ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಬಾಹ್ಯ ಹಸ್ತಕ್ಷೇಪ: ಬಿಜೆಪಿ ಆರೋಪ

ಸಾಂದರ್ಭಿಕ ಚಿತ್ರ | PC: PTI
ಹೊಸದಿಲ್ಲಿ: ಭಾರತದಲ್ಲಿ ಮತದಾನ ಉತ್ತೇಜಿಸುವುದಕ್ಕಾಗಿ ನೀಡಲುದ್ದೇಶಿಸಲಾಗಿದ್ದ 21 ಮಿಲಿಯನ್ ಡಾಲರ್ ಅನುದಾನವನ್ನು ರದ್ದುಪಡಿಸಲಾಗಿದೆಯೆಂಬ ಅಮೆರಿಕದ ಪ್ರಕಟಣೆಗೆ, ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಬಾಹ್ಯ ಹಸ್ತಕ್ಷೇಪ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು,‘‘ಭಾರತದಲ್ಲಿ ಮತದಾನಕ್ಕಾಗಿ 21 ಮಿಲಿಯನ್ ಡಾಲರ್ ನಿಗದಿ? ಇದು ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಬಾಹ್ಯ ಹಸ್ತಕ್ಷೇಪಕ್ಕೆ ಸಮನಾಗಿದೆ", ಎಂದು ಹೇಳಿದ್ದು,"ಇದರಿಂದ ಯಾರಿಗೆ ಲಾಭವಾಗುತ್ತದೆ?",ಎಂದು ಪ್ರಶ್ನಿಸಿದ್ದಾರೆ. "ಖಂಡಿತವಾಗಿಯೂ ಆಡಳಿತ ಪಕ್ಷಕ್ಕಲ್ಲ ’’,ಎಂದೂ ಅವರು ಹೇಳಿದ್ದಾರೆ.
ಭಾರತೀಯ ಸಂಸ್ಥೆಗಳಲ್ಲಿ ವಿದೇಶಿ ಶಕ್ತಿಗಳ ವ್ಯವಸ್ಥಿತವಾಗಿ ಒಳನುಸುಳುತ್ತಿರುವುದಾಗಿ ಮಾಲವೀಯ ಆಪಾದಿಸಿದ್ದಾರೆ. ಜಾಗತಿಕ ಹೂಡಿಕೆದಾರ ಹಾಗೂ ಸಮಾಜಸೇವಕ ಜಾರ್ಜ್ ಸೊರೊಸ್ ಹಾಗೂ ಅವರು ತನ್ನ ಓಪನ್ ಸೊಸೈಟಿ ಪ್ರತಿಷ್ಠಾನದ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುತ್ತಿದ್ದಾರೆಂದು ಮಾಲವೀಯ ದೂರಿದ್ದಾರೆ.
ಕಾಂಗ್ರೆಸ್ ಪಕ್ಷ ಹಾಗೂ ಗಾಂಧಿಕುಟುಂಬದ ಜೊತೆ ನಂಟು ಹೊಂದಿರುವ ಜಾರ್ಜ್ ಸೊರೊಸ್ ಅವರ ನೆರಳು ನಮ್ಮ ಚುನಾವಣಾ ಪ್ರಕ್ರಿಯೆಯ ಮೇಲೆ ಬಿದ್ದಿದೆ ಎಂದು ಮಾಳವೀಯ ಹೇಳಿದ್ದಾರೆ