ಬಾಂಬ್ ಬೆದರಿಕೆ ಹಿನ್ನೆಲೆ: ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೊ ವಿಮಾನ

ಸಾಂದರ್ಭಿಕ ಚಿತ್ರ (PTI)
ಮುಂಬೈ: ಬಾಂಬ್ ಬೆದರಿಕೆ ಸ್ವೀಕರಿಸಿದ ಹಿನ್ನೆಲೆಯಲ್ಲಿ, ಛತ್ತೀಸ್ ಗಢದಿಂದ ಆಗಮಿಸುತ್ತಿದ್ದ ಇಂಡಿಗೊ ವಿಮಾನವೊಂದು ಮುಂಬೈನ ಛತ್ರಪತಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ವಿಮಾನ ನಿಲ್ದಾಣದ ಹಾಟ್ ಲೈನ್ ಸಂಖ್ಯೆಗೆ ಈ ಬೆದರಿಕೆ ಕರೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 2.32ರ ವೇಳೆಗೆ ವಾಯು ಸಂಚಾರ ನಿಯಂತ್ರಕರು ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಇಂಡಿಗೊ ವಿಮಾನ ಸಂಖ್ಯೆ 6ಇ-6382ಗೆ ಪೂರ್ಣ ಪ್ರಮಾಣದ ತುರ್ತು ಭೂಸ್ಪರ್ಶವನ್ನು ಘೋಷಿಸಿದರು” ಎಂದು ಮುಂಬೈ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಮಧ್ಯಾಹ್ನ 2.47ರ ವೇಳೆಗೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ವಿಮಾನವನ್ನು ಭದ್ರತಾ ಶಿಷ್ಟಾಚಾರದ ಪ್ರಕಾರ ತಪಾಸಣೆಗೊಳಪಡಿಸಲು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ಯಲಾಯಿತು ಎಂದೂ ಮೂಲಗಳು ತಿಳಿಸಿವೆ. ಆದರೆ, ಆ ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ದರು ಎಂಬ ವಿಷಯವನ್ನು ಬಹಿರಂಗಗೊಳಿಸಲು ನಿರಾಕರಿಸಿವೆ.
ತಪಾಸಣೆಯ ವೇಳೆ ವಿಮಾನದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನದಲ್ಲಿ ಭಾರಿ ಭದ್ರತಾ ತಪಾಸಣೆಯನ್ನು ನಡೆಸಲಾಯಿತಾದರೂ, ಅದರಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.







