಬ್ಯಾಂಕುಗಳು ಹೊಂದಿರುತ್ತವೆ. ರೈಟ್-ಆಫ್ ಸಾಲಗಾರರನ್ನು ಅವರ ಮರುಪಾವತಿಯ ಹೊಣೆಗಾರಿಕೆಯಿಂದ ಮುಕ್ತಗೊಳಿಸುವುದಿಲ್ಲ.







