ವೈದ್ಯರೇಕೆ ಹೊಣೆಯಾಗುತ್ತಾರೆ?: ಕೆಮ್ಮಿನ ಸಿರಪ್ ತಯಾರಕರಿಗೆ ಕ್ಲೀನ್ ಚಿಟ್ ಪ್ರಶ್ನಿಸಿದ ಭಾರತೀಯ ವೈದ್ಯಕೀಯ ಸಂಘ

ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ: ಮಧ್ಯಪ್ರದೇಶದಲ್ಲಿ 16 ಮಕ್ಕಳ ಸಾವಿಗೆ ಕಾರಣವಾದ ವಿವಾದಾತ್ಮಕ ಕೆಮ್ಮಿನ ಸಿರಪ್ ಪ್ರಕರಣದಲ್ಲಿ ಡಾ.ಪ್ರವೀಣ್ ಸೋನಿಯವರ ಬಂಧನಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಘವು(ಐಎಂಎ),ಈ ವಿಷಯವನ್ನು ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ ಎಂದು ಬಲ್ಲ ಮೂಲವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ಸೋಮವಾರ ವರದಿ ಮಾಡಿದೆ.
ಡಾ.ಸೋನಿಯವರನ್ನು ಮಾತ್ರ ಏಕೆ ಹೊಣೆಯಾಗಿಸಲಾಗಿದೆ ಎಂದು ಪ್ರಶ್ನಿಸಿರುವ ಐಎಂಎ, ಚಿಕಿತ್ಸಾ ಶಿಷ್ಟಾಚಾರಗಳನ್ನು ಅನುಸರಿಸಲಾಗಿತ್ತು ಮತ್ತು ವೈದ್ಯರ ಮೇಲೆ ಮಾತ್ರ ಆರೋಪ ಹೊರಿಸಬಾರದು ಎಂದು ಒತ್ತಿ ಹೇಳಿದೆ. ಡಾ.ಸೋನಿಯವರ ಬಿಡುಗಡೆಗೆ ತಾನು ಒತ್ತಾಯಿಸುತ್ತೇನೆ ಎಂದು ಅದು ತಿಳಿಸಿದೆ.
ಔಷಧಿ ಕಂಪನಿಗೆ ಕ್ಲೀನ್ ಚಿಟ್ ನೀಡುವ ಸರಕಾರದ ನಿರ್ಧಾರವನ್ನೂ ಐಎಂಎ ಪ್ರಶ್ನಿಸಿದೆ.
ಈ ನಡುವೆ ಸ್ಥಳೀಯ ಅಧಿಕಾರಿಗಳನ್ನು ಭೇಟಿಯಾಗಿ ಪರಿಸ್ಥಿತಿಯನ್ನು ಅರಿತುಕೊಳ್ಳಲು ಸತ್ಯಶೋಧನಾ ತಂಡವೊಂದನ್ನು ಮಧ್ಯಪ್ರದೇಶದ ಛಿಂದ್ವಾರಾಕ್ಕೆ ರವಾನಿಸಲಾಗಿದೆ.
ಛಿಂದ್ವಾರಾದಲ್ಲಿ 14 ಸಾವುಗಳು ಸಂಭವಿಸಿದ್ದು,ಉಳಿದ ಎರಡು ಶಂಕಿತ ಸಾವುಗಳು ಬೇತುಲ್ನಲ್ಲಿ ವರದಿಯಾಗಿವೆ. ಮಕ್ಕಳ ಈ ಸಾವುಗಳು ಆಕ್ರೋಶವನ್ನು ಸೃಷ್ಟಿಸಿದ್ದು,ಕೋಲ್ಡ್ರಿಫ್ ಕೆಮ್ಮಿನ ಸಿರಪ್ನ ಉತ್ಪಾದನೆ ಮತ್ತು ಅದನ್ನು ಶಿಫಾರಸು ಮಾಡುವಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಪೋಲಿಸರು ಪರಾಸಿಯಾ ಸಮುದಾಯ ಆರೋಗ್ಯ ಕೇಂದ್ರದ ಬ್ಲಾಕ್ ವೈದ್ಯಕೀಯ ಅಧಿಕಾರಿ ಅಂಕಿತ್ ಸಹ್ಲಾಮ್ ಅವರ ದೂರಿನ ಮೇರೆಗೆ ಡಾ.ಸೋನಿ ಮತ್ತು ಕೋಲ್ಡ್ರಿಫ್ನ ತಯಾರಕ ಶ್ರೀಸನ್ ಫಾರ್ಮಾಸ್ಯೂಟಿಕಲ್ಸ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡ ಬಳಿಕ ಶನಿವಾರ ಪೋಲಿಸರು ಡಾ.ಸೋನಿಯವರನ್ನು ಬಂಧಿಸಿದ್ದಾರೆ.
ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿಸಿದ್ದ ಆರೋಪದಲ್ಲಿ ಪರಾಸಿಯಾದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಕ್ಕಳ ತಜ್ಞ ಡಾ.ಸೋನಿ ಅವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ ಯಾದವ ಆವರ ಆದೇಶದ ಮೇರೆಗೆ ತಕ್ಷಣ ಅಮಾನತು ಮಾಡಲಾಗಿತ್ತು.
ಡಾ.ಸೋನಿ ಸಾವನ್ನಪ್ಪಿದ್ದ ಹೆಚ್ಚಿನ ಮಕ್ಕಳಿಗೆ ಕೋಲ್ಡ್ರಿಫ್ ಸಿರಪ್ನ್ನು ಶಿಫಾರಸು ಮಾಡಿದ್ದರು ಎನ್ನುವುದು ತನಿಕೆಯಿಂದ ಬೆಳಕಿಗೆ ಬಂದಿದೆ. ಸಿರಪ್ನಲ್ಲಿ ಶೇ.48.6ರಷ್ಟು ಡೈಎಥಿಲೀನ್ ಗ್ಲೈಕಾಲ್ ಇತ್ತು ಎನ್ನುವುದನ್ನು ಪ್ರಯೋಗಾಲಯದ ವರದಿಯು ದೃಢಪಡಿಸಿದ್ದು,ಇದು ಸೇವಿಸಿದರೆ ಮೂತ್ರಪಿಂಡ ವೈಫಲ್ಯ ಮತ್ತು ಸಾವಿಗೆ ಕಾರಣವಾಗುವ ಅತ್ಯಂತ ವಿಷಕಾರಿ ರಾಸಾಯನಿಕವಾಗಿದೆ.
ಕೋಲ್ಡ್ರಿಫ್ ಸೇವನೆಯಿಂದ ರಾಜಸ್ಥಾನದಲ್ಲಿಯೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ.







