ಭಾರತದ ಚೊಚ್ಚಲ ಆ್ಯಂಟಿ ಬಯೋಟಿಕ್ ‘ನಾಫಿಥ್ರೋಮೈಸಿನ್ʼ ಉಸಿರಾಟದ ಸೋಂಕುಗಳಿಗೆ ಪರಿಣಾಮಕಾರಿ : ಸಚಿವ ಡಾ.ಜೀತೇಂದ್ರ ಸಿಂಗ್

Photo: Ndtv
ಹೊಸದಿಲ್ಲಿ, ಅ,19: ಭಾರತವು ಸ್ವದೇಶಿಯಾಗಿ ಸಂಶೋಧಿಸಿದ ಪ್ರಪ್ರಥಮ ಆ್ಯಂಟಿ ಬಯೋಟಿಕ್ ‘ನಾಫಿಥ್ರೋಮೈಸಿನ್’ ಅನ್ನು ಅಭಿವೃದ್ಧಿಪಡಿಸಿದ್ದು, ಅದು ನ್ಯೂಮೋನಿಯಾ ಮತ್ತಿತರ ಉಸಿರಾಟದ ಸೋಂಕುಗಳಿಗೆ, ಕ್ಯಾನ್ಸರ್ರೋಗಿಗಳಿಗೆ ಮತ್ತು ತೀವ್ರ ಮಧುಮೇಹದಿಂದ ಬಳಲುತ್ತಿರುವ ರೋಗಿ ಗಳಿಗೆ ಉಪಯುಕ್ತವಾಗಿದೆಯೆಂದು ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ (ಸ್ವತಂತ್ರ ನಿವರ್ ಹಣೆ) ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಈ ಆ್ಯಂಟಿ ಬಯೋಟಿಕ್ ಔಷಧಿಯನ್ನು ಸಂಪೂರ್ಣವಾಗಿ ಭಾರತದಲ್ಲೇ ಸಂಶೋಧಿಸಿ, ಅಭಿವೃದ್ಧಿಪಡಿಸಲಾಗಿದ್ದು, ಕ್ಲಿನಿಕಲ್ ಮೌಲ್ಯಮಾಪನದಲ್ಲೂ ತೇರ್ಗಡೆಗೊಂಡಿದೆ. ಫಾರ್ಮಾಸ್ಯೂಟಿಕಲ್ ವಲಯದಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ‘ಜಿಗಿತ’ವೆಂದು ಡಾ.ಸಿಂಗ್ ಬಣ್ಣಿಸಿದ್ದಾರೆ.
ಮೂರು ದಶಕಗಳ ಸಂಶೋಧನೆಯ ಬಳಿಕ ಭಾರತವು ನಾಫಿಥ್ರೋಮೈಸಿನ್ಅನ್ನು ಅಭಿವೃದ್ಧಿಪಡಿಸಿದೆ ಎಂದವರು ಹೇಳಿದ್ದಾರೆ.
ನಾಫಿಥ್ರೋಮೈಸಿನ್ ಔಷಧಿಯ ಸಂಶೋಧನೆಯನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ ಎಂದು ಡಾ.ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.





