ಭಾರತದ SIR ಪ್ರಜಾಪ್ರಭುತ್ವ ಮತ್ತು ಮುಸ್ಲಿಮರಿಗೆ ಬೆದರಿಕೆಯೊಡ್ಡಿದೆ: ಟೀಕಾಕಾರರು

Photo Credit : theguardian.com
ಹೊಸದಿಲ್ಲಿ,ಡಿ.17: ದೇಶಾದ್ಯಂತ ನಡೆಯುತ್ತಿರುವ ವಿವಾದಾತ್ಮಕ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (SIR) ನಡುವೆ ಪ್ರತಿಪಕ್ಷಗಳು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಎಚ್ಚರಿಕೆ ನೀಡಿವೆ. ಈ ಪ್ರಕ್ರಿಯೆಯು ಅಲ್ಪಸಂಖ್ಯಾತರನ್ನು ಮತದಾನದ ಹಕ್ಕುಗಳಿಂದ ವಂಚಿತಗೊಳಿಸುತ್ತದೆ ಮತ್ತು ಆಡಳಿತಾರೂಢ ನರೇಂದ್ರ ಮೋದಿ ಸರಕಾರದ ಅಧಿಕಾರವನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂದು ಟೀಕಾಕಾರರು ಹೇಳಿದ್ದಾರೆ.
ಒಂಭತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ SIR ಕುರಿತು ಕಳೆದ ವಾರ ಸಂಸತ್ತಿನಲ್ಲಿ ತೀವ್ರ ಚರ್ಚೆಗಳು ನಡೆದಿದ್ದವು. ಇದು ದಶಕಗಳಲ್ಲಿ ಮತದಾರರ ಪಟ್ಟಿಗಳ ಅತ್ಯಂತ ದೊಡ್ಡ ಪರಿಷ್ಕರಣೆಗಳಲ್ಲಿ ಒಂದಾಗಿದೆ.
ಬಡ ಮತ್ತು ಅಲ್ಪಸಂಖ್ಯಾತ ಮತದಾರರನ್ನು, ವಿಶೇಷವಾಗಿ ಮುಸ್ಲಿಮರನ್ನು ‘ಅಕ್ರಮ ವಲಸಿಗರು’ ಎಂದು ಹೆಸರಿಸಿ ಅವರ ಮತದಾನದ ಹಕ್ಕುಗಳನ್ನು ಕಿತ್ತುಕೊಳ್ಳಲು ಮತ್ತು ಮೋದಿ ಸರಕಾರದ ಲಾಭಕ್ಕಾಗಿ ಮತದಾರರ ಪಟ್ಟಿಗಳನ್ನು ತಿರುಚಲು SIR ಅನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕರು ಪ್ರತಿಪಾದಿಸಿದ್ದಾರೆ.
ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ, ಮುಖ್ಯವಾಗಿ ಮುಸ್ಲಿಮರು SIRನಿಂದಾಗಿ ಹಕ್ಕು ನಿರಾಕರಣೆ ಮತ್ತು ಗಡಿಪಾರು ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಟೀಕಾಕಾರರು ಆರೋಪಿಸಿದ್ದರೆ, ಭಾರತದಲ್ಲಿ ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾದೇಶಿ ಹಿಂದುಗಳು ತಮಗೆ ಪೌರತ್ವದ ಭರವಸೆಯನ್ನು ನೀಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ ಅಸ್ಸಾಮಿನಲ್ಲಿ ನಡೆದಂತೆ SIR ಅನ್ನು ಗುಪ್ತ NRCಯನ್ನಾಗಿ ಬಳಸಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಅಸ್ಸಾಮಿನಲ್ಲಿ NRCಯಿಂದಾಗಿ ಸಾವಿರಾರು ಜನರು, ಮುಖ್ಯವಾಗಿ ಮುಸ್ಲಿಮರು ಬಂಧನ ಕೇಂದ್ರಗಳಿಗೆ ತಳ್ಳಲ್ಪಟ್ಟಿದ್ದಾರೆ ಅಥವಾ ಪೌರತ್ವ ನ್ಯಾಯಮಂಡಳಿಗಳಲ್ಲಿ ಹೋರಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೆಲವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿದೆ.
SIR ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳನ್ನು ನಿರಾಕರಿಸಿರುವ ಬಿಜೆಪಿ, SIR ಅನ್ನು ಮತದಾರರ ಪಟ್ಟಿಗಳನ್ನು‘ನುಸುಳುಕೋರರಿಂದ’ಮುಕ್ತಗೊಳಿಸಲು ನಿಯಮಿತ ಆಡಳಿತಾತ್ಮಕ ಪ್ರಕ್ರಿಯೆ ಎಂದು ಬಣ್ಣಿಸಿದೆ.
‘ನುಸುಳುಕೋರ’ ಪದವು ಹೆಚ್ಚಾಗಿ ನೆರೆಯ ಬಾಂಗ್ಲಾದೇಶದಿಂದ ಅಕ್ರಮವಾಗಿ ದೇಶವನ್ನು ಪ್ರವೇಶಿಸುವ ಮುಸ್ಲಿಮರನ್ನು ಉಲ್ಲೇಖಿಸುತ್ತದೆ.
SIR ಮತದಾರರ ಪಟ್ಟಿಗಳಿಂದ ಮೃತ, ಅಕ್ರಮ ಮತ್ತು ನಕಲಿ ಮತದಾರರನ್ನು ತೆಗೆದುಹಾಕುವ ಪ್ರಕ್ರಿಯೆಯಾಗಿದೆ ಎಂದು ಚುನಾವಣಾ ಆಯೋಗವು ಹೇಳಿಕೊಂಡಿದೆಯಾದರೂ, ಅದು ಬಿಜೆಪಿಯಿಂದ ನಿಯಂತ್ರಿಸಲ್ಪಡುತ್ತಿದೆ ಮತ್ತು ಚುನಾವಣೆಗಳನ್ನು ರೂಪಿಸಲು ಅಧಿಕಾರದಲ್ಲಿರುವವರ ಜೊತೆ ಶಾಮೀಲಾಗಿದೆ ಎಂದು ರಾಹುಲ್ ಸಂಸತ್ತಿನಲ್ಲಿ ಆರೋಪಿಸಿದ್ದಾರೆ.
ಬಿಹಾರದಲ್ಲಿ ನಡೆಸಲಾದ SIR ಈಗಾಗಲೇ ಹಲವಾರು ಕಾನೂನು ಸವಾಲುಗಳನ್ನು ಎದುರಿಸುತ್ತಿದೆ. ಅಲ್ಲಿ ಮತದಾರರ ಪಟ್ಟಿಗಳಿಂದ ತೆಗೆಯಲ್ಪಟ್ಟವರಲ್ಲಿ ಹೆಚ್ಚಿನವರು ಮುಸ್ಲಿಮರು ಅಥವಾ ಬಿಜೆಪಿಯ ವೋಟ್ ಬ್ಯಾಂಕ್ ಅಲ್ಲದ ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. SIR ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಐತಿಹಾಸಿಕ ಗೆಲುವನ್ನು ಪಡೆದಿದೆ.
ಜಾತ್ಯತೀತ ಭಾರತವನ್ನು ಹಿಂದು ರಾಷ್ಟ್ರವಾಗಿ ಮರುರೂಪಿಸಲು ಬಯಸಿರುವ ಬಿಜೆಪಿ ಹಿಂದು ರಾಷ್ಟ್ರೀಯತೆಯ ಸಿದ್ಧಾಂತವನ್ನು ಬಹಿರಂಗವಾಗಿ ಅಪ್ಪಿಕೊಂಡಿದೆ. ಪಕ್ಷದ 11 ವರ್ಷಗಳ ಅಧಿಕಾರಾವಧಿಯಲ್ಲಿ ಅದರ ನೀತಿಗಳು ಮತ್ತು ವಿಚಾರಧಾರೆಗಳು ದೇಶವನ್ನು ಧರ್ಮದ ಆಧಾರದಲ್ಲಿ ತೀವ್ರವಾಗಿ ಧ್ರುವೀಕರಿಸಿದ್ದು, ಇದು ಮುಸ್ಲಿಂ ವಿರೋಧಿ ದ್ವೇಷವು ಉಲ್ಬಣಗೊಳ್ಳಲು ಕಾರಣವಾಗಿದೆ. ಬಿಜೆಪಿ ರಾಜ್ಯಗಳಲ್ಲಿ ಅಭೂತಪೂರ್ವ ಅಧಿಕಾರವನ್ನು ಗಳಿಸಿದ್ದು, ಅದರ ಆಡಳಿತ ಮೈತ್ರಿಕೂಟವು 28 ರಾಜ್ಯಗಳ ಪೈಕಿ 21ನ್ನು ಆಳುತ್ತಿದೆ.
ಆಡಳಿತಾರೂಢ ಬಿಜೆಪಿಯು SIR ಅನ್ನು ಪೌರತ್ವದ ಗುಪ್ತ ಸಮೀಕ್ಷೆಗಾಗಿ ಬಳಸುತ್ತಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.







