ಭಾರತೀಯ ತಟ ರಕ್ಷಣಾ ಪಡೆಯಿಂದ 1,800 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶ

ಸಾಂದರ್ಭಿಕ ಚಿತ್ರ - ANI
ಹೊಸದಿಲ್ಲಿ: ಭಾರತೀಯ ತಟ ರಕ್ಷಣಾ ಪಡೆ (ಐಸಿಜಿ)ಯು ಗುಜರಾತ್ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ದ ಜೊತೆಗೆ ಶನಿವಾರ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ 300 ಕೆಜಿಗೂ ಅಧಿಕ ಮಾದಕ ದ್ರವ್ಯ ಮೆತಾಂಫೆಟಮೈನ್ನ್ನು ವಶಪಡಿಸಿಕೊಂಡಿದೆ. ಇದರ ಮೌಲ್ಯ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 1,800 ಕೋಟಿ ರೂ. ಎಂಬುದಾಗಿ ಅಂದಾಜಿಸಲಾಗಿದೆ.
‘‘ಗುಜರಾತ್ ಎಟಿಎಸ್ ನೀಡಿದ ಮಾಹಿತಿಯ ಆಧಾರದಲ್ಲಿ, ಉತ್ತರ ಮಹಾರಾಷ್ಟ್ರ/ದಕ್ಷಿಣ ಗುಜರಾತ್ ಪ್ರದೇಶದಲ್ಲಿ ಬಹು-ಉದ್ದೇಶ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದ್ದ ಭಾರತೀಯ ತಟ ರಕ್ಷಣಾ ಪಡೆಯ ಹಡಗನ್ನು ಮಾದಕ ದ್ರವ್ಯ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಅಂತರ್ರಾಷ್ಟ್ರೀಯ ಸಮುದ್ರ ಗಡಿ ರೇಖೆಗೆ ಸಮೀಪದಲ್ಲಿ ಹಡಗೊಂದು ಸರಕನ್ನು ಇನ್ನೊಂದು ಹಡಗಿಗೆ ವರ್ಗಾಯಿಸಲು ಅಣಿಯಾಗುತ್ತಿರುವುದನ್ನು ಪತ್ತೆಹಚ್ಚಲಾಯಿತು’’ ಎಂದು ತಟ ರಕ್ಷಣಾ ಪಡೆ ಸೋಮವಾರ ತಿಳಿಸಿದೆ.
ತಟ ರಕ್ಷಣಾ ಪಡೆಯ ಹಡಗು ತನ್ನತ್ತ ಧಾವಿಸುತ್ತಿರುವುದನ್ನು ಕಂಡ ಆ ಹಡಗು ತನ್ನ ಸರಕನ್ನು ಸಮುದ್ರಕ್ಕೆ ಎಸೆದು ಅಂತರ್ರಾಷ್ಟ್ರೀಯ ಸಮುದ್ರ ಗಡಿಯತ್ತ ಪರಾರಿಯಾಯಿತು ಎಂದು ಅದು ಹೇಳಿತು.
‘‘ಎಸೆಯಲಾದ ಸರಕನ್ನು ತೆಗೆಯಲು ಸಮುದ್ರ ದೋಣಿಯೊಂದನ್ನು ನಿಯೋಜಿಸಲಾಯಿತು ಹಾಗೂ ತಟ ರಕ್ಷಣಾ ಪಡೆಯು ಹಡಗು ಶಂಕಿತ ಹಡಗಿನ ಬೆನ್ನತ್ತಿತು. ಆದರೆ, ಆ ಹಡಗು ಸಮುದ್ರ ಗಡಿಯನ್ನು ದಾಟಿ ಪರಾರಿಯಾಗುವಲ್ಲಿ ಯಶಸ್ವಿಯಾಯಿತು. ಆದಾಗ್ಯೂ, ಮಾದಕ ದ್ರವ್ಯವನ್ನು ಸಮುದ್ರದಿಂದ ವಶಪಡಿಸಿಕೊಳ್ಳುವಲ್ಲಿ ತಟ ರಕ್ಷಣಾ ಪಡೆಯು ಯಶಸ್ವಿಯಾಯಿತು’’ ಎಂದು ಅದು ತಿಳಿಸಿದೆ.