ಶಾಯಿಯ ಸಹಿ, ಅಧಿಕೃತ ಮುದ್ರೆ ಇಲ್ಲದ ಕಾರಣ ಭಾರತದ ಕಾನೂನು ಸಚಿವಾಲಯ ಅದಾನಿಗೆ US SEC ಸಮನ್ಸ್ ನೀಡಲು ನಿರಾಕರಿಸಿದೆ: ವರದಿ

ಗೌತಮ್ ಅದಾನಿ (Photo: PTI)
ಹೊಸದಿಲ್ಲಿ: ಕಳೆದ ವರ್ಷ ಅಮೆರಿಕದ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ (ಯುಎಸ್ ಎಸ್ಇಸಿ) ಹೊರಡಿಸಿದ್ದ ಸಮನ್ಸ್ಗಳನ್ನು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರಿಗೆ ಔಪಚಾರಿಕವಾಗಿ ಜಾರಿಗೊಳಿಸಲು ಕಾನೂನು ಮತ್ತು ನ್ಯಾಯ ಸಚಿವಾಲಯವು ನಿರಾಕರಿಸಿತ್ತು. ಶಾಯಿಯ ಸಹಿ ಮತ್ತು ಅಧಿಕೃತ ಮುದ್ರೆ ಇಲ್ಲದ್ದು ಹಾಗೂ ಸಮನ್ಸ್ ಜಾರಿಗೊಳಿಸಲು ತಾಂತ್ರಿಕ ಆಕ್ಷೇಪಣೆ;ಇವುಗಳನ್ನು ಅದು ತನ್ನ ನಿರಾಕರಣೆಗೆ ಕಾರಣಗಳನ್ನಾಗಿ ಉಲ್ಲೇಖಿಸಿತ್ತು. ನ್ಯೂಯಾರ್ಕ್ ನ್ಯಾಯಾಲಯದ ದಾಖಲೆಗಳು ಇದನ್ನು ಬಹಿರಂಗಗೊಳಿಸಿವೆ ಎಂದು indianexpress.com ವರದಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಎಸ್ಇಸಿ ಅಂತರರಾಷ್ಟ್ರೀಯ ನಿಯಮಗಳನ್ನು ಬದಿಗೊತ್ತಿ ಅದಾನಿಗಳಿಗೆ ಇಮೇಲ್ ಮೂಲಕ ಸಮನ್ಸ್ ಜಾರಿಗೊಳಿಸಲು ನ್ಯಾಯಾಲಯದ ಅನುಮತಿಯನ್ನು ಕೋರಿದೆ.
ಈ ಸುದ್ದಿ ಶುಕ್ರವಾರ ಭಾರತೀಯ ಶೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದ್ದು,Indian Express ಯ ವರದಿಯಂತೆ ಅದಾನಿ ಗ್ರೂಪ್ ಕಂಪನಿಗಳ ಶೇರುಗಳು ಶೇ.14.6ರವರೆಗೂ ಕುಸಿದಿದ್ದವು.
ಸಚಿವಾಲಯದ ನಿಲುವು ಮತ್ತು ಹೇಗ್ ನಿರ್ಣಯಕ್ಕೆ ಅನುಗುಣವಾಗಿ ಮೊದಲ ಬಾರಿ ಸಮನ್ಸ್ ಹೊರಡಿಸಿದ ಬಳಿಕ ವ್ಯರ್ಥವಾಗಿರುವ ಸಮಯವನ್ನು ಗಮನಿಸಿದರೆ ಭಾರತವು ಸಮನ್ಸ್ ಜಾರಿಗೊಳಿಸುತ್ತದೆ ಎಂದು ತಾನು ನಿರೀಕ್ಷಿಸಿಲ್ಲ ಎಂದು ಎಸ್ಇಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ. ಭಾರತ ಸರಕಾರದೊಂದಿಗಿನ ಸಂವಹನದ ಪ್ರತಿಗಳನ್ನು ಅದು ಅರ್ಜಿಯೊಂದಿಗೆ ಲಗತ್ತಿಸಿದೆ.
ಸಚಿವಾಲಯವು ಮೇ 2025 ಮತ್ತು ಡಿಸೆಂಬರ್ 2025ರಲ್ಲಿ; ಹೀಗೆ ಎರಡು ಬಾರಿ ಅದಾನಿಗಳಿಗೆ ಎಸ್ಇಸಿ ಸಮನ್ಸ್ ಜಾರಿಗೊಳಿಸಲು ನಿರಾಕರಿಸಿತ್ತು.
ನವಂಬರ್ 2024ರಲ್ಲಿ ದಾಖಲಿಸಿರುವ ದೂರಿನಲ್ಲಿ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರು 2021ರ ಅದಾನಿ ಗ್ರಿನ್ ಎನರ್ಜಿಯ ಸಾಲ ಬಾಂಡ್ಗಳ ಯೋಜನೆಗೆ ಸಂಬಂಧಿಸಿದಂತೆ ಸುಳ್ಳು ಮತ್ತು ದಾರಿ ತಪ್ಪಿಸುವ ಜಾಹೀರಾತುಗಳ ಮೂಲಕ ಯುಎಸ್ ಸೆಕ್ಯೂರಿಟಿ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಮೆರಿಕದ ನ್ಯಾಯ ಇಲಾಖೆಯು ಲಂಚದ ಆರೋಪದಲ್ಲಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಸಂಬಂಧಿತ ಆರು ಸಂಸ್ಥೆಗಳ ವಿರುದ್ಧ ದೋಷಾರೋಪಣೆ ಮಾಡಿದ ಬಳಿಕ ಅದಾನಿ ಗ್ರೂಪ್ 600 ಮಿಲಿಯನ್ ಡಾಲರ್ಗಳ ಬಾಂಡ್ ವಿತರಣೆ ಯೋಜನೆಯನ್ನು ಹಿಂದೆಗೆದುಕೊಂಡಿತ್ತು. ಕ್ರಿಮಿನಲ್ ಪ್ರಕರಣದ ಹೊರತಾಗಿ ಸೆಕ್ಯೂರಿಟಿಸ್ ಕಾನೂನುಗಳ ಉಲ್ಲಂಘನೆ ಆರೋಪದಲ್ಲಿ ಸಿವಿಲ್ ಮೊಕದ್ದಮೆಯನ್ನು ಎಸ್ಇಸಿ ಮುಂದುವರಿಸಿದೆ.
ಫೆ.2025ರಲ್ಲಿ ಎಸ್ಇಸಿ ಹೇಗ್ ನಿರ್ಣಯದಡಿ ಅದಾನಿಗಳಿಗೆ ಸಮನ್ಸ್ ಜಾರಿಗೊಳಿಸಲು ನೆರವಾಗುವಂತೆ ವಿಧ್ಯುಕ್ತ ಮನವಿಯನ್ನು ಕಾನೂನು ಸಚಿವಾಲಯಕ್ಕೆ ಸಲ್ಲಿಸಿತ್ತು.
ಸಮನ್ಸ್ ಜೊತೆಗೆ ಲಗತ್ತಿಸಿರುವ ಪತ್ರದಲ್ಲಿ ಶಾಯಿಯಿಂದ ಮಾಡಿದ ಸಹಿಯಿಲ್ಲ,ಅಗತ್ಯ ಫಾರಮ್ಗಳ ಮೇಲೆ ಅಧಿಕೃತ ಮುದ್ರೆಯಿಲ್ಲ. ಹೀಗಾಗಿ ದಾಖಲೆಗಳು/ವಿನಂತಿಯನ್ನು ದೃಢೀಕರಿಸಲು ಸಾಧ್ಯವಿಲ್ಲ. ಆದ್ದರಿಂದ ಅಗತ್ಯ ಕ್ರಮಕ್ಕಾಗಿ ದಾಖಲೆಗಳನ್ನು ನಿಮಗೆ ಹಿಂದಿರುಗಿಸಲಾಗುತ್ತದೆ ಎಂದು ಸಚಿವಾಲಯವು ಎಸ್ಇಸಿ ಮನವಿಗೆ ತನ್ನ ಉತ್ತರದಲ್ಲಿ ತಿಳಿಸಿತ್ತು.
ನಂತರ ಅದೇ ತಿಂಗಳು ದಾಖಲೆಗಳನ್ನು ಮರುಸಲ್ಲಿಸಿದ್ದ ಎಸ್ಇಸಿ ಹೇಗ್ ನಿರ್ಣಯದಡಿ ಇಂತಹ ಔಪಚಾರಿಕತೆಗಳು ಕಡ್ಡಾಯವಲ್ಲ ಎಂದು ವಾದಿಸಿತ್ತು. ಡಿಸೆಂಬರ್ನಲ್ಲಿ ಕಾನೂನು ಸಚಿವಾಲಯವು ಅಮೆರಿಕದ ಕಾನೂನನ್ನು ಉಲ್ಲೇಖಿಸಿ ಸಮನ್ಸ್ ಜಾರಿಗೆ ಮತ್ತೊಮ್ಮೆ ನಿರಾಕರಿಸಿತ್ತು.
ಅದಾನಿ ಗ್ರೂಪ್ ತನ್ನ ವಿರುದ್ಧ ಎಸ್ಇಸಿ ಆರೋಪಗಳನ್ನು ನಿರಾಧಾರವೆಂದು ಪದೇ ಪದೇ ತಿರಸ್ಕರಿಸಿದ್ದು,ಸಾಧ್ಯವಿರುವ ಎಲ್ಲ ಕಾನೂನು ಮಾರ್ಗಗಳನ್ನು ಬಳಸಿಕೊಳ್ಳುವುದಾಗಿ ಹೇಳಿದೆ.
ಶುಕ್ರವಾರ ರಾತ್ರಿ ಶೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಹೇಳಿಕೆಯಲ್ಲಿ ಅದಾನಿ ಗ್ರೀನ್,ಕಂಪನಿಯು ಈ ಪ್ರಕ್ರಿಯೆಯಲ್ಲಿ ಕಕ್ಷಿಯಲ್ಲ ಮತ್ತು ಅದರ ವಿರುದ್ಧ ಅಮೆರಿಕದ ವಿದೇಶಿ ಭ್ರಷ್ಟಾಚಾರ ಕಾಯ್ದೆಯ ಉಲ್ಲಂಘನೆ ಆರೋಪವನ್ನು ಹೊರಿಸಲಾಗಿಲ್ಲ. ಎಸ್ಇಸಿ ಪ್ರಕ್ರಿಯೆಯಗಳು ಸಿವಿಲ್ ಸ್ವರೂಪದ್ದಾಗಿವೆ ಎಂದು ತಿಳಿಸಿದೆ.







