ತಜಿಕಿಸ್ತಾನದ ವಾಯುನೆಲೆಯಿಂದ ಭಾರತದ ನಿರ್ಗಮನ ವ್ಯೂಹಾತ್ಮಕ ರಾಜತಾಂತ್ರಿಕತೆಗೆ ಹಿನ್ನಡೆ: ಕಾಂಗ್ರೆಸ್

ಜೈರಾಮ್ ರಮೇಶ್ | Photo Credit : PTI
ಹೊಸ ದಿಲ್ಲಿ: ತಜಿಕಿಸ್ತಾನದ ಅಯ್ನಿ ವಾಯು ನೆಲೆಯಿಂದ ಭಾರತದ ನಿರ್ಗಮನವು ದೇಶದ ವ್ಯೂಹಾತ್ಮಕ ರಾಜತಾಂತ್ರಿಕತೆಗೆ ಮತ್ತೊಂದು ಹಿನ್ನಡೆಯಾಗಿದ್ದು, ಭಾರತದ ಪ್ರಾಂತೀಯ ಪ್ರಭಾವಕ್ಕೆ ಧಕ್ಕೆಯನ್ನುಂಟು ಮಾಡಿದೆ ಎಂದು ಶನಿವಾರ ಕಾಂಗ್ರೆಸ್ ಹೇಳಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ಭಾರತವು 2000ರ ದಶಕದಲ್ಲಿ ಅಯ್ನಿ ವಾಯು ನೆಲೆಯನ್ನು ಸ್ಥಾಪಿಸಿತ್ತು ಹಾಗೂ ವರ್ಷಗಳುರುಳಿದಂತೆ ಅದರ ಮೂಲಸೌಕರ್ಯವನ್ನು ಗಮನಾರ್ಹವಾಗಿ ವಿಸ್ತರಿಸಿಕೊಂಡು ಬಂದಿತ್ತು. ಅದರ ಅಸಾಧಾರಣ ಸ್ಥಳದ ಕಾರಣಕ್ಕೆ ಅಯ್ನಿಯಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸುವ ಪ್ರಮುಖ ಯೋಜನೆಯನ್ನು ಭಾರತ ಹೊಂದಿತ್ತು” ಎಂದು ಹೇಳಿದ್ದಾರೆ.
“ನಾಲ್ಕು ವರ್ಷಗಳ ಹಿಂದೆ ಅಯ್ನಿ ವಾಯು ನೆಲೆಯಲ್ಲಿನ ತನ್ನ ಉಪಸ್ಥಿತಿಯನ್ನು ಹಿಂದೆಗೆದುಕೊಳ್ಳುವಂತೆ ಭಾರತಕ್ಕೆ ಸೂಚಿಸಲಾಯಿತು ಹಾಗೂ ಇದೀಗ ಸಂಪೂರ್ಣವಾಗಿ ಅಲ್ಲಿಂದ ನಿರ್ಗಮಿಸಲಾಗಿದೆ. ಆ ಮೂಲಕ, ವಿದೇಶದಲ್ಲಿದ್ದ ಭಾರತದ ಏಕೈಕ ಸೇನಾ ನೆಲೆಯನ್ನು ಕೊನೆಗೆ ಮುಚ್ಚಿದಂತೆ ಕಂಡು ಬರುತ್ತಿದೆ. ಇದು ನಮ್ಮ ವ್ಯೂಹಾತ್ಮಕ ರಾಜತಾಂತ್ರಿಕತೆಗೆ ಮತ್ತೊಂದು ಹಿನ್ನಡೆ ಎಂಬುದರಲ್ಲಿ ಅನುಮಾನವೇ ಇಲ್ಲ” ಎಂದು ಅವರು ಹೇಳಿದ್ದಾರೆ.
ದುಶಾಂಬೆಯಿಂದ ಸುಮಾರು 10 ಕಿಮೀ ದೂರವಿರುವ ಅಯ್ನಿ ವಾಯು ನೆಲೆಯು ಆ ಪ್ರಾಂತ್ಯದ ಅದ್ಭುತ ಕಲೆಗಳಲ್ಲಿ ಒಂದಾದ 1500 ವರ್ಷದಷ್ಟು ಪುರಾತನವಾದ ಬುದ್ಧ ನಿರ್ವಾಣದ ಕಲಾಕೃತಿಯನ್ನು ಹೊಂದಿರುವ ವಸ್ತು ಸಂಗ್ರಹಾಲಯದ ಬಳಿ ಇತ್ತು ಎಂದೂ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಅಧಿಕಾರಿಗಳು, ಸೋವಿಯತ್ ಯುಗದಲ್ಲಿ ನಿರ್ಮಿಸಲಾಗಿದ್ದ ಅಯ್ನಿ ವಾಯು ನೆಲೆಯಲ್ಲಿನ ಭಾರತದ ಉಪಸ್ಥಿತಿಯು ದ್ವಿಪಕ್ಷೀಯ ಒಪ್ಪಂದದ ಅವಧಿ ಮೀರಿದ್ದರಿಂದ ಅಂತ್ಯಗೊಂಡಿದೆ ಎಂದು ತಿಳಿಸಿದ್ದಾರೆ. ವಾಯು ನೆಲೆಯ ಅಭಿವೃದ್ಧಿ ಮತ್ತು ಕಾರ್ಯಾಚರಣೆಗಾಗಿ ಸಹಿ ಹಾಕಲ್ಪಟ್ಟಿದ್ದ ಈ ಒಪ್ಪಂದವು ಸುಮಾರು ನಾಲ್ಕು ವರ್ಷಗಳ ಹಿಂದೆ ಅಂತ್ಯಗೊಂಡಿದೆ ಎಂದು ಅವರು ಹೇಳಿದ್ದಾರೆ.







