ಸಿಂಧೂ ನದಿ ನೀರು ಹಂಚಿಕೆ ಅಮಾನತು ಬೆನ್ನಲ್ಲೇ ಪಾಕಿಸ್ತಾನಕ್ಕೆ ಸೌಹಾರ್ದದ ಹಸ್ತ ಚಾಚಿದ ಭಾರತ

ಇಸ್ಲಾಮಾಬಾದ್: ಪಹಲ್ಗಾಮ್ ದಾಳಿಯ ನಂತರ, ಸಿಂಧೂ ನದಿ ನೀರಿನ ಹಂಚಿಕೆಯನ್ನು ಅಮಾನತಿನಲ್ಲಿರಿಸಿದ ಬಳಿಕ, ಭಾರತವು ಪಾಕಿಸ್ತಾನಕ್ಕೆ ಸೌಹಾರ್ದದ ಹಸ್ತ ಚಾಚಿದೆ ಎಂದು ವರದಿಯಾಗಿದೆ.
ರವಿವಾರ ತಾವಿ ನದಿಯಲ್ಲಿನ ಪ್ರವಾಹ ಪರಿಸ್ಥಿತಿಯ ಕುರಿತು ಭಾರತೀಯ ಹೈಕಮಿಷನ್ ಮೂಲಕ ಪಾಕಿಸ್ತಾನಕ್ಕೆ ಭಾರತ ಮಾಹಿತಿ ನೀಡಿತ್ತು ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ.
ಈ ಬೆಳವಣಿಗೆಯ ಕುರಿತು ಭಾರತವಾಗಲಿ ಅಥವಾ ಪಾಕಿಸ್ತಾನವಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ವೇಳೆ ಈ ಸುದ್ದಿಯೇನಾದರೂ ಸತ್ಯವಾಗಿದ್ದರೆ, ಇದೇ ಪ್ರಥಮ ಬಾರಿಗೆ ಇಂತಹ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಳ್ಳಲು ಭಾರತವು ರಾಜತಾಂತ್ರಿಕ ಮಾರ್ಗ ಅನುಸರಿಸಿದಂತಾಗಲಿದೆ.
ಜಮ್ಮುವಿನ ತಾವಿ ನದಿಯಲ್ಲಿ ಭಾರಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತವು ಪಾಕಿಸ್ತಾನಕ್ಕೆ ಮುನ್ನೆಚ್ಚರಿಕೆ ನೀಡಿತ್ತು. ರವಿವಾರ ಇಸ್ಲಾಮಾಬಾದ್ ನಲ್ಲಿನ ಭಾರತೀಯ ಹೈಕಮಿಷನ್ ಕಚೇರಿಯು ಈ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ಭಾರತ ನೀಡಿದ ಈ ಮಾಹಿತಿಯನ್ನಾಧರಿಸಿ, ಪಾಕಿಸ್ತಾನದ ಪ್ರಾಧಿಕಾರಗಳು ಈ ಮುನ್ನೆಚ್ಚರಿಕೆಯನ್ನು ನೀಡಿದ್ದವು ಎಂದೂ ಈ ವರದಿಯಲ್ಲಿ ಹೇಳಲಾಗಿದೆ.





