ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ಆಗಿಲ್ಲ!
ಸ್ಕ್ರೀನ್ ಶಾಟ್ ವೈರಲಾದ ಬೆನ್ನಲ್ಲೇ ಹೊರಬಂತು ಅರ್ಥಶಾಸ್ತ್ರಜ್ಞರ ಲೆಕ್ಕಚಾರ

Photo : businesstoday.in
ಮುಂಬೈ : ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಭಾರತವು ಇನ್ನೂ 4 ಟ್ರಿಲಿಯನ್ ಡಾಲರ್ಗಳ ಜಿಡಿಪಿ ತಲುಪಿಲ್ಲ. ಆದರೆ ಆ ಮೈಲಿಗಲ್ಲನ್ನು ತಲುಪುವ ಸನಿಹದಲ್ಲಿದೆ.
ರಾಷ್ಟ್ರದ ಜಿಡಿಪಿ 4 ಟ್ರಿಲಿಯನ್ ಡಾಲರ್ ಮೀರಿದೆ ಎಂದು ಸೂಚಿಸುವ ಸ್ಕ್ರೀನ್ಶಾಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ರವಿವಾರ ವೈರಲ್ ಆಗಿದೆ. ಇದನ್ನು ಹಲವಾರು ಮಾಧ್ಯಮ ಸಂಸ್ಥೆಗಳು ಎತ್ತಿಕೊಂಡು ಶೇರ್ ಮಾಡಿ, ಸಾಧನೆಯನ್ನು ಶ್ಲಾಘಿಸಿವೆ. ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಬ್ರಿಟನ್ ಅನ್ನು ಹಿಂದಿಕ್ಕುವ ದಿನ ತುಂಬಾ ದೂರವಿಲ್ಲ ಎಂದು ಭಾರತದ ಅಭಿವೃದ್ಧಿಯನ್ನು ಸ್ವಾಗತಿಸುವ ಹೇಳಿಕೆಗಳೂ ಬಂದವು.
ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘ್ವಾಲ್, ಗಜೇಂದ್ರ ಸಿಂಗ್ ಶೇಖಾವತ್, ಜಿ ಕಿಶನ್ ರೆಡ್ಡಿ ಉದ್ಯಮಿ ಗೌತಮ್ ಅದಾನಿ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಂತಹ ಪ್ರಮುಖರು ಇದೇ ಸ್ಕ್ರೀನ್ ಶಾಟ್ ನ ಆಧಾರದಲ್ಲಿ ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ತಲುಪಿದೆ ಎಂದು ಸಂಭ್ರಮಿಸಿದರು. ಅದಕ್ಕೆ ನರೇಂದ್ರ ಮೋದಿ ಸರಕಾರ ಹಾಗು ನಾಯಕತ್ವವೇ ಕಾರಣ ಎಂದು ಬೆನ್ನು ತಟ್ಟಿಕೊಂಡರು. ಇತ್ತೀಚಿಗೆ ಹಗರಣಗಳ ಆರೋಪ ಹೊತ್ತಿರುವ ಗೌತಮ್ ಅದಾನಿಯವರು ಟ್ವೀಟ್ ಮಾಡಿ " ಭಾರತಕ್ಕೆ ಅಭಿನಂದನೆಗಳು, ಇನ್ನೆರಡು ವರ್ಷಗಳಲ್ಲಿ ಭಾರತ ಜಪಾನ್ ಅನ್ನು ಹಿಂದಿಕ್ಕಿ ಜಾಗತಿಕ ಜಿಡಿಪಿಯಲ್ಲಿ ಮೂರನೇ ಅತಿದೊಡ್ಡ ದೇಶವಾಗಲಿದೆ. ಜೈ ಹಿಂದ್ " ಎಂದು ಹೇಳಿದರು. ಆದರೆ ಕೇಂದ್ರ ವಿತ್ತ ಸಚಿವಾಲಯವಾಗಲಿ, ವಿತ್ತ ಸಚಿವರಾಗಲಿ ಈ ಬಗ್ಗೆ ಏನನ್ನೂ ಹೇಳಲಿಲ್ಲ.
2022-23 ರ ಆರ್ಥಿಕ ವರ್ಷದಲ್ಲಿ ಪ್ರಸಕ್ತ ಬೆಲೆಗಳಲ್ಲಿ ನಾಮಮಾತ್ರದ ಜಿಡಿಪಿ (ಹೆಸರಿಗೆ ಮಾತ್ರ ಇರುವ ಅಂಕಿ ಅಂಶ) ಅಥವಾ ಜಿಡಿಪಿ 16.1% ರ ಬೆಳವಣಿಗೆ ದರವನ್ನು ತೋರಿಸುವ 272.41 ಲಕ್ಷ ಕೋಟಿ ರೂಪಾಯಿಗಳ ಮಟ್ಟವನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಡಾಲರ್ ಲೆಕ್ಕದಲ್ಲಿ, ಅದು ಸುಮಾರು 3.3 ಟ್ರಿಲಿಯನ್.
ಬಜೆಟ್ ಅಂದಾಜಿನ ಪ್ರಕಾರ 2024 ನೇ ಆರ್ಥಿಕ ವರ್ಷಕ್ಕೆ ಜಿಡಿಪಿಯನ್ನು ರೂ 301.75 ಲಕ್ಷ ಕೋಟಿಗಳಲ್ಲಿ ನಿರೀಕ್ಷಿಸಲಾಗಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕಿಂತ 10.5 % ಬೆಳವಣಿಗೆ ಹೊಂದಲಿದೆ ಎಂದು ಊಹಿಸಲಾಗಿದೆ. ಆಗ ಅದು 3.6 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಸಮವಾಗುತ್ತದೆ.
"ಪ್ರಸಕ್ತ ಪರಿಸ್ಥಿತಿಯಲ್ಲಿ 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧ್ಯತೆ ತೋರುತ್ತಿಲ್ಲ. 2024-25ರಲ್ಲಿ 10% ಬೆಳವಣಿಗೆ ದರದೊಂದಿಗೆ 330 ಲಕ್ಷ ಕೋಟಿ ರೂಪಾಯಿಗಳ ನಾಮಮಾತ್ರ ಜಿಡಿಪಿ ಗೆ ಸಮವಾದಾಗ ಈ ಮೈಲಿಗಲ್ಲು ಸಾಧಿಸಬಹುದು ” ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಹೇಳುತ್ತಾರೆ.
"2024 ರ ಅಂತ್ಯದವರೆಗೆ-2025 ರ ಆರಂಭದವರೆಗೆ ರೋಲಿಂಗ್ ಆಧಾರದ ಮೇಲೆ ಭಾರತವು 4 ಟ್ರಿಲಿಯನ್ ಡಾಲರ್ ಅನ್ನು ಮುಟ್ಟುವುದಿಲ್ಲ" ಎಂದು ಬಾರ್ಕ್ಲೇಸ್ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ರಾಹುಲ್ ಬಜೋರಿಯಾ ಅವರು ಸಾಮಾಜಿಕ ಮಾಧ್ಯಮ X ನಲ್ಲಿ ತಮ್ಮ ವೈಯಕ್ತಿಕ ಖಾತೆಯಲ್ಲಿ ತಿಳಿಸಿದ್ದಾರೆ. ಈ ಆರ್ಥಿಕ ವರ್ಷದಲ್ಲಿ, ಭಾರತದ ನಾಮಮಾತ್ರದ ಜಿಡಿಪಿ (ಹೆಸರಿಗೆ ಮಾತ್ರ ಇರುವ ಅಂಕಿ ಅಂಶ) ಸುಮಾರು 300 ಟ್ರಿಲಿಯನ್ ಆಗುವ ನಿರೀಕ್ಷೆಯಿದೆ, ಇದು ಪ್ರಸ್ತುತ ವಿನಿಮಯ ದರಗಳ ಮೇಲೆ ಸುಮಾರು 3.65 ಟ್ರಿಲಿಯನ್ ಡಾಲರ್ ಜಿಡಿಪಿ ಅನ್ನು ಸೂಚಿಸುತ್ತದೆ ಎಂದು ಅವರು ಸೂಚಿಸಿದ್ದಾರೆ.
ಕ್ಯಾಪಿಟಲ್ಮೈಂಡ್ನ ಸಂಸ್ಥಾಪಕ ಮತ್ತು ಸಿಇಒ ದೀಪಕ್ ಶೆಣೈ ಅವರು, “ಭಾರತದ ಜಿಡಿಪಿ ಇನ್ನೂ4 ಟ್ರಿಲಿಯನ್ ಡಾಲರ್ ಆಗಿಲ್ಲ. ನಾವು ಜೂನ್ನಲ್ಲೇ ಸುಮಾರು 3.38 ಟ್ರಿಲಿಯನ್ ಮೈಲಿಗಲ್ಲಿನಲ್ಲಿದ್ದೇವೆ. ಬಹುಶಃ ಈಗ 3.45 ಟ್ರಿಲಿಯನ್ ಡಾಲರ್ ಆಗಿರಬಹುದು” ಎಂದು ತಮ್ಮ x ಪೋಸ್ಟ್ ನಲ್ಲಿ ಹೇಳಿದ್ದಾರೆ.
ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಅಥವಾ ನಿರಾಕರಣೆ ಎಲ್ಲೂ ಕಂಡು ಬಂದಿಲ್ಲ. ಭಾರತದ ಅಧಿಕೃತ ಜಿಡಿಪಿ ಅಂದಾಜುಗಳನ್ನು ರಾಷ್ಟ್ರೀಯ ಅಂಕಿ ಅಂಶ ಕಚೇರಿಯು ಅಂಕಿ ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿ ನಿಗದಿತ ಕ್ಯಾಲೆಂಡರ್ಗೆ ಬಿಡುಗಡೆ ಮಾಡುತ್ತದೆ. ಆದಾಗ್ಯೂ, ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಸ್ಕ್ರೀನ್ ಶಾಟ್ ಡೇಟಾವನ್ನು ಪ್ರಶ್ನಿಸಿದ್ದಾರೆ. ತಪ್ಪು ಮಾಹಿತಿಗಳು ಸಾಮಾನ್ಯವಾಗಿ ತಪ್ಪುದಾರಿಗೆಳೆಯುತ್ತವೆ ಎಂದು ಸೂಚಿಸಿದ್ದಾರೆ.
ರಾಷ್ಟ್ರೀಯ ಅಂಕಿ ಅಂಶ ಕಚೇರಿಯು ಭಾರತದ ಜಿಡಿಪಿಯನ್ನು ತ್ರೈಮಾಸಿಕ ಆಧಾರದ ಮೇಲೆ ಲೆಕ್ಕಾಚಾರ ಮಾಡುತ್ತದೆ.
ಜುಲೈ-ಸೆಪ್ಟೆಂಬರ್ 2023 ತ್ರೈಮಾಸಿಕದ ಅಂಕಿ ಅಂಶಗಳನ್ನು ನವೆಂಬರ್ 30ಕ್ಕೆ ಬಿಡುಗಡೆ ಮಾಡಲಾಗುತ್ತದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ನೈಜ ಜಿಡಿಪಿ ರೂ 40.37 ಲಕ್ಷ ಕೋಟಿಗಳ ಮಟ್ಟವನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಇದು 7.8% ರಷ್ಟು ಬೆಳವಣಿಗೆಯಾಗಿದೆ. ವರ್ಷದ ಹಿಂದೆ ಪ್ರಸಕ್ತ ಬೆಲೆಗಳಲ್ಲಿ ನಾಮಮಾತ್ರದ ಜಿಡಿಪಿ (ಹೆಸರಿಗೆ ಮಾತ್ರ ಇರುವ ಅಂಕಿ ಅಂಶ) ಅಥವಾ ಜಿಡಿಪಿ ಅಂದಾಜು 70.67 ಲಕ್ಷ ಕೋಟಿಗಳು. ಅಂದರೆ 8% ಬೆಳವಣಿಗೆ ಕಾಣಲಿದೆ.
ಆಧಾರ : bqprime.com, businesstoday.in