FY26 ರಲ್ಲಿ ಭಾರತೀಯ ರೈಲ್ವೇ ಎರಡು ಬಾರಿ ದರ ಏರಿಕೆ ಮಾಡಲು ಕಾರಣವೇನು?

ಸಾಂದರ್ಭಿಕ ಚಿತ್ರ | Photo Credit ; PTI
ಪ್ರಯಾಣಿಕರ ಸೇವೆಗಳಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು ಮತ್ತು ಸರಕು ಸಾಗಣೆ ಬಳಕೆದಾರರ ಮೇಲಿನ ಹೊರೆ ಕಡಿಮೆ ಮಾಡಲು ಭಾರತೀಯ ರೈಲ್ವೆ ಈ ಆರ್ಥಿಕ ವರ್ಷದಲ್ಲಿ ಎರಡು ಬಾರಿ ಪ್ರಯಾಣಿಕರ ದರವನ್ನು ಹೆಚ್ಚಿಸಿದೆ. ಮೊದಲ ಬಾರಿ ಜುಲೈನಲ್ಲಿ ಮತ್ತು ನಂತರ ಡಿಸೆಂಬರ್ ನಲ್ಲಿ ಈ ದರ ಏರಿಕೆ ಮಾಡಿತ್ತು. ಈ ದರ ಹೆಚ್ಚಳಗಳು ರಾಜಕೀಯ ಟೀಕೆಗೆ ಕಾರಣವಾಗಿದ್ದರೂ, ದರ ಪರಿಷ್ಕರಣೆ ಆರ್ಥಿಕವಾಗಿ ಅನಿವಾರ್ಯವೆಂದು ರೈಲ್ವೆ ವಾದಿಸಿದೆ.
ಎರಡು ಬಾರಿ ಹೆಚ್ಚಳ ಯಾಕೆ?
ಪ್ರಯಾಣಿಕರಿಗೆ ಏಕಾಏಕಿ ಭಾರೀ ಹೊರೆ ಬೀರುವಂತಾಗದೆ ಪ್ರಯಾಣಿಕರ ಸೇವೆಗಳ ಆರ್ಥಿಕ ಸುಸ್ಥಿರತೆಯನ್ನು ಸುಧಾರಿಸುವ ಉದ್ದೇಶದಿಂದ ಈ ದರ ಪರಿಷ್ಕರಣೆಗಳನ್ನು ಮಾಡಲಾಗಿದೆ. ಪ್ರಯಾಣಿಕರ ದರಗಳು ಇನ್ನೂ ಕಡಿಮೆ ಮಟ್ಟದಲ್ಲಿದ್ದರೂ, ಉದ್ಯೋಗಿಗಳ ಹೆಚ್ಚುತ್ತಿರುವ ವೆಚ್ಚಗಳು, ಪಿಂಚಣಿಗಳು, ಸುರಕ್ಷತಾ ಹೂಡಿಕೆಗಳು ಮತ್ತು ನೆಟ್ವರ್ಕ್ ವಿಸ್ತರಣೆಯ ಹೊಣೆಯನ್ನು ರೈಲ್ವೆ ಭರಿಸುತ್ತಿದೆ. ಆದ್ದರಿಂದ ಒಂದೇ ಬಾರಿ ದರವನ್ನು ತೀವ್ರವಾಗಿ ಹೆಚ್ಚಿಸುವ ಬದಲು, ಜುಲೈ ಮತ್ತು ಡಿಸೆಂಬರ್ ನಲ್ಲಿ ಹಂತ ಹಂತವಾಗಿ ದರ ಏರಿಕೆ ಮಾಡಲಾಗಿದೆ.
ಕಳೆದ ದಶಕದಲ್ಲಿ ರೈಲ್ವೆ ತನ್ನ ಸಂಪರ್ಕ ಜಾಲ ಮತ್ತು ಕಾರ್ಯಾಚರಣೆಗಳನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಹೆಚ್ಚಿದ ಕಾರ್ಯಾಚರಣೆಗಳಿಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಾಗಿದ್ದು, ನೌಕರರ ವೆಚ್ಚವು 1.15 ಲಕ್ಷ ಕೋಟಿ ರೂ.ಗೆ ಏರಿದೆ. ಪಿಂಚಣಿ ವೆಚ್ಚವು 60,000 ಕೋಟಿ ರೂ.ಗೆ ತಲುಪಿದೆ. 2024–25ರಲ್ಲಿ ಕಾರ್ಯಾಚರಣೆಯ ಒಟ್ಟು ವೆಚ್ಚವು 2.63 ಲಕ್ಷ ಕೋಟಿ ರೂ.ಆಗಿದೆ. ಈ ವೆಚ್ಚವನ್ನು ಪೂರೈಸಲು ದರ ಪರಿಷ್ಕರಣೆ ಅಗತ್ಯವಾಗಿದೆ ಎಂದು ರೈಲ್ವೆ ತಿಳಿಸಿದೆ.
ಸುರಕ್ಷತೆ ಮತ್ತು ಸುಧಾರಿತ ಕಾರ್ಯಾಚರಣೆಗಳ ಮೇಲಿನ ಹೂಡಿಕೆಗಳಿಂದಾಗಿ ರೈಲ್ವೆಗಳು ಸುರಕ್ಷತೆಯನ್ನು ಗಣನೀಯವಾಗಿ ಸುಧಾರಿಸಿವೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ಸರಕು ಸಾಗಣೆ ರೈಲ್ವೆಯಾಗಿದೆ ಎಂದು ರೈಲ್ವೆ ಹೇಳಿದೆ.
ಡಿಸೆಂಬರ್ ನಲ್ಲಿ ನಡೆದ ಇತ್ತೀಚಿನ ದರ ಏರಿಕೆಯು ಕಳೆದ 11 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿದ ನಾಲ್ಕನೇ ದರ ಪರಿಷ್ಕರಣೆಯಾಗಿದೆ. ಇದಕ್ಕೂ ಮೊದಲು ಜೂನ್ 2014, ಜನವರಿ 2020 ಮತ್ತು ಜುಲೈ 2025ರಲ್ಲಿ ದರ ಹೆಚ್ಚಳ ಮಾಡಲಾಗಿತ್ತು.
►ಜುಲೈ 1ರ ದರ ಪರಿಷ್ಕರಣೆಯಲ್ಲಿ ಬದಲಾಗಿದ್ದು ಏನು?
* ಸಾಮಾನ್ಯ ಸೆಕೆಂಡ್ ಕ್ಲಾಸ್ (ಎಸಿ ಅಲ್ಲದ): ಪ್ರತಿ ಕಿಮೀಗೆ +0.5 ಪೈಸೆ
* ಸ್ಲೀಪರ್ ಕ್ಲಾಸ್: ಪ್ರತಿ ಕಿಮೀಗೆ +0.5 ಪೈಸೆ
* ಸಾಮಾನ್ಯ ಫಸ್ಟ್ ಕ್ಲಾಸ್: ಪ್ರತಿ ಕಿಮೀಗೆ +0.5 ಪೈಸೆ
* ಮೇಲ್/ಎಕ್ಸ್ಪ್ರೆಸ್ (ಎಸಿ ಅಲ್ಲದ): ಪ್ರತಿ ಕಿಮೀಗೆ +1 ಪೈಸೆ
* ಎಸಿ ಕ್ಲಾಸ್ಗಳು: ಪ್ರತಿ ಕಿಮೀಗೆ +2 ಪೈಸೆ
ಉಪನಗರ ಸೇವೆಗಳು ಮತ್ತು ಸೀಸನ್ ಟಿಕೆಟ್ಗಳ ಮೇಲೆ ಯಾವುದೇ ದರ ಏರಿಕೆ ಮಾಡಲಾಗಿಲ್ಲ. ಕಡಿಮೆ ದೂರದ ಸಾಮಾನ್ಯ ಪ್ರಯಾಣಗಳಿಗೆ ಸ್ಲ್ಯಾಬ್ ಆಧಾರಿತ ವಿನಾಯಿತಿಗಳನ್ನು ಅನ್ವಯಿಸಲಾಗಿದೆ.
►ಡಿಸೆಂಬರ್ 26ರ ದರ ಪರಿಷ್ಕರಣೆಯಲ್ಲಿ ಏನೇನಾಗಿದೆ?
ಡಿಸೆಂಬರ್ 26ರಿಂದ ಜಾರಿಗೆ ಬಂದ ಎರಡನೇ ದರ ಪರಿಷ್ಕರಣೆ ಎಲ್ಲಾ ಉಪನಗರವಲ್ಲದ ಪ್ಯಾಸೆಂಜರ್ ರೈಲುಗಳಿಗೆ ಅನ್ವಯಿಸುತ್ತದೆ:
* ಸಾಮಾನ್ಯ ಎರಡನೇ ದರ್ಜೆ (ಎಸಿ ಅಲ್ಲದ): 215 ಕಿಮೀ ಮೀರಿದ ಪ್ರಯಾಣಕ್ಕೆ ಪ್ರತಿ ಕಿಮೀಗೆ +1 ಪೈಸೆ
* ಮೇಲ್/ಎಕ್ಸ್ಪ್ರೆಸ್ (ಎಸಿ ಅಲ್ಲದ): ಪ್ರತಿ ಕಿಮೀಗೆ +2 ಪೈಸೆ
* ಮೇಲ್/ಎಕ್ಸ್ಪ್ರೆಸ್ ಎಸಿ ಕ್ಲಾಸ್ಗಳು: ಪ್ರತಿ ಕಿಮೀಗೆ +2 ಪೈಸೆ ಏರಿಕೆ ಮಾಡಲಾಗಿದೆ.
215 ಕಿಮೀ ವರೆಗಿನ ಸಾಮಾನ್ಯ ಎರಡನೇ ದರ್ಜೆ ಪ್ರಯಾಣಕ್ಕೆ ಯಾವುದೇ ದರ ಏರಿಕೆ ಮಾಡಿಲ್ಲ.
500 ಕಿಮೀ ಎಸಿ ಅಲ್ಲದ ಪ್ರಯಾಣಕ್ಕೆ ಸುಮಾರು 10 ರೂ. ಹೆಚ್ಚುವರಿ ವೆಚ್ಚವಾಗುತ್ತದೆ. ದಿಲ್ಲಿ-ಮುಂಬೈ ಎಸಿ ಕ್ಲಾಸ್ ಪ್ರಯಾಣವು ಸುಮಾರು 28 ರೂ. ದುಬಾರಿಯಾಗುತ್ತದೆ. ಡಿಸೆಂಬರ್ 26ರ ಮೊದಲು ಬುಕ್ ಮಾಡಲಾದ ಟಿಕೆಟ್ಗಳಿಗೆ ಹಳೆಯ ದರಗಳೇ ಅನ್ವಯಿಸುತ್ತವೆ.
►ಪ್ರಯಾಣಿಕ ದರಗಳಿಗೆ ಭಾರೀ ಸಬ್ಸಿಡಿ
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಪ್ರಯಾಣಿಕರ ಪ್ರಯಾಣಕ್ಕೆ 100 ರೂ. ವೆಚ್ಚವಾದರೆ, ರೈಲ್ವೆ 55 ರೂ.ಮಾತ್ರ ವಸೂಲಿ ಮಾಡುತ್ತದೆ. ಅಂದರೆ ಸುಮಾರು 45% ಸಬ್ಸಿಡಿ ನೀಡಲಾಗುತ್ತಿದೆ.
* ಪ್ರತಿ ಪ್ರಯಾಣಿಕ–ಕಿಮೀ ವೆಚ್ಚ: 1.38 ರೂ.
* ಪ್ರತಿ ಕಿಮೀಗೆ ವಿಧಿಸಲಾಗುವ ದರ: 0.73 ರೂ.
* ವಾರ್ಷಿಕ ಪ್ರಯಾಣಿಕರ ಸಬ್ಸಿಡಿ: ಸುಮಾರು 60,000 ಕೋಟಿ ರೂ.
ಆರ್ಥಿಕ ವರ್ಷ 2023ರಲ್ಲಿ, ರೈಲ್ವೆಗಳು ಪ್ರಯಾಣಿಕರ ಸೇವೆಗಳಿಂದ ಗಳಿಸಿದ ಪ್ರತಿ 100 ರೂ.ಗೆ 181 ರೂ. ಖರ್ಚು ಮಾಡಿವೆ. ಈ ನಷ್ಟವನ್ನು ನೇರವಾಗಿ ಪ್ರಯಾಣಿಕರಿಂದ ವಸೂಲಿ ಮಾಡಲಾಗುವುದಿಲ್ಲ. ಬದಲಾಗಿ, ಹೆಚ್ಚಿನ ಸರಕು ಶುಲ್ಕಗಳಿಂದ ಅದನ್ನು ಸರಿದೂಗಿಸಲಾಗುತ್ತಿದೆ.
ದಶಕಗಳಿಂದ ಭಾರತೀಯ ರೈಲ್ವೆ ಪ್ರಯಾಣಿಕರ ದರಗಳಿಗೆ ಸಬ್ಸಿಡಿ ನೀಡಲು ಸರಕು ಸಾಗಣೆ ಆದಾಯವನ್ನು ಅವಲಂಬಿಸಿದೆ. ಆದರೆ ಹೆಚ್ಚುವರಿ ಸರಕು ಸಾಗಣೆಯಿಂದ ಪ್ರಯಾಣಿಕರ ಕೊರತೆಯನ್ನು ನೀಗಿಸುವ ನಿರೀಕ್ಷೆ ಫಲಕಾರಿಯಾಗಿಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇದರಿಂದ ಪ್ರಯಾಣಿಕರ ದರ ಪರಿಷ್ಕರಣೆ ಅನಿವಾರ್ಯವಾಗಿದೆ.
ಬಿಹಾರದ ಬೇಲಾದ ರೈಲ್ ವೀಲ್ ಪ್ಲಾಂಟ್ನ ಮಾಜಿ ಮುಖ್ಯಸ್ಥ ಮತ್ತು ವಂದೇ ಭಾರತ್ ಎಕ್ಸ್ಪ್ರೆಸ್ನ ವಿನ್ಯಾಸ ಹಾಗೂ ಉತ್ಪಾದನಾ ತಂಡದ ಮಾಜಿ ಮುಖ್ಯಸ್ಥ ಶುಭ್ರಂಶು ಅವರ ಪ್ರಕಾರ, “ಹೆಚ್ಚುವರಿ ಸರಕು ಸಾಗಣೆಯಿಂದ ಕೊರತೆಯನ್ನು ಪೂರೈಸಲಾಗುವುದು ಎಂಬ ನಿರಂತರ ಭರವಸೆ ನಿಜವಾಗಿಲ್ಲ. ಸರಕು ಸಾಗಣೆ ಸುಂಕದಲ್ಲಿನ ಹೆಚ್ಚಳವನ್ನು ತೆಗೆದುಹಾಕಲಾಗಿದೆ. ಆದ್ದರಿಂದ ಪ್ರಾಯೋಗಿಕ ವಿಧಾನದೊಂದಿಗೆ ಪ್ರಯಾಣಿಕರ ದರಗಳನ್ನು ಹೆಚ್ಚಿಸುವ ಅಗತ್ಯವಿದೆ.”
ಡಿಸೆಂಬರ್ ನ ದರ ಏರಿಕೆಯು FY26ರ ಉಳಿದ ಅವಧಿಯಲ್ಲಿ ಸುಮಾರು 600 ಕೋಟಿ ರೂ. ಹೆಚ್ಚುವರಿ ಆದಾಯವನ್ನು ತರುವ ನಿರೀಕ್ಷೆಯಿದೆ. ಇದು ಕಾರ್ಯಾಚರಣಾ ಅನುಪಾತವನ್ನು ಸುಧಾರಿಸಲು ಸಹಕಾರಿಯಾಗಲಿದೆ. FY26ರ ಕಾರ್ಯಾಚರಣಾ ಅನುಪಾತವನ್ನು 98.43% ಎಂದು ಅಂದಾಜಿಸಲಾಗಿದೆ.
►ನಿರ್ವಹಣಾ ವೆಚ್ಚಗಳ ಲೆಕ್ಕಾಚಾರ
* ಉದ್ಯೋಗಿ ವೆಚ್ಚ: 1.15 ಲಕ್ಷ ಕೋಟಿ ರೂ.
* ಪಿಂಚಣಿ ವೆಚ್ಚ: 60,000 ಕೋಟಿ ರೂ.
* ಒಟ್ಟು ನಿರ್ವಹಣಾ ವೆಚ್ಚ (FY25): 2.63 ಲಕ್ಷ ಕೋಟಿ ರೂ.
ಸಾಧಾರಣ ದರ ಏರಿಕೆ, ಲಾಭಗಳು ಮತ್ತು ಸುರಕ್ಷತಾ ಹೂಡಿಕೆಗಳೊಂದಿಗೆ, ಆಂತರಿಕ ನಷ್ಟವನ್ನು ಕಡಿಮೆ ಮಾಡುತ್ತದೆ. ವಾರ್ಷಿಕ ಬಜೆಟ್ ಬೆಂಬಲದ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತದೆ ಮತ್ತು ಸುರಕ್ಷತೆ, ಸಾಮರ್ಥ್ಯ ಹಾಗೂ ಸೇವಾ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ರೈಲ್ವೆಯ ಒಟ್ಟು ಆದಾಯದಲ್ಲಿ ಸುಮಾರು 65% ಸರಕು ಸಾಗಣೆ ಸೇವೆಗಳಿಂದ ಬರುತ್ತದೆ. ಉಳಿದ 35% ಪ್ರಯಾಣಿಕರ ಸೇವೆಗಳು, ಪಾರ್ಸೆಲ್ ಸೇವೆಗಳು ಮತ್ತು ಶುಲ್ಕೇತರ ಆದಾಯ ಮೂಲಗಳಿಂದ ಲಭಿಸುತ್ತದೆ.
ಸಂಸದೀಯ ಸಮಿತಿಯ ಇತ್ತೀಚಿನ ವರದಿಯ ಪ್ರಕಾರ, ಸರಕು ದರಗಳ ಕೊನೆಯ ಪರಿಷ್ಕರಣೆ ನವೆಂಬರ್ 2018ರಲ್ಲಿ ನಡೆಯಿತು. ಆ ನಂತರ ಕಾರ್ಯಾಚರಣಾ ವೆಚ್ಚಗಳು ವಾರ್ಷಿಕವಾಗಿ ಏರಿಕೆಯಾಗಿದ್ದರೂ, ಸರಕು ದರಗಳಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಭಾರತೀಯ ರೈಲ್ವೆ ಸಾಂಪ್ರದಾಯಿಕವಾಗಿ ಪ್ರಯಾಣಿಕರ ದರ ಪರಿಷ್ಕರಣೆಯಲ್ಲಿ ಸಂಯಮವನ್ನು ತೋರಿದೆ. ಆದರೆ ಲಾಭದಾಯಕವಲ್ಲದ ಹಲವು ಸೇವೆಗಳನ್ನು ನಿರಂತರವಾಗಿ ನಡೆಸುತ್ತಿರುವುದರಿಂದ ರೈಲ್ವೆಯ ಹಣಕಾಸಿನ ಮೇಲೆ ಭಾರೀ ಹೊರೆ ಉಂಟಾಗಿದೆ ಎಂದು ವರದಿ ತಿಳಿಸಿದೆ.
FY25ರಲ್ಲಿ ರೈಲ್ವೆಯ ಕಾರ್ಯಾಚರಣಾ ಅನುಪಾತ 98.9% ಆಗಿತ್ತು. FY26ರಲ್ಲಿ ಇದನ್ನು 98.43% ಎಂದು ಅಂದಾಜಿಸಲಾಗಿದೆ. FY25ರಲ್ಲಿ ಸುಮಾರು 7.3 ಬಿಲಿಯನ್ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಿದ್ದರೆ, FY26ರಲ್ಲಿ 7.6 ಬಿಲಿಯನ್ ಪ್ರಯಾಣಿಕರ ದಟ್ಟಣೆಯನ್ನು ರೈಲ್ವೆ ನಿರೀಕ್ಷಿಸಿದೆ.







