IndiGo ಗೆ ಹೊಸ ಸಂಕಷ್ಟ; 58.75 ಕೋಟಿ ರೂ. ತೆರಿಗೆ ಪಾವತಿಗೆ ನೋಟಿಸ್

Photo Credit : PTI
ಚೆನ್ನೈ,ಡಿ.12: ದಿಲ್ಲಿಯಲ್ಲಿನ ಕೇಂದ್ರೀಯ ಜಿಎಸ್ಟಿ ಗಾಗಿನ ದಕ್ಷಿಣ ಆಯುಕ್ತರ ಕಾರ್ಯಾಲಯದಿಂದ 2020-21ನೇ ವಿತ್ತ ವರ್ಷದ 58.75 ಕೋಟಿ ರೂ.ಮೊತ್ತದ ತೆರಿಗೆ ದಂಡ ನೋಟಿಸ್ ಅನ್ನು ತಾನು ಸ್ವೀಕರಿಸಿರುವುದಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ಶುಕ್ರವಾರ ಬಹಿರಂಗಪಡಿಸಿದೆ. ಶುಕ್ರವಾರ ಶೇರು ಮಾರುಕಟ್ಟೆಗೆ ಸಲ್ಲಿಸಿದ ಫೈಲಿಂಗ್ ನಲ್ಲಿ ಸಂಸ್ಥೆಯು ಈ ವಿಷಯವನ್ನು ಪ್ರಕಟಿಸಿದೆ.
ಡಿ. 11ರಂದು ತಾನು ಈ ನೋಟಿಸ್ ಸ್ವೀಕರಿಸಿದ್ದು, ಇದು 2020-21ನೇ ಅವಧಿಯಲ್ಲಿನ ತೆರಿಗೆ ಫೈಲಿಂಗ್ ಗೆ ಸಂಬಂಧಿಸಿದಂತೆ ಇಲಾಖೆಯ ಪರಾಮರ್ಶನಾ ವರದಿಯಲ್ಲಿ ಈ ವಿಷಯವನ್ನು ಗುರುತಿಸಲಾಗಿದೆ ಎಂದು ಅದು ಹೇಳಿದೆ.
ಪ್ರಸಕ್ತ ತಾನು ನೋಟಿಸ್ ನಲ್ಲಿನ ಅಂಶಗಳ ಮೌಲ್ಯಮಾಪನ ನಡೆಸುತ್ತಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಕಾನೂನಾತ್ಮಕ ಆಯ್ಕೆಗಳು ಸೇರಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ. ತೆರಿಗೆ ನಿಯಮಗಳಿಗೆ ತಾನು ಸಂಪೂರ್ಣ ಅನುಸರಣೆಯನ್ನು ಹೊಂದಿದ್ದು, ದಂಡ ವಿಧಿಸಿರುವ ಬಗ್ಗೆ ಕಾನೂನು ಹಾಗೂ ತೆರಿಗೆ ತಜ್ಞರ ಸಲಹೆಯಂತೆ ಕಾನೂನು ಹೋರಾಟ ನಡೆಸುವುದಾಗಿ ಇಂಡಿಗೊ ತಿಳಿಸಿದೆ.
ಇಂಡಿಗೊ ವಾಯುಯಾನ ಸಂಸ್ಥೆಯ ನೂರಾರು ವಿಮಾನಗಳ ಹಾರಾಟಗಳು ಸರಣಿಯಲ್ಲಿ ಸ್ಥಗಿತಗೊಂಡಿರುವ ಸಂದರ್ಭದಲ್ಲಿಯೇ, ಸಂಸ್ಥೆಗೆ ಈ ತೆರಿಗೆ ನೋಟಿಸ್ ನೀಡಲಾಗಿದೆ. ಕಳೆದ ಕೆಲವು ವಾರಗಳಿಂದ ವಿಮಾನ ಹಾರಾಟದಲ್ಲಿ ವ್ಯಾಪಕ ವಿಳಂಬ,ಸಂಚಾರ ರದ್ದತಿಯಲ್ಲಿ ಹೆಚ್ಚಳ, ಟಿಕೆಟ್ ಶುಲ್ಕ ಮರುಪಾವತಿ ಹಾಗೂ ಮರುಬುಕ್ಕಿಂಗ್ ವಿಷಯಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಗ್ರಾಹಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಇಂಡಿಗೊ ಈಗಾಗಲೇ ತೀವ್ರ ಒತ್ತಡವನ್ನು ಎದುರಿಸುತ್ತಿದೆ.







