ಅಮೆರಿಕದಿಂದ ಕೈಕೋಳ ಹಾಕಿ ಗಡಿಪಾರು ಮಾಡಿರುವ ಅಕ್ರಮ ವಲಸಿಗರು ಭಾರತೀಯರಲ್ಲ!

Photo | x/@zoo_bear
ಹೊಸದಿಲ್ಲಿ : ಡೊನಾಲ್ಡ್ ಟ್ರಂಪ್ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ ಬಳಿಕ ಅಮೆರಿಕದಿಂದ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗುತ್ತಿದೆ. ಅಮೆರಿಕದಿಂದ ಗಡೀಪಾರು ಮಾಡಲಾಗುತ್ತಿರುವ ಭಾರತೀಯರನ್ನು ಕೈಕೋಳ ಹಾಕಿ ಅವಮಾನಿಸಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿತ್ತು. ಕೈಕೋಳ ಹಾಕಿರುವ ವಲಸಿಗರು ಭಾರತೀಯರು ಎಂದು ಫೋಟೊಗಳನ್ನು ಹಂಚಿಕೊಂಡು ಹಲವಾರು ಭಾರತೀಯ ಮಾಧ್ಯಮಗಳು ವರದಿಯನ್ನು ಮಾಡಿತ್ತು. ಆದರೆ ವಾಸ್ತವವಾಗಿ ಕೈಕೋಳ ಹಾಕಿ ವಾಪಸ್ ಕಳುಹಿಸುತ್ತಿರುವ ವಲಸಿಗರು ಭಾರತೀಯರಲ್ಲ ಎನ್ನುವುದು ಬಯಲಾಗಿದೆ.
ಅಮೆರಿಕದಿಂದ ಭಾರತೀಯರನ್ನು ಗಡೀಪಾರು ಮಾಡುತ್ತಿರುವ ಬಗ್ಗೆ ಸುದ್ದಿ ಹೊರಬೀಳುತ್ತಿದ್ದಂತೆ, ಕೈಕೋಳ ಹಾಕಿ ಕುಳಿತಿರುವ ವಲಸಿಗರ ಫೋಟೊ ವೈರಲ್ ಆಗಿತ್ತು. ಒಂದು ಪೋಟೊದಲ್ಲಿ ವಲಸಿಗರ ಕೈಗೆ ಕೈಕೋಳ ಹಾಕಿರುವುದು, ಮಾಸ್ಕ್ ಹಾಕಿರುವುದು ತೋರಿಸಿದೆ. ಇನ್ನೊಂದು ಪೋಟೊದಲ್ಲಿ ವಲಸಿಗರು ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿಕೊಂಡು ನಡೆಯುತ್ತಿರುವುದನ್ನು ತೋರಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಈ ಪೋಟೊಗಳು ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದವು. ಕೈಕೋಳ ಮತ್ತು ಕಾಲುಗಳಿಗೆ ಸರಪಳಿಗಳನ್ನು ಕಟ್ಟಿಕೊಂಡು ಭಾರತೀಯರು ಅಮೃತ್ ಕಾಲ್ ಗೆ ಹಿಂತಿರುಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದರು.
ಭಾರತೀಯರನ್ನು ಇಲ್ಲಿ ಸ್ಪಷ್ಟವಾಗಿ ಕೈದಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಅಮೆರಿಕದಿಂದ ಗಡೀಪಾರು ಮಾಡುವಾಗ ಅವರಿಗೆ ಕೈಕೋಳ ಹಾಕುವುದಲ್ಲದೆ, ಕಾಲಿಗೆ ಚೈನ್ ಹಾಕಲಾಗಿದೆ ಎಂದು ಓರ್ವ ಎಕ್ಸ್ ಬಳಕೆದಾರರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ವಾಸ್ತವವೇನು?
ಈ ಕುರಿತು ಪತ್ರಕರ್ತ ಮುಹಮ್ಮದ್ ಝುಬೈರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಅಮೆರಿಕದಿಂದ ಭಾರತೀಯರನ್ನು ಗಡೀಪಾರು ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಸುದ್ದಿ ವಾಹಿನಿಗಳು ಮತ್ತು ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳು ಅಮೆರಿಕದಿಂದ ವಲಸಿಗರನ್ನು ಕೈಕೋಳ ಹಾಕಿ ವಾಪಸ್ ಕಳುಹಿಸುತ್ತಿರುವ ಪೋಟೊಗಳನ್ನು ಹಂಚಿಕೊಂಡಿದೆ. ಆದರೆ, ಈ ವೈರಲ್ ಚಿತ್ರಗಳು ಗ್ವಾಟೆಮಾಲಾ, ಈಕ್ವೆಡಾರ್ ಮತ್ತು ಕೊಲಂಬಿಯಾಕ್ಕೆ ಗಡೀಪಾರು ಮಾಡಲಾಗುತ್ತಿರುವ ವಲಸಿಗರ ಚಿತ್ರಗಳಾಗಿವೆ. ಈ ಫೋಟೊಗಳು ಭಾರತೀಯ ವಲಸಿಗರದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ ಬಳಿಕ ಅಮೆರಿಕದಿಂದ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗುತ್ತಿದೆ. 205 ಭಾರತೀಯ ಪ್ರಜೆಗಳನ್ನು ಹೊತ್ತ ಸಿ -17 ವಿಮಾನವು ಟೆಕ್ಸಾಸ್ ನ ಸ್ಯಾನ್ ಆಂಟೋನಿಯೊದಿಂದ ಭಾರತಕ್ಕೆ ಬಂದಿದೆ. ಇದರಲ್ಲಿ ಗುಜರಾತ್, ಪಂಜಾಬ್, ಚಂಡೀಗಢ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ವಲಸಿಗರು ಸೇರಿದ್ದಾರೆ.
There are news reports of Indians being deported from the US. News channels and Several social media accounts have shared images of US migrants being sent back by handcuffing them. But these viral images are of immigrants being deported to Guatemala, Ecuador and Colombia, not of… pic.twitter.com/yY5sjGiPFn
— Mohammed Zubair (@zoo_bear) February 5, 2025