ಗಾಝಾ ನರಮೇಧಕ್ಕೆ ಇಸ್ರೇಲ್ ಬಳಸುತ್ತಿರುವುದು ಅದಾನಿ ನಿರ್ಮಿತ ಡ್ರೋನ್!

File Photo: PTI
ಹೊಸದಿಲ್ಲಿ: ಹೈದರಾಬಾದ್ ನಲ್ಲಿರುವ ಅದಾನಿ - ಎಲ್ಬಿಟ್ ಅಡ್ವಾನ್ಸ್ಡ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಹರ್ಮ್ಸ್ 900 ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಎಂಡ್ಯೂರೆನ್ಸ್ (MALE) ಡ್ರೋನ್ ಅನ್ನು ತಯಾರಿಸುತ್ತದೆ. ಇದನ್ನು ಇಸ್ರೇಲ್ ಮಿಲಿಟರಿ ಗಾಝಾದಲ್ಲಿ ಕಣ್ಗಾವಲು ಮತ್ತು ತನ್ನ ಗುರಿಗಳ ಮೇಲಿನ ನಿಖರ ದಾಳಿಗಳಿಗಾಗಿ ನಿಯೋಜಿಸಿದೆ ಎಂದು ಸೆಂಟರ್ ಫಾರ್ ಫೈನಾನ್ಸಿಯಲ್ ಅಕೌಂಟೆಬಿಲಿಟಿ ಸಂಸ್ಥೆಯು ಪ್ರಕಟಿಸಿರುವ ವರದಿ ಹೇಳಿದೆ.
Profit and Genocide: Indian Investments in Israel ('ಲಾಭ ಮತ್ತು ನರಮೇಧ: ಇಸ್ರೇಲ್ ನಲ್ಲಿ ಭಾರತೀಯ ಹೂಡಿಕೆಗಳು') ಎಂಬ ಶೀರ್ಷಿಕೆಯ ವರದಿಯು, ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಭಾರತೀಯ ಉದ್ಯಮಗಳು ಗಾಝಾದಲ್ಲಿ ಇಸ್ರೇಲ್ ನ ಆಕ್ರಮಣ ಮತ್ತು ನರಮೇಧದಲ್ಲಿ ಹೇಗೆ ಭಾಗಿಯಾಗಿವೆ ಎಂದು ವಿವರಿಸಿದೆ.
"ಯುದ್ಧ ಅಪರಾಧಗಳ ಕುರಿತು ಜಾಗತಿಕವಾಗಿ ಖಂಡನೆ ವ್ಯಕ್ತವಾಗುತ್ತಿದ್ದರೂ, ಭಾರತೀಯ ಉದ್ಯಮಗಳು ಇಸ್ರೇಲ್ ನ ರಕ್ಷಣಾ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆಗಳನ್ನು ಮುಂದುವರೆಸಿವೆ. ಇದು ನಾಗರಿಕರ ವಿರುದ್ಧ ನಡೆಯುವ ಹಿಂಸಾಚಾರವನ್ನು ಪರೋಕ್ಷವಾಗಿ ಸಮರ್ಥಿಸುತ್ತದೆ", ಎಂದು ವರದಿಯ ಲೇಖಕಿ ಹಾಜಿರಾ ಪುತ್ತಿಗೆ ಹೇಳುತ್ತಾರೆ.
ವರದಿ ಪ್ರಕಾರ, ಭಾರತೀಯ ಉದ್ಯಮಗಳು ಕೇವಲ ವ್ಯಾಪಾರ ಪಾಲುದಾರರಲ್ಲ. ಅವು ಇಸ್ರೇಲ್ ನ ಆಕ್ರಮಣದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ಒಂದೆಡೆ ಫೆಲೆಸ್ತೀನ್ ಗೆ ಭಾರತವು ಐತಿಹಾಸಿಕವಾಗಿ ಬೆಂಬಲ ನೀಡುತ್ತಿದೆ. ಇನ್ನೊಂದೆಡೆ ಇಸ್ರೇಲ್ಗೆ ಭಾರತದ ಉದ್ಯಮಗಳು ಆರ್ಥಿಕ ಸಹಕಾರ ನೀಡುತ್ತಿರುವುದರಲ್ಲಿ ಹೆಚ್ಚಳ ಕಂಡುಬರುತ್ತಿದೆ. ಇದು ಪರಸ್ಪರ ವಿರೋಧಾಭಾಸವನ್ನು ತೋರಿಸುತ್ತಿದೆ.
ರಕ್ಷಣೆ ಮತ್ತು ತಂತ್ರಜ್ಞಾನದಿಂದ ಕೃಷಿ, ಕಾರ್ಮಿಕ ಮತ್ತು ಮೂಲಸೌಕರ್ಯದವರೆಗೆ, ಭಾರತೀಯ ಬಂಡವಾಳವು ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆಗಳು ಮತ್ತು ವಸಾಹತುಶಾಹಿ ಆಡಳಿತದಲ್ಲಿ ಹೂಡಿಕೆಯಾಗಿದೆ.
ಗಾಝಾದಲ್ಲಿ ನರಮೇಧವು ಹೆಚ್ಚುತ್ತಿದ್ದರೂ ಬಲವಾದ ವ್ಯಾಪಾರ ಸಂಬಂಧವನ್ನು ಸ್ಥಾಪಿಸುವ ಮೂಲಕ, ಭಾರತದಲ್ಲಿ ಇಸ್ರೇಲ್ ನ ಹೂಡಿಕೆಗಳೂ ಸಮಾನವಾಗಿಯೇ ಹೆಚ್ಚಳ ಕಂಡಿದೆ. ಈ ತಿಂಗಳ ಆರಂಭದಲ್ಲಿ ಭಾರತ ಸರ್ಕಾರವು ಇಸ್ರೇಲ್ ನೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ) ಗೆ ಸಹಿ ಹಾಕಿತು. ಇದು ಗಾಝಾದಲ್ಲಿ ಇಸ್ರೇಲ್ ನ ನರಮೇಧ ಹಾಗು ಫೆಲೆಸ್ತೀನ್ ಮೇಲಿನ ಆಕ್ರಮಣದಲ್ಲಿ ಭಾರತದ ಪಾಲು ಇರುವುದಕ್ಕೆ ಸಾಕ್ಷ್ಯವೆಂಬಂತೆ ಕಂಡು ಬರುತ್ತಿದೆ.
ಇಸ್ರೇಲ್ ನ ಒಟ್ಟು ಶಸ್ತ್ರಾಸ್ತ್ರ ರಫ್ತಿನಲ್ಲಿ (2016–2021) ಭಾರತದ ಪಾಲು 40–45% ರಷ್ಟಿದೆ.
ಭಾರತವು ಇಸ್ರೇಲ್ ನ ಅತಿದೊಡ್ಡ ರಕ್ಷಣಾ ಖರೀದಿದಾರರಲ್ಲಿ ಒಂದಾಗಿದೆ.
ಹೈದರಾಬಾದ್ ನಲ್ಲಿರುವ ಅದಾನಿ-ಎಲ್ಬಿಟ್ ಅಡ್ವಾನ್ಸ್ಡ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಹರ್ಮ್ಸ್ 900 ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಎಂಡ್ಯೂರೆನ್ಸ್ (MALE) ಡ್ರೋನ್ ಅನ್ನು ತಯಾರಿಸುತ್ತದೆ. ಇದನ್ನು ಇಸ್ರೇಲ್ ಮಿಲಿಟರಿ ಗಾಝಾದಲ್ಲಿ ಕಣ್ಗಾವಲು ಮತ್ತು ತನ್ನ ಗುರಿಗಳ ಮೇಲಿನ ನಿಖರ ದಾಳಿಗಳಿಗಾಗಿ ನಿಯೋಜಿಸಿದೆ.
ಅದಾನಿ ಪೋರ್ಟ್ಸ್ ಸಂಸ್ಥೆ ಇಸ್ರೇಲ್ ನ ಹೈಫಾ ಬಂದರನ್ನು 1.18 ಬಿಲಿಯನ್ ಡಾಲರ್ ಗೆ ಸ್ವಾಧೀನ ಪಡಿಸಿಕೊಂಡಿದೆ.
ಇಸ್ರೇಲ್ ನ ಅತ್ಯಂತ ನಿಬಿಡ ವಾಣಿಜ್ಯ ಬಂದರು ಆಗಿರುವ ಹೈಫಾ ಇಸ್ರೇಲ್ ನೌಕಾಪಡೆಯ ನೆಲೆಯೂ ಆಗಿದೆ.
ಭಾರತೀಯ ತಂತ್ರಜ್ಞಾನ ದೈತ್ಯ ಕಂಪೆನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS), ಇನ್ಫೋಸಿಸ್ ಮತ್ತು ರಿಲಯನ್ಸ್ ಜಿಯೋ ಇಸ್ರೇಲ್ ಗೆ ಡಿಜಿಟಲ್ ಸೇವೆಯನ್ನು ಒದಗಿಸುತ್ತಿವೆ. ಫೆಲೆಸ್ತೀನ್ ನಾಗರಿಕರ ಮೇಲಿನ ಸಾಮೂಹಿಕ ಕಣ್ಗಾವಲು ಮತ್ತು ಮುನ್ಸೂಚಕ ಪೊಲೀಸಿಂಗ್ ಅನ್ನು ಸಕ್ರಿಯಗೊಳಿಸಿದ್ದಕ್ಕಾಗಿ ಜಾಗತಿಕ ಟೀಕೆಗಳನ್ನು ಎದುರಿಸಿರುವ ಅಮೆಝಾನ್ ಮತ್ತು ಮೈಕ್ರೋಸಾಫ್ಟ್ ಅನ್ನು ಒಳಗೊಂಡ ಕ್ಲೌಡ್ ಉಪಕ್ರಮವಾದ ಪ್ರಾಜೆಕ್ಟ್ ನಿಂಬಸ್ ನೊಂದಿಗೆ TCS ಸಂಪರ್ಕ ಹೊಂದಿದೆ.
ಕೃಷಿಯಲ್ಲಿ, ಜೈನ್ ಇರಿಗೇಷನ್ ನ ಅಂಗಸಂಸ್ಥೆ ನಾನ್ ಡಾನ್ ಜೈನ್ ವೆಸ್ಟ್ ಬ್ಯಾಂಕ್ ಮತ್ತು ಗೋಲನ್ ಹೈಟ್ಸ್ ನಲ್ಲಿರುವ ಅಕ್ರಮ ಇಸ್ರೇಲ್ ವಸಾಹತುಗಳಿಗೆ ಹನಿ ನೀರಾವರಿ ಮತ್ತು ನೀರಿನ ವ್ಯವಸ್ಥೆಗಳನ್ನು ಪೂರೈಸುತ್ತದೆ. 2022 ರಲ್ಲಿ, ಜೈನ್ ತನ್ನ ಜಾಗತಿಕ ನೀರಾವರಿ ವ್ಯವಹಾರದ ಒಂದು ಭಾಗವನ್ನು FIMI (ಫಸ್ಟ್ ಇಸ್ರೇಲ್ ಮೆಜ್ಜನೈನ್ ಇನ್ವೆಸ್ಟರ್ಸ್ ಲಿಮಿಟೆಡ್) ಒಡೆತನದ ರಿವುಲಿಸ್ ಜೊತೆಗೆ ಇಸ್ರೇಲ್ ನ ಮಿಲಿಟರಿ ಮತ್ತು ಜೈಲು ಕೈಗಾರಿಕೆಗಳೊಂದಿಗೆ ವಿಲೀನಗೊಳಿಸಿತು.
ಇಸ್ರೇಲ್ ನ ನೀರು ಸಂಸ್ಕರಣಾ ಕಂಪೆನಿ ಐಡಿಇ ಟೆಕ್ನಾಲಜಿಸ್ ಭಾರತದಲ್ಲಿ ಹಲವಾರು ನಿರ್ಲವಣೀಕರಣ ಪ್ಲಾಂಟ್ ಗಳನ್ನು ನಿರ್ಮಿಸಿದೆ. ಇಸ್ರೇಲ್ ನಲ್ಲಿ ಪ್ರಧಾನ ಕಚೇರಿ ಇರುವ ತಹಲ್ ಗ್ರೂಪ್ ಕರ್ನಾಟಕದಲ್ಲಿ ಗ್ರಾಮೀಣ ನೀರು ಸರಬರಾಜು ಜಾಲ ನಿರ್ವಹಿಸಲು 74 ಮಿಲಿಯನ್ ಡಾಲರ್ ಯೋಜನೆಯನ್ನು ಪಡೆದಿದೆ.
ಭಾರತದ ಮುಂಬೈ ಹಾಗು ಪಂಜಾಬ್ ಗಳಲ್ಲಿ ಇಸ್ರೇಲ್ನ ರಾಷ್ಟ್ರೀಯ ನೀರಿನ ಕಂಪೆನಿಯಾದ ಮೆಕೊರೊಟ್ ನೊಂದಿಗೆ ಪಾಲುದಾರಿಕೆ ಇದೆ. ಈ ಕಂಪೆನಿಯು ಗಾಝಾದಲ್ಲಿ ಪೈಪ್ ಲೈನ್ ಹರಿವನ್ನು ಕಡಿಮೆ ಮಾಡುವ ಮೂಲಕ ಮತ್ತು ನಾಗರಿಕರಿಗೆ ಸುರಕ್ಷಿತ ಕುಡಿಯುವ ನೀರನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದೆ. ಆ ಮೂಲಕ ಗಾಝಾದಲ್ಲಿ ನೀರಿನ ಬರ ಉಂಟುಮಾಡಿದೆ.
2023ರಲ್ಲಿ, ಫೆಲೆಸ್ತೀನ್ ನ ಕಾರ್ಮಿಕ ಪರವಾನಗಿಗಳನ್ನು ಅಮಾನತುಗೊಳಿಸಿದ ನಂತರ, 42,000 ಭಾರತೀಯರನ್ನು ನಿರ್ಮಾಣ ಮತ್ತು ನರ್ಸಿಂಗ್ ಕೆಲಸಗಳಿಗೆ ಇಸ್ರೇಲ್ ಗೆ ನೇಮಕ ಮಾಡಲಾಗಿದೆ. ಆ ದೇಶಕ್ಕೆ ಕಳುಹಿಸಿಕೊಡಲಾಗಿದೆ. ಇದರಿಂದ ಫೆಲೆಸ್ತೀನ್ ನ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬಿದ್ದಿದೆ.
"ಗಾಝಾದಲ್ಲಿ 65,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅದರಲ್ಲಿ 20,000 ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದಾರೆ. ಗುರಿಯಾಗಿಸಿ ಹತ್ಯೆಯಾದವರಲ್ಲಿ ಬಹುತೇಕರು ನಾಗರಿಕರು. ಹಸಿವು ಮತ್ತು ನೀರಿನ ಬರ ಅವರ ಬದುಕನ್ನು ಕಸಿದುಕೊಂಡಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ಸರ್ಕಾರ ಮತ್ತು ಉದ್ಯಮಗಳು ಇಸ್ರೇಲ್ನೊಂದಿಗೆ ವ್ಯವಹಾರ ಮುಂದುವರಿಸುವುದು ಮಾನವೀಯತೆಗೆ ವಿರುದ್ಧವಾಗಿದೆ", ಎಂದು ಸೆಂಟರ್ ಫಾರ್ ಫೈನಾನ್ಸಿಯಲ್ ಅಕೌಂಟೆಬಿಲಿಟಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜೋ ಅಥಿಯಾಲಿ ಹೇಳುತ್ತಾರೆ.







