ಇರಾನ್ನಲ್ಲಿ ಮೂವರು ಭಾರತೀಯರು ನಾಪತ್ತೆ | ಇರಾನ್ನ ನೆರವು ಕೋರಿದ ಭಾರತ

ರಣಧೀರ್ ಜೈಸ್ವಾಲ್ | PTI
ಹೊಸದಿಲ್ಲಿ : ಇರಾನ್ನಲ್ಲಿ ಮೂವರು ಭಾರತೀಯರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಭಾರತ ಇರಾನ್ ಸರಕಾರದ ನೆರವು ಕೋರಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.
‘‘ನಾವು ಇರಾನ್ ಸರಕಾರದ ನೆರವು ಕೋರಿದ್ದೇವೆ. ಆದುದರಿಂದ ನಾವು ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಬಹುದು. ಕೆಲವು ಸಮಯದ ಹಿಂದೆ ಅವರು ಟೆಹ್ರಾನ್ ತಲುಪಿದ ಕೂಡಲೇ ಕುಟುಂಬದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದ್ದಾರೆ’’ ಎಂದು ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ನಾಪತ್ತೆಯಾದ ಮೂವರನ್ನು ಮಹಾರಾಷ್ಟ್ರದ ನಾಂದೇಡ್ನ ಯೋಗೇಶ್ ಪಂಚಾಲ್, ಮುಹಮ್ಮದ್ ಸಾದೀಕ್ ಹಾಗೂ ಸುಮೀತ್ ಸೂದ್ ಎಂದು ಗುರುತಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಮೂವರೂ ಪ್ರತ್ಯೇಕವಾಗಿ ಇರಾನ್ಗೆ ತೆರಳಿದ್ದಾರೆ. ಡಿಸೆಂಬರ್ ಆರಂಭದಲ್ಲಿ ಪಂಚಾಲ್ ತೆರಳಿದ್ದರು. ಅನಂತರ ಸಾದಿಕ್ ಪ್ರಯಾಣಿಸಿದ್ದರು. ಜನವರಿಯಲ್ಲಿ ಸೂದ್ ತೆರಳಿದ್ದರು.
ಒಣ ಹಣ್ಣು ಹಾಗೂ ಆ್ಯಪಲ್ಗಳನ್ನು ರಫ್ತು ಮಾಡುವ ಕಂಪೆನಿಯನ್ನು ಇತ್ತೀಚೆಗೆ ಆರಂಭಿಸಿದ ಬಳಿಕ ಪಶ್ಚಿಮ ಏಷ್ಯಾ ದೇಶದಲ್ಲಿ ಉದ್ಯಮದ ಅವಕಾಶಗಳನ್ನು ಅನ್ವೇಷಿಸಲು ಪಂಚಾಲ್ ಡಿಸೆಂಬರ್ 5ರಂದು ಮುಂಬೈಯಿಂದ ತೆಹ್ರಾನ್ಗೆ ಪ್ರಯಾಣಿಸಿದ್ದರು ಎಂದು ಪಂಚಾಲ್ನ ಕುಟುಂಬ ತಿಳಿಸಿದೆ.
33 ವರ್ಷದ ಪಂಚಾಲ್ ಮೂರು ದಿನಗಳು ನಮ್ಮೊಂದಿಗೆ ಸಂಪರ್ಕದಲ್ಲಿದ್ದರು. ಅನಂತರ ಅವರೊಂದಿಗಿನ ಸಂಪರ್ಕ ಕಡಿಯಿತು ಎಂದು ಅವರ ಕುಟುಂಬ ತಿಳಿಸಿದೆ.
‘‘ನಾನು ಅವರೊಂದಿಗೆ ದೂರವಾಣಿಯಲ್ಲಿ ಡಿಸೆಂಬರ್ 7ರಂದು ಸಂಜೆ ಕೊನೆಯದಾಗಿ ಮಾತನಾಡಿದ್ದೆ. ಅವರು ಆಗ ಜನನಿಬಿಡ ಸ್ಥಳದಲ್ಲಿ ಇರುವಂತೆ ಭಾಸವಾಗಿತ್ತು. ಅಲ್ಲದೆ, ಅವರು ತಾನು ಮತ್ತೆ ಕರೆ ಮಾಡುವುದಾಗಿ ಹೇಳಿದ್ದರು. ಆದರೆ, ಇದುವರೆಗೆ ಕರೆ ಮಾಡಿಲ್ಲ’’ ಎಂದು ಪಂಚಾಲ್ ಅವರ ಪತ್ನಿ ಶ್ರದ್ಧಾ ತಿಳಿಸಿದ್ದಾರೆ.
ತಾನು ಕಳೆದ ಎರಡು ದಿನಗಳಿಂದ ಪತಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಮತ್ತೆ ಮತ್ತೆ ಪ್ರಯತ್ನಿಸಿದೆ. ಆದರೆ, ಸಂಪರ್ಕ ಸಾಧ್ಯವಾಗಲಿಲ್ಲ. ಡಿಸೆಂಬರ್ 9ರಂದು ಮೊಬೈಲ್ ಸ್ವಿಚ್ ಆಫ್ ಆಯಿತು. ಅವರು ಡಿಸೆಂಬರ್ 11ರಂದು ಹಿಂದಿರುಗಲು ಟಿಕೆಟ್ ಮುಂಗಡ ಕಾಯ್ದಿರಿಸಿದ್ದರು. ಆದರೆ, ಅವರು ಹಿಂದೆ ಬಂದಿಲ್ಲ. ಇದು ಅವರ ಮೊದಲ ವಿದೇಶ ಪ್ರಯಾಣ ಎಂದು ಅವರು ಹೇಳಿದ್ದಾರೆ.
ನಾಪತ್ತೆಯಾದವರ ಮೂವರ ಕುಟುಂಬಗಳು ನಮ್ಮೊಂದಿಗೆ ಸಂಪರ್ಕದಲ್ಲಿವೆ. ಸಾಧ್ಯವಿರುವ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ನಾವು ಭರವಸೆ ನೀಡಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.







