ಭಾರತದ ಮಾನವಸಹಿತ ಬಾಹ್ಯಾಕಾಶ ಯಾನದ ಆರಂಭ: ಬಾಹ್ಯಾಕಾಶದಿಂದ ಶುಭಾಂಶು ಸಂದೇಶ

ಶುಭಾಂಶು ಶುಕ್ಲಾ | PTI
ಹೊಸದಿಲ್ಲಿ: ಆ್ಯಕ್ಸಿಯಮ್ 4 ಮಿಷನ್ ಫ್ಲೋರಿಡದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾದ 10 ನಿಮಿಷಗಳಲ್ಲಿ, ನಾವು ಬಾಹ್ಯಾಕಾಶ ತಲುಪಿದ್ದೇವೆ ಎಂಬ ಸಂದೇಶವನ್ನು ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಕಳುಹಿಸಿದ್ದಾರೆ.
’’ನಮಸ್ಕಾರ, ನನ್ನ ಪ್ರೀತಿಯ ದೇಶವಾಸಿಗಳೇ, ಇದೊಂದು ರೋಮಾಂಚಕಾರಿ ಪ್ರಯಾಣ. 41 ವರ್ಷಗಳ ನಂತರ ನಾವು ಬಾಹ್ಯಾಕಾಶ ತಲುಪಿದ್ದೇವೆ’’ ಎಂದು ಶುಭಾಂಶು ಶುಕ್ಲಾ ತನ್ನ ಸಂದೇಶದಲ್ಲಿ ಹೇಳಿದ್ದಾರೆ.
‘‘ನಾವು ಸೆಕೆಂಡ್ಗೆ 7.5 ಕಿ.ಮೀ ವೇಗದಲ್ಲಿ ಭೂಮಿಯ ಸುತ್ತ ಸುತ್ತುತ್ತಿದ್ದೇವೆ. ನನ್ನ ಹೆಗಲ ಮೇಲೆ ಅಚ್ಚೊತ್ತಿರುವ ಭಾರತೀಯ ತ್ರಿವರ್ಣ ಧ್ವಜ ನಾನು ನಿಮ್ಮೆಲ್ಲರೊಂದಿಗೇ ಇದ್ದೇನೆ ಎಂದು ನೆನಪಿಸುತ್ತಿದೆ. ಇದು ಕೇವಲ ಅಂತರ್ರಾಷ್ಟ್ರೀಯ ಬಾಹ್ಯಾಕಾಶಕ್ಕೆ ಪ್ರಯಾಣವಲ್ಲ, ಇದು ಭಾರತದ ಮಾನವಸಹಿತ ಬಾಹ್ಯಾಕಾಶ ಪ್ರಯಾಣದ ಆರಂಭ. ನೀವೆಲ್ಲರೂ ಈ ಪ್ರಯಾಣದ ಭಾಗವಾಗಿರಬೇಕು ಎಂದು ನಾನು ಬಯಸುತ್ತೇನೆ’’ ಎಂದು ಅವರು ಹೇಳಿದ್ದಾರೆ.
► ಪ್ರಧಾನಿ, ರಾಷ್ಟ್ರಪತಿ ಅಭಿನಂದನೆ
ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣಿಸುತ್ತಿರುವ ಶುಭಾಂಶು ಶುಕ್ಲಾರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಅಭಿನಂದಿಸಿ ಶುಭ ಹಾರೈಸಿದ್ದಾರೆ.
‘‘ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಭಾರತದ ಪಾಲಿಗೆ ಹೊಸತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ತಾರೆಗಳತ್ತ ಭಾರತೀಯನೊಬ್ಬನ ಈ ಪ್ರಯಾಣವು ಇಡೀ ದೇಶಕ್ಕೆ ರೋಮಾಂಚನ ತಂದಿದೆ. ಅವರು ಹಾಗೂ ಅವರ ಸಹ ಪ್ರಯಾಣಿಕರು ‘ವಸುಧೈವ ಕುಟುಂಬಕಂ’ (ಇಡೀ ವಿಶ್ವವೇ ಒಂದು ಕುಟುಂಬ) ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ವೈಜ್ಞಾನಿಕ ಹಾಗೂ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಸಾಧನೆಗೆ ಕರಣವಾಗಲಿರುವ ಈ ಯೋಜನೆಯಲ್ಲಿ ಭಾಗಿಯಾದ ಎಲ್ಲರಿಗೂ ಶುಭ ಹಾರೈಕೆಗಳು’’ ಎಂದು ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ.
‘‘ಭಾರತ, ಹಂಗೇರಿ, ಪೋಲ್ಯಾಂಡ್ ಹಾಗೂ ಅಮೆರಿದದ ಬಾಹ್ಯಾಕಾಶ ಯಾನಿಗಳಿರುವ ಬಾಹ್ಯಾಕಾಶ ನೌಕೆಯ ಯಶಸ್ವಿ ಉಡಾವಣೆಯಾಗಿರುವುದು ಶ್ಲಾಘನೀಯ. ಭಾರತೀಯ ಬಾಹ್ಯಾಕಾಶ ಯಾನಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪುವ ಮೊದಲ ಭಾರತೀಯನಾಗಲಿದ್ದಾರೆ. ಈ ದೇಶದ ನೂರಾ ನಲ್ವತ್ತು ಕೋಟಿ ಜನರ ಶುಭ ಹಾರೈಕೆಗಳು, ಭರವಸೆಗಳು ಮತ್ತು ನಿರೀಕ್ಷೆಗಳು ಅವರ ಜೊತೆಗಿವೆ. ಅವರಿಗೆ ಹಾಗೂ ಅವರ ಜೊತೆಗಿರುವ ಎಲ್ಲಾ ಬಾಹ್ಯಾಕಾಶ ಯಾನಿಗಳಿಗೆ ಶುಭ ಹಾರೈಕೆಗಳು’’ ಎಂದು ಪ್ರಧಾನಿ ನರೇಂದ್ರ ಮೋದಿ ತನ್ನ ಅಭಿನಂದನಾ ಸಂದೇಶದಲ್ಲಿ ಹೇಳಿದ್ದಾರೆ.
►ಉಡಾವಣೆ 5 ಬಾರಿ ಮುಂದೂಡಿಕೆ
ಆಕ್ಸಿಯಮ್ 4 ಮಿಶನ್ ಎನ್ನುವುದು ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸುವ ಯೋಜನೆಯಾಗಿದೆ.
ಈ ಹಿಂದೆಯೇ ಉಡಾವಣೆಗೆ ನಡೆಯಬೇಕಾಗಿತ್ತಾದರೂ ವಿವಿಧ ಕಾರಣಗಳಿಂದ ಈ ಮಿಷನ್ ಅನ್ನು ಐದು ಬಾರಿ ಮುಂದೂಡಲಾಯಿತು.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಆ್ಯಕ್ಸಿಯಮ್ 4 ಮಿಶನ್ನ ಪೈಲಟ್ ಆಗಿದ್ದಾರೆ.
ಆ್ಯಕ್ಸಿಯಮ್ 4 ಮಿಷನ್ಅನ್ನು ನಾಸಾ ಮತ್ತು ಸ್ಪೇಸ್ಎಕ್ಸ್ ಸಹಭಾಗಿತ್ವದಲ್ಲಿ ಅಮೆರಿಕದ ಖಾಸಗಿ ಬಾಹ್ಯಾಕಾಶ ಕಂಪೆನಿ ಆಕ್ಸಿಯಮ್ ಸ್ಪೇಸ್ ನಿರ್ವಹಿಸುತ್ತಿದೆ.
ಮೂಲ ಯೋಜನೆಯಂತೆ, ಮಿಶನ್ ಮೇ 29 ರಂದು ಫ್ಲೋರಿಡದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ನ ಫಾಲ್ಕನ್ 9 ರಾಕೆಟ್ನಲ್ಲಿ ಉಡಾವಣೆಗೊಳ್ಳಬೇಕಾಗಿತ್ತು.
ಆದರೆ ಫಾಲ್ಕನ್ 9 ರಾಕೆಟ್ ಸನ್ನದ್ಧಗೊಳಿಸುವಲ್ಲಿನ ವಿಳಂಬ, ಹವಾಮಾನ ಪರಿಸ್ಥಿತಿಗಳು, ಫಾಲ್ಕನ್ 9 ರಾಕೆಟ್ನಲ್ಲಿ ದ್ರವ ಆಮ್ಲಜನಕ ಸೋರಿಕೆ ಮತ್ತು ಉಡ್ಡಯನ ಕೇಂದ್ರದಲ್ಲಿನ ಯಾಂತ್ರಿಕ ದೋಷ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಉಡ್ಡಯನವನ್ನು ಮುಂದೂಡುತ್ತಲೇ ಬರಲಾಗಿತ್ತು.
ಜೂನ್ 25 ಉಡ್ಡಯನಕ್ಕೆ ನಾಸಾ ಘೋಷಿಸಿದ ಆರನೇ ದಿನಾಂಕವಾಗಿತ್ತು. ಕೊನೆಗೂ ಅದು ಇಂದು ಯಶಸ್ವಿ ಉಡಾವಣೆಯಾಗಿದೆ.
►ಏನಿದು ಆ್ಯಕ್ಸಿಯಮ್ 4 ಮಿಷನ್?
ಹಲವಾರು ಕಾರಣಗಳಿಂದಾಗಿ ಆ್ಯಕ್ಸಿಯಮ್ 4 ಮಿಶನ್ ಭಾರತಕ್ಕೆ ಮಹತ್ವದ್ದಾಗಿದೆ. ರಾಕೇಶ್ ಶರ್ಮಾ ಅವರ 1984 ರ ಮಿಶನ್ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಪಾತ್ರರಾಗಿದ್ದಾರೆ. ಜೊತೆಗೆ, ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪುವ ಪ್ರಪ್ರಥಮ ಭಾರತೀಯ ಅವರಾಗಲಿದ್ದಾರೆ.
ಈ ಯೋಜನೆಯಲ್ಲಿ, ಶುಭಾಂಶು ಶುಕ್ಲಾ ನಾಸಾ ಜೊತೆ ಜಂಟಿ ಸಂಶೋಧನೆಯಲ್ಲಿ ಭಾಗಿಯಾಗಲಿದ್ದಾರೆ. ಇದು ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಮುನ್ನಡೆಗೆ ಗಮನಾರ್ಹ ಕೊಡುಗೆ ನೀಡಲಿದೆ.
ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ 14 ದಿನಗಳ ವಾಸ್ತವ್ಯದ ಸಮಯದಲ್ಲಿ, ಇಸ್ರೋ ಹಲವಾರು ರಾಷ್ಟ್ರೀಯ ಸಂಶೋಧನೆಗಳು ಹಾಗೂ ಅಭಿವೃದ್ಧಿ ಪ್ರಯೋಗಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಮಂಡಿಸಿರುವ ಏಳು ಮೈಕ್ರೋಗ್ರಾವಿಟಿ ಪ್ರಯೋಗಗಳನ್ನು ನಡೆಸಲಿದೆ ಎಂದು ವರದಿಗಳು ಹೇಳಿವೆ.
ಈ ಏಳು ಪ್ರಯೋಗಗಳಿಗೆ ಹೆಚ್ಚುವರಿಯಾಗಿ, ನಾಸಾ ಮತ್ತು ಐಎಸ್ಆರ್ಪಿ ಮಾನವ ಸಂಶೋಧನಾ ಕಾರ್ಯಕ್ರಮಗಳನ್ನು
ಕೇಂದ್ರೀಕರಿಸಿದ ಐದು ಇತರ ಪ್ರಯೋಗಗಳನ್ನೂ ನಡೆಸಲಿವೆ.
► ಶುಭಾಂಶು ಶುಕ್ಲಾ ಯಾರು?
ಭಾರತೀಯ ವಾಯುಪಡೆಯ ಅನುಭವಿ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಕ್ಟೋಬರ್ 10, 1985 ರಂದು ಉತ್ತರಪ್ರದೇಶದ ಲಕ್ನೋದಲ್ಲಿ ಜನಿಸಿದರು.
ಜೂನ್ 2006 ರಲ್ಲಿ ಅವರು ಭಾರತೀಯ ವಾಯುಪಡೆಯ ಫೈಟರ್ ವಿಂಗ್ಗೆ ನಿಯೋಜನೆಗೊಂಡರು. ಅವರು ವಿವಿಧ ಯುದ್ಧ ವಿಮಾನಗಳಲ್ಲಿ 2,000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ.
ಅವರಿ 2024 ಮಾರ್ಚ್ನಲ್ಲಿ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಏರಿದರು. ಅವರು ಫೈಟರ್ ಕೋಂಬ್ಯಾಟ್ ಲೀಡರ್ ಕೂಡ ಆಗಿದ್ದಾರೆ.
2019ರಲ್ಲಿ ಶುಭಾಂಶು ಅವರನ್ನು ಗಗನಯಾನಕ್ಕೆ ಇಸ್ರೋ ಆಯ್ಕೆ ಮಾಡಿತ್ತು. ಅವರು ರಶ್ಯದ ಮಾಸ್ಕೋದ ಸ್ಟಾರ್ ಸಿಟಿಯಲ್ಲಿರುವ ಯೂರಿ ಗ್ಯಾಗರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿ ಪಡೆದಿದ್ದಾರೆ.







