ಭಾರತೀಯ ಸಂಜಾತ ಗಣಿತ ತಜ್ಞೆ ನಳಿನಿ ಜೋಶಿಗೆ 2025ರ NSW ವರ್ಷದ ವಿಜ್ಞಾನಿ ಪ್ರಶಸ್ತಿ

Photo: University of Sydney
NSW ವರ್ಷದ ವಿಜ್ಞಾನಿ ಪ್ರಶಸ್ತಿಯನ್ನು ಪಡೆದ ಮೊದಲ ಗಣಿತಜ್ಞೆಯಾಗಿ ನಳಿನಿ ಜೋಶಿ ಆಸ್ಟ್ರೇಲಿಯಾದ ಕ್ವಾಂಟಮ್ ಭವಿಷ್ಯವನ್ನು ಭದ್ರಪಡಿಸುತ್ತಿದ್ದಾರೆ. ಜೊತೆಗೆ ಮುಂದಿನ ಪೀಳಿಗೆಯ ವಿಜ್ಞಾನ ಮತ್ತು ಗಣಿತದ ನಾಯಕರಿಗೆ ಸ್ಫೂರ್ತಿಯಾಗಿದ್ದಾರೆ.
ಭಾರತೀಯ ಮೂಲದ ಗಣಿತಜ್ಞೆ ಮತ್ತು ಪ್ರಾಧ್ಯಾಪಕರಾದ ನಳಿನಿ ಜೋಶಿ ಎಒ ಅವರನ್ನು 2025ರ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ (NSW) ವರ್ಷದ ವಿಜ್ಞಾನಿ ಎಂದು ಘೋಷಿಸಲಾಗಿದೆ. NSWನ ಅತ್ಯುನ್ನತ ವೈಜ್ಞಾನಿಕ ಗೌರವವನ್ನು ಮೊದಲ ಬಾರಿಗೆ ಗಣಿತ ತಜ್ಞರಿಗೆ ನೀಡಲಾಗಿದೆ. NSW ನೀಡುವ ವೈಜ್ಞಾನಿಕ ಪ್ರೀಮಿಯರ್ ಪ್ರಶಸ್ತಿಗಳ ಭಾಗವಾಗಿ ನಳಿನಿ ಜೋಶಿ ಈ ಗೌರವವನ್ನು ಪಡೆದಿದ್ದಾರೆ.
ನಳಿನಿ ಜೋಶಿ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಅನ್ವಯಿಕ ಗಣಿತಶಾಸ್ತ್ರದ ಮುಖ್ಯಸ್ಥರು ಮತ್ತು ಪಾಯ್ನೆ–ಸ್ಕಾಟ್ ಪ್ರೊಫೆಸರ್ ಆಗಿದ್ದಾರೆ. ಇಂಟೆಗ್ರೇಬಲ್ ಸಿಸ್ಟಮ್ಸ್ನಲ್ಲಿ ಅವರು ನಡೆಸಿದ ಪ್ರವರ್ತಕ (ಮೊದಲ ಶೋಧಕ) ಸಂಶೋಧನಾ ಕಾರ್ಯಗಳಿಗೆ ಪ್ರಸಿದ್ಧರಾಗಿದ್ದಾರೆ. ಅವರ ಸಂಶೋಧನೆ ಹವಾಮಾನ ವಿಜ್ಞಾನದಿಂದ ಹಿಡಿದು ಫೈಬರ್ ಆಪ್ಟಿಕ್ಸ್ವರೆಗಿನ ವಿವಿಧ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುವ ಸಂಕೀರ್ಣ ಗಣಿತ ವಿನ್ಯಾಸಗಳ ಆಳವಾದ ಅಧ್ಯಯನವನ್ನು ಒಳಗೊಂಡಿದೆ.
ನಳಿನಿ ಜೋಶಿ ಮ್ಯಾನ್ಮಾರ್ ನಲ್ಲಿ ಜನಿಸಿದ್ದಾರೆ. ನಂತರ ಅವರ ಕುಟುಂಬ ಆಸ್ಟ್ರೇಲಿಯಾಗೆ ವಲಸೆ ಹೋದ ಬಳಿಕ ಅಲ್ಲಿಯೇ ತಮ್ಮ ಬಾಲ್ಯವನ್ನು ಕಳೆದರು. ಸಿಡ್ನಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದ ಅವರು, ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಮುಗಿಸಿದರು. ಬಳಿಕ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಸಿಡ್ನಿ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡ ಮೊದಲ ಮಹಿಳಾ ಗಣಿತ ಪ್ರಾಧ್ಯಾಪಕರಾಗಿದ್ದಾರೆ.
ಗಣಿತ ಸಮಸ್ಯೆಗಳ ಪರಿಹಾರಕ್ಕೆ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಿದವರಾಗಿ ನಳಿನಿ ಜೋಶಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಕ್ವಾಂಟಮ್ ಕ್ರಿಪ್ಟೋಗ್ರಫಿ ಕ್ಷೇತ್ರದಲ್ಲಿ ತಮ್ಮ ಅನುಭವವನ್ನು ತೊಡಗಿಸಿಕೊಂಡಿದ್ದಾರೆ. ಕ್ವಾಂಟಮ್ ಕಂಪ್ಯೂಟರ್ಗಳು ಜಾಗತಿಕ ಸೈಬರ್ ಭದ್ರತೆಗೆ ತರುವ ಸವಾಲುಗಳನ್ನು ನಿರ್ವಹಿಸುವ ಕ್ಷೇತ್ರದಲ್ಲೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
“ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಬಳಿ ಸ್ಮಾರ್ಟ್ಫೋನ್ಗಳೇ ಇರಲಿಲ್ಲ. ಕಾಫಿ ಕುಡಿಯುವುದರಿಂದ ಹಿಡಿದು ಬ್ಯಾಂಕ್ ಬ್ಯಾಲೆನ್ಸ್ವರೆಗೂ ಎಲ್ಲವನ್ನೂ ನಾವು ವಿಭಿನ್ನ ರೀತಿಯಲ್ಲಿ ನಿರ್ವಹಿಸುತ್ತಿದ್ದೆವು. ಮುಂದಿನ ಇಪ್ಪತ್ತು ವರ್ಷಗಳಲ್ಲಿ ನಾವು ಕ್ವಾಂಟಮ್ ಚಾಲಿತ ಸಾಧನಗಳ ಮೂಲಕ ಕ್ವಾಂಟಮ್ ಹಣಗಳೊಂದಿಗೆ ವ್ಯವಹರಿಸುವ ಸ್ಥಿತಿಗೆ ತಲುಪುತ್ತೇವೆ. ಆದರೆ ಆ ಭವಿಷ್ಯದಲ್ಲಿ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಕುರಿತು ಕೈಗಾರಿಕಾ ಕ್ಷೇತ್ರದಲ್ಲಿ ಕನಿಷ್ಠ ಜ್ಞಾನವೂ ಇಲ್ಲ. ಆಸ್ಟ್ರೇಲಿಯಾದಲ್ಲಿ ಈ ವಿಷಯದಲ್ಲಿ ಪರಿಣತಿ ಪಡೆದವರು ಡಜನ್ಗೂ ಕಡಿಮೆ ಮಂದಿ ಮಾತ್ರ ಇದ್ದಾರೆ,” ಎಂದು ಅವರು ಹೇಳಿದ್ದಾರೆ.
ಅವರ ಪ್ರಕಾರ ಕ್ವಾಂಟಮ್ ಭವಿಷ್ಯಕ್ಕೆ ಸಿದ್ಧವಾಗಲು ಗಣಿತ ಅತ್ಯಂತ ಮುಖ್ಯವಾಗಿದೆ. ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಗಣಿತದ ಪ್ರಾಧ್ಯಾಪಕರಾಗಿ ಅನೇಕ ಯುವ ಸಂಶೋಧಕರಿಗೆ ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಸೇವೆಗೆ 2018ರಲ್ಲಿ ಯುರೇಕಾ ಪ್ರಶಸ್ತಿ ಪಡೆದಿದ್ದಾರೆ. 2016ರಲ್ಲಿ ಆಫಿಸರ್ ಆಫ್ ದ ಆರ್ಡರ್ ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಅವರು ಆಸ್ಟ್ರೇಲಿಯಾ ಅಕಾಡೆಮಿ ಆಫ್ ಸೈನ್ಸಸ್ನ ಸದಸ್ಯರಾಗಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಗಣಿತ ಒಕ್ಕೂಟದ ಮೊದಲ ಆಸ್ಟ್ರೇಲಿಯನ್ ಉಪಾಧ್ಯಕ್ಷರಾಗಿದ್ದಾರೆ.







