Indian Railway | ಬಾಕಿ ವಸೂಲಿ, ಟಿಕೆಟೇತರ ಆದಾಯದಲ್ಲಿ ಹಿಂದೆ ಬಿದ್ದ ರೈಲ್ವೆ: CAG

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ: ದೊಡ್ಡ ಪ್ರಮಾಣದಲ್ಲಿ ಭೂ ಹಿಡುವಳಿಗಳನ್ನು ಹೊಂದಿದ್ದರೂ ಮತ್ತು 269 ಪ್ರಕರಣಗಳಲ್ಲಿ ಖಾಸಗಿಯವರಿಂದ 2023ರ ಮಾರ್ಚ್ ವರೆಗೆ ಬಾಕಿ ಇರುವ 4087 ಕೋಟಿ ರೂಪಾಯಿ ವಸೂಲಿ ಮಾಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ತನ್ನ ಟಿಕೆಟೇತರ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಿಲ್ಲ ಎಂದು ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ವರದಿ ಆಕ್ಷೇಪ ವ್ಯಕ್ತಪಡಿಸಿದೆ.
ದುರ್ಬಲ ಕಣ್ಗಾವಲು ಮತ್ತು ಕಾನೂನು ಜಾರಿ ವ್ಯವಸ್ಥೆ ಇದಕ್ಕೆ ಕಾರಣ ಎಂದು ವರದಿ ವಿಶ್ಲೇಷಿಸಿದೆ.
ಪರಿಶೋಧನಾ ವರದಿಯಲ್ಲಿ ರೈಲ್ವೆಯ ಹೆಚ್ಚುವರಿ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗೆ ಅಭಿವೃದ್ಧಿಪಡಿಸುವ ಮತ್ತು ಆದಾಯ ಹೆಚ್ಚಿಸುವ, ರೈಲ್ವೆಯ ಖಾಲಿ ಭೂಮಿ ಮತ್ತು ಬಹು ಚಟುವಟಿಕೆಯ ನಿರ್ಮಾಣಗಳಿಂದ ಆದಾಯ ಸಂಗ್ರಹಿಸುವ ಹೊಣೆ ಹೊತ್ತಿರುವ ಆರ್ಎಲ್ಡಿಎಯ ಎರಡು ಚಟುವಟಿಕೆಗಳತ್ತ ಗಮನ ಹರಿಸಲಾಗಿದೆ.
2018-19 ರಿಂದ 2022-23 ನೇ ವರ್ಷದ ವರೆಗಿನ ಅಂಕಿ ಅಂಶಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. 2023ರ ವೇಳೆಗೆ ರೈಲ್ವೆ 4.88 ಲಕ್ಷ ಹೆಕ್ಟೇರ್ ಭೂಮಿಯನ್ನು ಹೊಂದಿದ್ದು, ಈ ಪೈಕಿ 62,740 ಹೆಕ್ಟೇರ್ ಖಾಲಿ ಬಿದ್ದಿದೆ. ಈ ಪೈಕಿ ಕೇವಲ ಶೇಕಡ 1.6 ಅಂದರೆ 997.8 ಹೆಕ್ಟೇರ್ ಪ್ರದೇಶವನ್ನು ಮಾತ್ರ ಆರ್ಎಲ್ಡಿಎಗೆ ವಹಿಸಲಾಗಿದೆ. ಈ ಅವಧಿಯಲ್ಲಿ ರೈಲ್ವೆ ಮಂಡಳಿ 657 ಹೆಕ್ಟೇರ್ ಗಳಿಗಾಗಿ 188 ಪ್ರಸ್ತಾವನೆಗಳನ್ನು ಸ್ವೀಕರಿಸಿದೆ. ಈ ಪೈಕಿ 59 ಪ್ರಸ್ತಾವನೆಗಳನ್ನು ಆರ್ಎಲ್ಡಿಎಗೆ ವಹಿಸಲಾಗಿದ್ದು, 35 ಜಾಗಗಳನ್ನು ಆರ್ಎಲ್ಡಿಎ ಡೆವಲಪರ್ ಗಳಿಗೆ ವಹಿಸಿದೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿದ್ದರೂ, 2023ರ ಮಾರ್ಚ್ ವರೆಗೆ ಕೇವಲ ಶೇ. 8.8 ರಷ್ಟು ಭೂಮಿಯನ್ನು ಮಾತ್ರ ಅಭಿವೃದ್ಧಿಗಾಗಿ ನೀಡಲಾಗಿದೆ. ಹಲವು ಪ್ರಕರಣಗಳಲ್ಲಿ ಭೂಮಿಯ ಶೀರ್ಷಿಕೆಯ ಸಮಸ್ಯೆ ಇತ್ಯರ್ಥವಾಗದೇ ಇರುವ, ಒತ್ತುವರಿ ಇರುವ ಮತ್ತು ಋಣಭಾರಗಳು ಇರುವ ಭೂಮಿಯನ್ನು ಆರ್ಎಲ್ಡಿಎಗೆ ವಹಿಸಲಾಗಿದೆ. ಇದರಿಂದಾಗಿ ಈ ಭೂಮಿಯಲ್ಲಿ ಆದಾಯ ಗಳಿಸುವುದು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ವ್ಯವಸ್ಥೆಯಲ್ಲಿನ ಮತ್ತು ಕಾರ್ಯಾಚರಣೆ ಸಮಸ್ಯೆಗಳಿಂದಾಗಿ ರೈಲ್ವೆ ಭೂಮಿ ನಗದೀಕರಣ ಮತ್ತು ಆದಾಯ ಗಳಿಕೆಯ ಸಾಧ್ಯತೆಗಳ ಮೇಲೆ ಪರಿಣಾಮ ಉಂಟಾಗಿದೆ ಎಂದು ವಿಶ್ಲೇಷಿಸಲಾಗಿದೆ.







