ಇಂಧನದ ಕೊರತೆಯಿಂದ ಇಂಡಿಗೋ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ : ವರದಿ
'ಮೇಡೇ' ಕರೆ ನೀಡಿದ್ದ ಪೈಲಟ್!

ಸಾಂದರ್ಭಿಕ ಚಿತ್ರ | timesofindia
ಬೆಂಗಳೂರು: ಗುವಾಹಟಿಯಿಂದ ಚೆನ್ನೈಗೆ 168 ಪ್ರಯಾಣಿಕರನ್ನು ಹೊತ್ತು ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ ಇಂಧನದ ಕೊರತೆಯಿಂದಾಗಿ ಗುರುವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಬಗ್ಗೆ ವರದಿಯಾಗಿದೆ.
ಇಂಧನ ಕೊರತೆಯಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದಿಂದ ಸುಮಾರು 35 ಮೈಲುಗಳಷ್ಟು ದೂರದಲ್ಲಿ ಪೈಲಟ್ 'ಮೇಡೇ' ಕರೆ ನೀಡಿದ್ದರು ಎಂದು ಹೇಳಲಾಗಿದೆ.
ಗುರುವಾರ ಸಂಜೆ 4.45ಕ್ಕೆ ಗುವಾಹಟಿಯಿಂದ ಹೊರಟ ಇಂಡಿಗೋ ವಿಮಾನ ಸಂಜೆ 7.45ರ ವೇಳೆಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿತ್ತು. ಆದರೆ ಚೆನ್ನೈ ತಲುಪುವ ಸ್ವಲ್ಪ ಸಮಯದ ಮೊದಲು, ಪೈಲಟ್ ಇಂಧನ ಕಡಿಮೆಯಿರುವ ಬಗ್ಗೆ ಗಮನಿಸಿದರು. ಇದು ಗಮ್ಯಸ್ಥಾನದಲ್ಲಿ ಸುರಕ್ಷಿತ ಲ್ಯಾಂಡಿಂಗ್ ಬಗ್ಗೆ ಕಳವಳ ಉಂಟು ಮಾಡಿತ್ತು.
ಪೈಲಟ್ ತಕ್ಷಣ ಚೆನ್ನೈ ವಾಯು ಸಂಚಾರ ನಿಯಂತ್ರಣ (ಎಟಿಸಿ)ಯನ್ನು ಸಂಪರ್ಕಿಸಿದರು. ಈ ವೇಳೆ ಸುರಕ್ಷತಾ ಕಾರಣಗಳಿಗಾಗಿ ವಿಮಾನವನ್ನು ಬೆಂಗಳೂರಿಗೆ ತಿರುಗಿಸಲು ಸೂಚಿಸಲಾಯಿತು. ಜೂನ್ 19ರಂದು ರಾತ್ರಿ 8 ಗಂಟೆ ಸುಮಾರಿಗೆ ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.
ಬೆಂಗಳೂರಿನ ಟರ್ಮಿನಲ್ನಲ್ಲಿ ಇಂಧನ ತುಂಬಿದ ಬಳಿಕ ವಿಮಾನ ಮತ್ತೆ ಚೆನ್ನೈಗೆ ಹಾರಾಟ ನಡೆಸಿದೆ. ಅನಿರೀಕ್ಷಿತ ಮಾರ್ಗ ಬದಲಾವಣೆ ಮತ್ತು ವಿಳಂಬದಿಂದಾಗಿ ವಿಮಾನದಲ್ಲಿದ್ದ 170 ಪ್ರಯಾಣಿಕರು ಅನಾನುಕೂಲತೆಯನ್ನು ಎದುರಿಸಿದ್ದಾರೆ ಎನ್ನಲಾಗಿದೆ.
ಆದರೆ ಇಂಡಿಗೋ ಈ ಬಗ್ಗೆ ದೃಢಪಡಿಸಿಲ್ಲ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆಯಿಂದಾಗಿ ವಿಮಾನವನ್ನು ಬೆಂಗಳೂರಿಗೆ ತಿರುಗಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.







