100 ಕೋಟಿ ಭಾರತೀಯರಲ್ಲಿ ಅಗತ್ಯೇತರ ವಸ್ತುಗಳಿಗೆ ಹಣವಿಲ್ಲ; 13 ಕೋಟಿ ಜನರು ಮಾತ್ರ ‘ಭಾಗ್ಯವಂತರು’

PC : PTI
ಹೊಸದಿಲ್ಲಿ: 140 ಕೋಟಿಗೂ ಅಧಿಕ ಜನಸಂಖ್ಯೆಯ ಭಾರತದಲ್ಲಿ, ಸುಮಾರು 100 ಕೋಟಿ ಮಂದಿಗೆ ಅತ್ಯಗತ್ಯ ವಸ್ತುಗಳು ಅಥವಾ ಸೇವೆಗಳಿಗೆ ಹೊರತಾದ ವ್ಯವಹಾರಗಳಿಗೆ ಖರ್ಚು ಮಾಡುವಷ್ಟು ಆದಾಯವಿಲ್ಲ ಎಂಬುದಾಗಿ ಖಾಸಗಿ ಹಣಕಾಸು ಸಂಸ್ಥೆ ‘ಬ್ಲೂಮ್ ವೆಂಚರ್ಸ್’ ನಡೆಸಿದ ಅಧ್ಯಯನವೊಂದು ಕಂಡುಕೊಂಡಿದೆ. ಅಂದರೆ, ದೇಶದ ಜನಸಂಖ್ಯೆಯ ಸುಮಾರು 90 ಶೇಕಡ ಭಾಗಕ್ಕೆ ಜೀವನಕ್ಕೆ ಅತ್ಯಗತ್ಯವಲ್ಲದ ವಸ್ತುಗಳನ್ನು ಖರೀದಿಸುವ ಆರ್ಥಿಕ ಸಾಮರ್ಥ್ಯವಿಲ್ಲ.
ಭಾರತದಲ್ಲಿ ಕೇವಲ ಸುಮಾರು 13-14 ಕೋಟಿ ಜನರು ‘‘ಬಳಕೆದಾರರ ವರ್ಗ’’ಕ್ಕೆ ಸೇರುತ್ತಾರೆ ಎಂದು ಅಧ್ಯಯನ ಹೇಳುತ್ತದೆ. ಅಂದರೆ, ಈ ವ್ಯಕ್ತಿಗಳ ಬಳಿ ತಮ್ಮ ಪ್ರಾಥಮಿಕ ಅಗತ್ಯಗಳನ್ನೂ ಮೀರಿ ಖರ್ಚು ಮಾಡಬಹುದಾದ ಆದಾಯವಿದೆ ಹಾಗೂ ಅವರೇ ನವೋದ್ಯಮಗಳು (ಸ್ಟಾರ್ಟ್ಅಪ್ಗಳು) ಮತ್ತು ಬಳಕೆದಾರ ಕೇಂದ್ರಿತ ಉದ್ಯಮಗಳ ಬಳಕೆದಾರರು.
‘‘ಆಕಾಂಕ್ಷಿ’’ ಬಳಕೆದಾರರು!
ಇನ್ನೊಂದು 30 ಕೋಟಿ ಜನರನ್ನು ‘‘ಉದಯೋನ್ಮುಖ’’ ಅಥವಾ ‘‘ಆಕಾಂಕ್ಷಿ’’ ಬಳಕೆದಾರರು ಎಂಬುದಾಗಿ ವರ್ಗೀಕರಿಸಲಾಗಿದೆ. ಡಿಜಿಟಲ್ ಪಾವತಿಯ ಅನುಕೂಲತೆಯಿಂದಾಗಿ ಈ ಗುಂಪು ಹೆಚ್ಚು ಖರ್ಚು ಮಾಡಲು ಆರಂಭಿಸಿದೆಯಾದರೂ, ಅವರು ಎಚ್ಚರಿಕೆಯಿಂದ ಖರ್ಚು ಮಾಡುವ ಗ್ರಾಹಕರಾಗಿಯೇ ಮುಂದುವರಿದಿದ್ದಾರೆ.
ವರದಿಯು ಈ ‘‘ಆಕಾಂಕ್ಷಿ ಬಳಕೆದಾರ’’ರನ್ನು ‘‘ಗರಿಷ್ಠವಾಗಿ ಬಳಸುತ್ತಾರೆ ಮತ್ತು ಹಣ ಕೊಡಲು ಹಿಂದೇಟು ಹಾಕುತ್ತಾರೆ’’ ಎಂಬುದಾಗಿ ಬಣ್ಣಿಸುತ್ತದೆ. ಈ ಗುಂಪು ಒಟಿಟಿ/ಮಾಧ್ಯಮ, ಗೇಮಿಂಗ್, ಇಂಟರ್ನೆಟ್ ಶಿಕ್ಷಣ ಮತ್ತು ಲೇವಾದೇವಿ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಾಗಿ ವ್ಯವಹರಿಸುತ್ತದೆ. ಯುಪಿಐ ಮತ್ತು ಆಟೋಪೇ ಮುಂತಾದ ಪಾವತಿ ವ್ಯವಸ್ಥೆಗಳು ಸಣ್ಣ ಮೊತ್ತಗಳ ವ್ಯವಹಾರಗಳನ್ನು ನಡೆಸಲು ಈ ವರ್ಗವನ್ನು ಉತ್ತೇಜಿಸಿವೆ. ಆ ಮೂಲಕ ಈ ವರ್ಗಕ್ಕೆ ಆರ್ಥಿಕತೆಯಲ್ಲಿ ಹೆಚ್ಚಿನ ಮಟ್ಟದಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ.
ಉತ್ಪನ್ನಗಳ ಐಷಾರಾಮೀಕರಣ
ಭಾರತೀಯ ಬಳಕೆದಾರ ಮಾರುಕಟ್ಟೆಯು ವ್ಯಾಪಕವಾಗಿ ವಿಸ್ತರಿಸುವ ಬದಲು, ಆಳಗೊಳ್ಳುತ್ತಿದೆ ಎಂದು ವರದಿ ಹೇಳುತ್ತದೆ. ಅಂದರೆ, ಸಂಪತ್ತು ಹೆಚ್ಚೆಚ್ಚು ಕೇಂದ್ರೀಕರಣಗೊಳ್ಳುತ್ತಿದೆ. ಕಂಪೆನಿಗಳು ದಿನೇ ದಿನೇ ತಮ್ಮ ಉತ್ಪನ್ನಗಳನ್ನು ಐಷಾರಾಮೀಕರಿಸುತ್ತಿವೆ. ಅಂದರೆ ಶ್ರೀಮಂತ ಬಳಕೆದಾರರನ್ನು ಗುರಿಯಾಗಿಸಿ ಉನ್ನತ ದರ್ಜೆಯ ಮತ್ತು ದುಬಾರಿ ಉತ್ಪನ್ನಗಳನ್ನು ತಯಾರಿಸುತ್ತಿವೆ. ಹೆಚ್ಚುತ್ತಿರುವ ಐಷಾರಾಮಿ ಮನೆಗಳು ಮತ್ತು ದುಬಾರಿ ಸ್ಮಾರ್ಟ್ಫೋನ್ಗಳ ಮಾರಾಟದಿಂದ ಇದು ಸ್ಪಷ್ಟವಾಗುತ್ತದೆ. ಅದೇ ವೇಳೆ, ಮಿತದರದ ಉತ್ಪನ್ನಗಳ ಮಾರಾಟ ಕುಸಿಯುತ್ತಿದೆ.
‘ಏ’ ಆಕಾರದ ಆರ್ಥಿಕ ಚೇತರಿಕೆ
ಕೊರೋನಾ ಬಳಿಕ ಭಾರತವು ‘ಏ’ ಆಕಾರದಲ್ಲಿ ಚೇತರಿಕೆಯನ್ನು ಕಂಡಿದೆ ಎಂಬ ವಾದವನ್ನು ‘ಬ್ಲೂಮ್ ವೆಂಚರ್ಸ್’ ಅಧ್ಯಯನವು ದೃಢೀಕರಿಸುತ್ತದೆ. ‘ಏ’ ಮಾದರಿಯ ಆರ್ಥಿಕ ಚೇತರಿಕೆಯೆಂದರೆ, ಶ್ರೀಮಂತರು ಸಂಪತ್ತು ಗಳಿಸುತ್ತಾ ಹೋಗುತ್ತಾರೆ ಮತ್ತು ಬಡವರ ಖರೀದಿ ಸಾಮರ್ಥ್ಯ ಕುಗ್ಗುತ್ತಾ ಹೋಗುತ್ತದೆ.
ಸಂಪತ್ತಿನ ಕೇಂದ್ರೀಕರಣ
ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿರುವ ಅಂಕಿಅಂಶಗಳ ಪ್ರಕಾರ, ಅಗ್ರ 10 ಶೇಕಡ ಭಾರತೀಯರ ಬಳಿ ರಾಷ್ಟ್ರದ ಒಟ್ಟು ಆದಾಯದ 57.7 ಶೇಕಡದಷ್ಟು ಆದಾಯವಿದೆ. ಇದು 1990ರಲ್ಲಿ ಇದ್ದ 34 ಶೇಕಡದಿಂದ ಹೆಚ್ಚುತ್ತಾ ಹೋಗಿದೆ. ಅದೇ ವೇಳೆ, ಜನಸಂಖ್ಯೆಯ ಕೆಳಾರ್ಧದ (ಕೆಳಗಿನ 50 ಶೇಕಡ) ಜನರ ಆದಾಯವು 22.2 ಶೇಕಡದಿಂದ ಈಗ 15 ಶೇಕಡಕ್ಕೆ ಕುಸಿದಿದೆ.
ಜನರು ಮಾಡುವ ಖರ್ಚೇ ಮುಖ್ಯ
ಭಾರತೀಯ ಒಟ್ಟು ದೇಶೀ ಉತ್ಪನ್ನ (ಜಿಡಿಪಿ)ವು ಜನರು ಮಾಡುವ ಖರ್ಚನ್ನೇ ಅತಿಯಾಗಿ ಅವಲಂಬಿಸಿದೆ ಎಂದು ವರದಿ ಹೇಳುತ್ತದೆ. ಆದರೆ, ಆದಾಯ ಹಂಚಿಕೆ ಸುಧಾರಿಸದಿದ್ದರೆ, ಉದ್ಯಮಗಳು ಹೆಚ್ಚು ಆದಾಯದ ಗುಂಪುಗಳ ಮೇಲೆಯೇ ಹೆಚ್ಚೆಚ್ಚು ಗಮನ ಕೇಂದ್ರೀಕರಿಸಬಹುದು ಹಾಗೂ ಆ ಮೂಲಕ ಭಾರತೀಯ ಜನಸಂಖ್ಯೆಯ ಗಣನೀಯ ಭಾಗವೊಂದು ಇನ್ನಷ್ಟು ಅಂಚಿಗೆ ತಳ್ಳಲ್ಪಡಬಹುದು ಎಂದು ವರದಿ ಎಚ್ಚರಿಸುತ್ತದೆ.







