ನಾವು ಹೃದಯಪೂರ್ವಕ ಭಾರತೀಯರು; ಮಗನಿಗೆ ಉಗ್ರರ ಸಂಪರ್ಕ ಇಲ್ಲ: ಮುಝಮ್ಮಿಲ್ ಶಕೀಲ್ ತಾಯಿ

Image Source : ANI/PTI
ಹೊಸದಿಲ್ಲಿ, ನ. 11: ಹರ್ಯಾಣದ ಫರೀದಾಬಾದ್ ನಲ್ಲಿ ಭಯೋತ್ಪಾದನಾ ಘಟಕವೊಂದನ್ನು ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕಾಶ್ಮೀರಿ ವೈದ್ಯ ಡಾ. ಮುಝಮ್ಮಿಲ್ ಶಕೀಲ್ ನ ತಾಯಿ, ಮಗನ ಇಂಥ ಚಟುವಟಿಕೆಗಳ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದಾರೆ.
360 ಕೆಜಿ ಸ್ಫೋಟಕ ಮತ್ತು ಮದ್ದುಗುಂಡನ್ನು ಫರೀದಾಬಾದ್ ನ ದೌಜ್ ಗ್ರಾಮದಲ್ಲಿರುವ ಆತನ ಬಾಡಿಗೆ ಮನೆಯಯಲ್ಲಿ ಪತ್ತೆಹಚ್ಚಿದ ಬಳಿಕ, ಪೊಲೀಸರು ಡಾ. ಮುಝಮ್ಮಿಲ್ ನನ್ನು ಸೋಮವಾರ ಬೆಳಗ್ಗೆ ಬಂಧಿಸಿದ್ದಾರೆ.
ದಿಲ್ಲಿಯ ಕೆಂಪು ಕೋಟೆಯ ಸಮೀಪ ನಡೆದ ಬಾಂಬ್ ಸ್ಫೋಟ ಮತ್ತು ಫರೀದಾಬಾದ್ ಭಯೋತ್ಪಾದನಾ ಘಟಕದ ನಡುವೆ ಇದೆ ಎನ್ನಲಾದ ನಂಟಿನ ಬಹಿರಂಗಗೊಂಡ ಬಳಿಕ, ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವನ ತಾಯಿ ನಸೀಮಾ, ತನ್ನ ಮಗನನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ತನ್ನ ಮಗ ಮನೆ ಬಿಟ್ಟು ತುಂಬಾ ಸಮಯವಾಯಿತು ಎಂದು ಅವರು ಹೇಳಿದ್ದಾರೆ. ‘‘ಅವನು ಸುಮಾರು ನಾಲ್ಕು ವರ್ಷಗಳ ಹಿಂದೆ ಮನೆ ಬಿಟ್ಟಿದ್ದಾನೆ. ಅವನು ದಿಲ್ಲಿಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಈ ಅವಧಿಯಲ್ಲಿ ನಮಗೆ ಅವನ ಬಗ್ಗೆ ಮಾಹಿತಿ ಇರಲಿಲ್ಲ. ಅವನ ಬಂಧನವಾದಾಗ, ನಮಗೆ ಬೇರೆಯವರಿಂದ ಆ ವಿಷಯ ತಿಳಿಯಿತು. ನಾವು ಅವನನ್ನು ಭೇಟಿಯಾಗಲು ಪ್ರಯತ್ನಿಸಿದೆವು. ಆದರೆ, ಪೊಲೀಸರು ನಮಗೆ ಅವಕಾಶ ನೀಡಲಿಲ್ಲ. ನನ್ನ ಇನ್ನೊಬ್ಬ ಮಗನನ್ನೂ ಪೊಲೀಸರು ಬಂಧಿಸಿದ್ದಾರೆ’’ ಎಂದು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.
‘‘ದಿಲ್ಲಿ ಸ್ಫೋಟ ಪ್ರಕರಣದಲ್ಲಿ ನನ್ನ ಮಗ ಆರೋಪಿ ಎಂದು ಅವರು ಹೇಳುತ್ತಿದ್ದಾರೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ನನ್ನ ಇಬ್ಬರೂ ಪುತ್ರರನ್ನು ಬಿಡುಗಡೆಗೊಳಿಸಬೇಕು ಎಂದಷ್ಟೇ ನಾನು ಬಯಸುತ್ತೇನೆ. ನಾವು ಹೃದಯಪೂರ್ವಕ ಭಾರತೀಯರು’’ ಎಂದರು.







