ಎಐ ತಂತ್ರಜ್ಞಾನವನ್ನು ಶೇ. 65ರಷ್ಟು ಭಾರತೀಯರು ಬಳಸುತ್ತಿದ್ದು, ಇದು ಜಾಗತಿಕ ಸರಾಸರಿಯ ದುಪ್ಪಟ್ಟು: ಮೈಕ್ರೊಸಾಫ್ಟ್ ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಭಾರತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಕ್ಷಿಪ್ರವಾಗಿ ಅಳವಡಿಸಿಕೊಂಡಿರುವುದು ಕಂಡು ಬಂದಿದ್ದು, ಸಮೀಕ್ಷೆಗೊಳಗಾದ ಶೇ. 65ರಷ್ಟು ಭಾರತೀಯರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸುತ್ತಿದ್ದಾರೆ. ಇದು ಜಾಗತಿಕ ಸರಾಸರಿಯ ದುಪ್ಪಟ್ಟು ಎಂದು ಮೈಕ್ರೊಸಾಫ್ಟ್ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಬೆಳೆಯುತ್ತಿರುವ ಕೃತಕ ಬುದ್ಧಿಮತ್ತೆಯ ಪ್ರಭಾವದ ಕುರಿತು ನಡೆಸಲಾಗಿರುವ ‘ಜಾಗತಿಕ ಆನ್ಲೈನ್ ಸುರಕ್ಷತಾ ಸಮೀಕ್ಷೆ’ ಅಧ್ಯಯನ ವರದಿಯನ್ನು ಮಂಗಳವಾರ ಮೈಕ್ರೊಸಾಫ್ಟ್ ಬಿಡುಗಡೆಗೊಳಿಸಿತು.
ಈ ಸಮೀಕ್ಷೆಯು 13-17 ವರ್ಷದೊಳಗಿನ 15,000 ಹದಿಹರೆಯದವರನ್ನು ಆಧರಿಸಿದ ಸಮೀಕ್ಷೆಯಾಗಿದ್ದು, ಜುಲೈ 19ರಿಂದ ಆಗಸ್ಟ್ 9, 2024ರ ನಡುವೆ 15 ದೇಶಗಳಲ್ಲಿ ನಡೆಸಲಾಗಿದೆ.
“ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ. 65ರಷ್ಟು ಮಂದಿ ಕೃತಕ ಬುದ್ಧಿಮತ್ತೆಯನ್ನು ಬಳಸಿದ್ದಾರೆ. (ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 26ರಷ್ಟು ಅಧಿಕ). ಇದು ಇದೇ ಅವಧಿಯಲ್ಲಿ ಶೇ. 31ರಷ್ಟಿರುವ ಜಾಗತಿಕ ಸರಾಸರಿಗಿಂತ ದುಪ್ಪಟ್ಟು” ಎಂದು ವರದಿಯಲ್ಲಿ ಬೊಟ್ಟು ಮಾಡಲಾಗಿದೆ.
“ಭಾರತವು ಕೃತಕ ಬುದ್ಧಿಮತ್ತೆಯನ್ನು ಭಾಷಾಂತರಕ್ಕೆ, ಪ್ರಶ್ನೆಗಳಿಗೆ ಉತ್ತರಿಸಲು, ಉದ್ಯೋಗ ಸ್ಥಳಗಳಲ್ಲಿ ದಕ್ಷತೆಯನ್ನು ಹೆಚ್ಚಿಸಲು ಹಾಗೂ ಶಾಲಾ ಕೆಲಸಗಳಲ್ಲಿ ವಿದ್ಯಾರ್ಥಿಗಳಿಗೆ ನೆರವು ನೀಡಲು ಹೆಚ್ಚು ಬಳಸುತ್ತಿದೆ” ಎಂದೂ ವರದಿಯಲ್ಲಿ ಹೇಳಲಾಗಿದೆ.
25-44 ವರ್ಷ ವಯೋಮಾನದೊಳಗಿನವರು ಕೃತಕ ಬುದ್ಧಿಮತ್ತೆಯನ್ನು ಹೆಚ್ಚು ಅಳವಡಿಸಿಕೊಂಡಿದ್ದು, ಅವರ ಪ್ರಮಾಣ ಶೇ. 84ರಷ್ಟಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಮಕ್ಕಳು ಎದುರಿಸಬೇಕಿರುವ ಡಿಜಿಟಲ್ ಸವಾಲುಗಳ ಬಗ್ಗೆ ಭಾರತೀಯ ಪೋಷಕರು ಹೆಚ್ಚು ಜಾಗೃತರಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ, ಅಧಿಕ ಜಾಗ್ರತೆ ಪ್ರದರ್ಶಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹೀಗಿದ್ದೂ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಭಾರತ ಕೆಲ ಹಿಂಜರಿಕೆಯನ್ನೂ ಹೊಂದಿದ್ದು, ಈ ಪೈಕಿ ಆನ್ಲೈನ್ ನಿಂದನೆ ಬಗೆಗಿನ ಕಳವಳ, ಡೀಪ್ ಫೇಕ್ ಗಳು, ಹಗರಣಗಳು ಹಾಗೂ ಕೃತಕ ಬುದ್ಧಿಮತ್ತೆಯ ಭ್ರಾಮಕತೆ ಸೇರಿವೆ. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಆನ್ಲೈನ್ ನಿಂದನೆ ಬಗ್ಗೆ ಅತಿ ಹೆಚ್ಚು ಕಳವಳ ವ್ಯಕ್ತವಾಗಿದೆ.
“18 ವರ್ಷದೊಳಗಿನ ಮಕ್ಕಳಿಗಾಗಿ ಕೃತಕ ಬುದ್ಧಿಮತ್ತೆ ಬಳಸುವುದರ ಕುರಿತು ಶೇ. 80ಕ್ಕೂ ಹೆಚ್ಚು ಮಂದಿ ಕಳವಳ ವ್ಯಕ್ತಪಡಿಸಿದ್ದಾರೆ” ಎಂದು ವರದಿಯಲ್ಲಿ ಹೇಳಲಾಗಿದೆ.
ನಮಗೆ ಆನ್ಲೈನ್ ಸಮಸ್ಯೆಯ ಅನುಭವವಾಯಿತು ಎಂದು ಶೇ. 80ರಷ್ಟು ಭಾರತೀಯ ಹದಿಹರೆಯದ ಬಾಲಕರು ಈ ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ.







