ಕೆನಡಾದಲ್ಲಿ ಭಾರತೀಯರು ಅಸುರಕ್ಷಿತ: ನೂತನ ಹೈ ಕಮಿಷನರ್ ಆತಂಕ

ದಿನೇಶ್ ಪಟ್ನಾಯಕ್ PC: x.com/CNNnews18
ಒಟ್ಟಾವ: ಕೆನಡಾದಲ್ಲಿ ಭಾರತೀಯರ ಸುರಕ್ಷತೆ ಬಗ್ಗೆ ನೂತನ ಹೈಕಮಿಷನರ್ ಆಗಿ ನೇಮಕಗೊಂಡಿರುವ ದಿನೇಶ್ ಪಟ್ನಾಯಕ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. "ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ರಾಯಭಾರಿಯಾಗಿರುವ ನನಗೂ ಭದ್ರತೆ ಅಗತ್ಯವಾಗಿದೆ" ಎಂದು ಸಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
"ಇಲ್ಲಿರುವ ಭಾರತೀಯರಿಗೆ ಕೆನಡಾ ಸುರಕ್ಷಿತವೇ? ಕೆನಡಾ ಸ್ವತಃ ಸುರಕ್ಷಿತವೇ? ಏಕೆಂದರೆ ಕೆನಡಾ ಇದನ್ನು ಭಾರತೀಯರ ಸಮಸ್ಯೆಯಾಗಿ ನೋಡಬಾರದು. ಇದು ಕೆನಡಾದ ಸಮಸ್ಯೆ" ಎಂದು ಪಟ್ನಾಯಕ್ ವಿಶ್ಲೇಷಿಸಿದರು.
"ಕೆನಡಿಯನ್ನರೂ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಇದನ್ನು ನೀವು ನೋಡಿದ್ದೀರಾ? ಕೆನಡಾದ ಒಳಗೆ ಏನಾಗುತ್ತಿದೆ ಎಂಬ ಬಗ್ಗೆ ನಿಮಗೆ ಅರಿವು ಇದೆಯೇ? ವ್ಯಾಂಕೋವರ್ನಲ್ಲಿ ಇಂದು ಮೂರನೇ ಬಾರಿ ಒಂದು ರೆಸ್ಟೋರೆಂಟ್ ಮೇಲೆ ದಾಳಿ ನಡೆದಿದೆ. ರೆಸ್ಟೋರೆಂಟ್ ಮಾಲೀಕರಾಗಿರುವ ಭಾರತೀಯರೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ" ಎಂದು ಭಾರತೀಯ ಮೂಲದ ಕೆನಡಿಯನ್ ಪ್ರಜೆ ಕಪಿಲ್ ಶರ್ಮಾ ಕೆಫೆ ಮೇಲೆ ನಡೆದ ದಾಳಿಯನ್ನು ಉಲ್ಲೇಖಿಸಿದರು.
"ದಕ್ಷಿಣ ಏಷ್ಯನ್ನರು ಮತ್ತು ಭಾರತೀಯರು ಇಲ್ಲಿ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಅವರು ಸುರಕ್ಷಿತ ಎಂಬ ಭಾವನೆಯನ್ನು ಸೃಷ್ಟಿಸುವುದು ಅಗತ್ಯವೇ? ಇಲ್ಲಿ ಏನು ನಡೆಯುತ್ತಿದೆ? ಭಾರತದಲ್ಲಿ ಕೆನಡಾದ ಹೈಕಮಿಷನರ್ ಆಗಿರುವವರಿಗೆ ಭಾರತದಲ್ಲಿ ಭದ್ರತೆ ಅಗತ್ಯವಿಲ್ಲ. ಆದರೆ ಕೆನಡಾದಲ್ಲಿ ಭಾರತೀಯ ಹೈಕಮಿಷನರ್ಗೆ ಭದ್ರತೆಯ ಅಗತ್ಯವಿದೆ" ಎಂದು ಪಟ್ನಾಯಕ್ ವ್ಯಂಗ್ಯವಾಡಿದರು.





