5ನೇ ದಿನವೂ ಹಾರದ IndiGo; 400ಕ್ಕೂ ಅಧಿಕ ಯಾನಗಳ ರದ್ದು

ಇಂಡಿಗೋ ವಿಮಾನ |Photo Credit : PTI
ಹೊಸದಿಲ್ಲಿ, ಡಿ. 5: ಇಂಡಿಗೋ ವಿಮಾನ ಪ್ರಯಾಣಿಕರ ಹಾಹಾಕಾರ ಸತತ ಐದನೇ ದಿನವಾದ ಶನಿವಾರವೂ ಮುಂದುವರಿದಿದೆ. ಪೈಲಟ್ ಗಳ ಅಲಭ್ಯತೆಯ ಹಿನ್ನೆಲೆಯಲ್ಲಿ, ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಲ್ಲಿನ 400ಕ್ಕೂ ಅಧಿಕ ಯಾನಗಳನ್ನು ವಿಮಾನಯಾನ ಕಂಪೆನಿಯು ರದ್ದುಪಡಿಸಿತು ಹಾಗೂ ಸಾವಿರಾರು ಪ್ರಯಾಣಿಕರು ತಮ್ಮ ಗಮ್ಯ ಸ್ಥಾನವನ್ನು ತಲುಪದೆ ಪರದಾಡಿದರು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 124 ಯಾನಗಳು, ಮುಂಬೈ ವಿಮಾನ ನಿಲ್ದಾಣದಲ್ಲಿ 109 ಯಾನಗಳು, ದಿಲ್ಲಿ ವಿಮಾನ ನಿಲ್ದಾಣದಲ್ಲಿ 106 ಯಾನಗಳು ಮತ್ತು ಹೈದರಾಬಾದ್ ನಲ್ಲಿ 66 ಯಾನಗಳನ್ನು ಇಂಡಿಗೋ ಶನಿವಾರ ರದ್ದುಗೊಳಿಸಿತು.
ವಿಮಾನಯಾನಗಳು ಸಾವಕಾಶವಾಗಿ ಪುನರಾರಂಭಗೊಳ್ಳುತ್ತಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದರೂ, ದೇಶಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಶನಿವಾರವೂ ವಿಮಾನಯಾನ ವಿಳಂಬ, ಸುದೀರ್ಘ ಸರತಿ ಸಾಲುಗಳು ಮತ್ತು ಪ್ರಯಾಣಿಕರ ಜಂಗುಳಿ ಕಂಡುಬಂತು.
ತಮ್ಮ ಯಾನಗಳು ರದ್ದಾಗಿರುವುದು ಅಥವಾ ವಿಳಂಬಗೊಂಡಿರುವುದು ಹೆಚ್ಚಿನ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಿಗೆ ತಲುಪಿದ ಬಳಿಕವಷ್ಟೇ ತಿಳಿಯಿತು.
ವಿಮಾನಯಾನಗಳನ್ನು ನಿರ್ವಹಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ, ಇಂಡಿಗೋದ ವೈಫಲ್ಯದ ಬಗ್ಗೆ ತನಿಖೆ ನಡೆಸಲು ನಿಯೋಜಿಸಲ್ಪಟ್ಟಿರುವ ನಾಲ್ವರು ಸದಸ್ಯರ ಉನ್ನತ ಮಟ್ಟದ ತನಿಖಾ ಸಮಿತಿಯ ಉಸ್ತುವಾರಿಯನ್ನು ಡಿಜಿಸಿಎ ವಹಿಸಿದೆ. ನಾಲ್ವರು ಸದಸ್ಯರ ಸಮಿತಿಯು ಸಿಬ್ಬಂದಿ ನಿರ್ವಹಣೆ ವೈಫಲ್ಯ, ನಿಯಮಗಳ ಅನುಷ್ಠಾನಕ್ಕೆ ಯೋಜನೆ ರೂಪಿಸುವಲ್ಲಿನ ವೈಫಲ್ಯ ಮತ್ತು ಆಂತರಿಕ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಲಿದೆ. ಅದು ಎರಡು ವಾರಗಳಲ್ಲಿ ತನ್ನ ವರದಿ ಸಲ್ಲಿಸಲಿದೆ.
ವಿಮಾನಯಾನವು ನಿಧಾನವಾಗಿ ಹಳಿಗೆ ಮರಳಲಿದೆ ಎಂದ ಹೇಳಿರುವ ಇಂಡಿಗೋದ ಉನ್ನತ ಅಧಿಕಾರಿಗಳು, ಡಿಸೆಂಬರ್ ಮಧ್ಯಭಾಗದಲ್ಲಷ್ಟೇ ಪರಿಸ್ಥಿತಿಯು ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂದಿದ್ದಾರೆ.
ಪೈಲಟ್ ಗಳ ಅಲಭ್ಯತೆಯ ಹಿನ್ನೆಲೆಯಲ್ಲಿ ಈ ವಾರದ ಪ್ರಾರಂಭದಲ್ಲಿ ಆರಂಭಗೊಂಡ ಬಿಕ್ಕಟ್ಟು ಈಗಲೂ ಮುಂದುವರಿದಿದೆ. ಪೈಲಟ್ ಗಳ ವಾರದ ವಿಶ್ರಾಂತಿ ಅವಧಿಯನ್ನು ಹೆಚ್ಚಿಸಿ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲ (ಡಿಜಿಸಿಎ)ಯವು ಹೊರಡಿಸಿರುವ ನೂತನ ಆದೇಶದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ನೂತನ ಆದೇಶದ ಜಾರಿಗೆ ಡಿಜಿಸಿಎ ಸಾಕಷ್ಟು ಸಮಯಾವಕಾಶ ನೀಡಿದ್ದರೂ ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಮಾಡಲು ಇಂಡಿಗೊ ಸಂಸ್ಥೆಯು ವಿಫಲವಾದ ಹಿನ್ನೆಲೆಯಲ್ಲಿ ವಿಮಾನ ಯಾನವು ಭಾರೀ ಪ್ರಮಾಣದಲ್ಲಿ ಅಸ್ತವ್ಯಸ್ತಗೊಂಡಿದೆ.
ನೂತನ ನಿಯಮಗಳನ್ನು ಡಿಜಿಸಿಎ ಶುಕ್ರವಾರ ತಾತ್ಕಾಲಿಕವಾಗಿ ತಡೆಹಿಡಿದಿದೆ.
ಶನಿವಾರ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯ ಆರು ಯಾನಗಳನ್ನು ರದ್ದುಗೊಳಿಸಲಾಯಿತು. ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ 19 ಯಾನಗಳನ್ನು ಕೈಬಿಡಲಾಯಿತು. ಅದೇ ವೇಳೆ, ಪುಣೆ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ 42 ಯಾನಗಳನ್ನು ರದ್ದುಪಡಿಸಲಾಯಿತು.
ಭಾರತದ ದೇಶಿ ವಿಮಾನ ಸಂಚಾರದಲ್ಲಿ ಮೂರನೇ ಎರಡರಷ್ಟು ಪಾಲು ಹೊಂದಿರುವ ಇಂಡಿಗೋ ಸುಮಾರು 2,300 ಯಾನಗಳನ್ನು ಪ್ರತಿನಿತ್ಯ ನಿರ್ವಹಿಸುತ್ತಿದೆ. ಶುಕ್ರವಾರ ಅದು ಒಂದು ಸಾವಿರಕ್ಕೂ ಅಧಿಕ ಯಾನಗಳನ್ನು ರದ್ದುಪಡಿಸಿತ್ತು.
► ಮಧ್ಯಪ್ರವೇಶ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ
ವಿಮಾನ ಸಂಚಾರದಲ್ಲಿನ ಅಸ್ತವ್ಯಸ್ತ ಪರಿಸ್ಥಿತಿಯ ಬಗ್ಗೆ ತುರ್ತು ನ್ಯಾಯಾಂಗ ಮಧ್ಯಪ್ರವೇಶ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಒಂದು ದೂರು ದಾಖಲಾಗಿದೆ.
ಸಂತ್ರಸ್ತ ಪ್ರಯಾಣಿಕರ ಪರವಾಗಿ ದೂರು ಸಲ್ಲಿಸಿರುವ ವಕೀಲ ಅಮನ್ ಬಂಕ, ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡು ತುರ್ತು ವಿಚಾರಣೆಗೆ ವಿಶೇಷ ಪೀಠವೊಂದನ್ನು ರಚಿಸುವಂತೆ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದೆ.
ವಿಮಾನಯಾನ ವ್ಯವಸ್ಥೆಯ ಕುಸಿತದ ಕಾರಣಗಳ ಬಗ್ಗೆ ವಿವರವಾದ ವರದಿಗಳನ್ನು ಸಲ್ಲಿಸುವಂತೆ ನಾಗರಿಕ ವಾಯುಯಾನ ಸಚಿವಾಲಯ ಮತ್ತು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ಕ್ಕೆ ನಿರ್ದೇಶನಗಳನ್ನು ನೀಡುವಂತೆಯೂ ಅರ್ಜಿ ಕೋರಿದೆ.
ವೈದ್ಯಕೀಯ ತುರ್ತು ಚಿಕಿತ್ಸೆಗಳು, ಪರೀಕ್ಷೆಗಳು, ಸರಕಾರಿ ಕೆಲಸಗಳು ಅಥವಾ ಇತರ ತುರ್ತು ಕೆಲಸಗಳಿಗಾಗಿ ಪ್ರಯಾಣಿಸಬೇಕಾಗಿದ್ದವರು ಗಂಭೀರ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಹೇಳಿರುವ ಅರ್ಜಿದಾರರು, ಇದೊಂದು ‘‘ಮಾನವೀಯ ಬಿಕ್ಕಟ್ಟು’’ ಎಂಬುದಾಗಿ ಬಣ್ಣಿಸಿದರು.
►ನಿಯಮಗಳ ಸಡಿಲಿಕೆಗೆ ಪೈಲಟ್ ಗಳ ಸಂಘದ ತೀವ್ರ ವಿರೋಧ
ಈ ನಡುವೆ, ಪೈಲಟ್ ಗಳ ವಿಶ್ರಾಂತಿ ಅವಧಿಗೆ ಸಂಬಂಧಿಸಿದ ನಿಯಮಗಳಲ್ಲಿ ಇಂಡಿಗೋ ಸಂಸ್ಥೆಗೆ ಬೇಕಾದಂತೆ ವಿನಾಯಿತಿಗಳನ್ನು ನೀಡಿರುವ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ನಿರ್ಧಾರಕ್ಕೆ ವಿಮಾನಯಾನ ಪೈಲಟ್ ಗಳ ಅಸೋಸಿಯೇಶನ್ (ಎಎಲ್ಪಿಎ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಡಿಜಿಸಿಎಯ ಈ ಕ್ರಮವು ವಿಮಾನಯಾನ ಸಂಸ್ಥೆಗಳ ನಡುವೆ ಭೇದಭಾವವನ್ನು ಹುಟ್ಟುಹಾಕುತ್ತದೆ ಮತ್ತು ಪ್ರಯಾಣಿಕರ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತದೆ ಎಂದು ಅದು ಹೇಳಿದೆ.
ಶುಕ್ರವಾರ ಎಎಲ್ಪಿಎ ಇಂಡಿಯಾ ಮತ್ತು ಇತರ ಪೈಲಟ್ ಸಂಘಗಳೊಂದಿಗೆ ಸಭೆ ನಡೆಸಿದ ಬಳಿಕ, ಪೈಲಟ್ ಗಳ ವಿಶ್ರಾಂತಿಗೆ ಸಂಬಂಧಿಸಿದ ಪರಿಷ್ಕೃತ ನಿಯಮಗಳನ್ನು ಅಮಾನತಿನಲ್ಲಿಡಲು ತಾನು ನಿರ್ಧರಿಸಿರುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ಘೋಷಿಸಿತ್ತು.
‘‘ಸಚಿವಾಲಯದ ಈ ಕ್ರಮವು ನ್ಯಾಯಾಲಯದ ನಿರ್ದೇಶನಗಳಿಗೆ ವ್ಯತಿರಿಕ್ತವಾಗಿದೆ ಎಂಬ ಕಳವಳವನ್ನು ಎಎಲ್ಪಿಎ ಇಂಡಿಯಾ ಹೊಂದಿದೆ. ವಾಯಯಾನ ವಿಜ್ಞಾನದಲ್ಲಿ ಹೇಳಲಾಗಿರುವ ದಣಿವು-ನಿವಾರಕ ಕ್ರಮಗಳನ್ನು ಜಾರಿಗೊಳಿಸುವಂತೆ ನ್ಯಾಯಾಲಯ ಹೇಳಿದೆ’’ ಎಂದು ಶುಕ್ರವಾರ ತಡರಾತ್ರಿ ಹೊರಡಿಸಿದ ಹೇಳಿಕೆಯೊಂದರಲ್ಲಿ ಅಸೋಸಿಯೇಶನ್ ತಿಳಿಸಿದೆ.
ಪೈಲಟ್ ಗಳ ವಿಶ್ರಾಂತಿಗೆ ಸಂಬಂಧಿಸಿದ ಪರಿಷ್ಕೃತ ನಿಯಮಗಳನ್ನು ಅಮಾನತಿನಲ್ಲಿಟ್ಟಿರುವುದು ನ್ಯಾಯಾಂಗದ ಪರಮಾಧಿಕಾರದ ಉಲ್ಲಂಘನೆ ಮಾತ್ರವಲ್ಲ, ಪೈಲಟ್ ಗಳು ಮತ್ತು ಪ್ರಯಾಣಿಕರನ್ನು ಹೆಚ್ಚಿನ ಅಪಾಯಕ್ಕೂ ಒಡ್ಡಲಾಗಿದೆ ಎಂದು ಅದು ಹೇಳಿದೆ.
►ಪೈಲಟ್ ಗಳ ಪರಿಷ್ಕೃತ ವಿಶ್ರಾಂತಿ ನಿಯಮಗಳನ್ನು ಇಂಡಿಗೋ ವಿರೋಧಿಸಿತ್ತು
ಪೈಲಟ್ ಗಳ ವಿಶ್ರಾಂತಿ ಅವಧಿಯನ್ನು ಹೆಚ್ಚಿಸುವ ಪರಿಷ್ಕೃತ ನಿಯಮಗಳನ್ನು 2024ರ ಜನವರಿಯಲ್ಲಿ ಪರಿಚಯಿಸಿದಾಗ ಅವುಗಳನ್ನು ಮೊದಲಿಗೆ ವಿರೋಧಿಸಿದ್ದು ಇಂಡಿಗೋ.
ಈ ನಿಯಮ ಅನುಷ್ಠಾನಕ್ಕೆ ಹೆಚ್ಚಿನ ಸಿಬ್ಬಂದಿ ನಿಯೋಜನೆಯ ಅಗತ್ಯವಿರುವುದರಿಂದ ಅನುಷ್ಠಾನಕ್ಕೆ ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚಿನ ಸಮಯಾವಕಾಶ ಬೇಕು ಎಂಬುದಾಗಿ ಇಂಡಿಗೋ ವಾದಿಸಿತ್ತು.
ನೂತನ ನಿಯಮವು ಪೈಲಟ್ ಗಳ ವಾರದ ವಿಶ್ರಾಂತಿಯ ಅವಧಿಯನ್ನು 48 ಗಂಟೆಗಳಿಗೆ ವಿಸ್ತರಿಸುತ್ತದೆ ಮತ್ತು ರಾತ್ರಿ ಭೂಸ್ಪರ್ಶಗಳ ಸಂಖ್ಯೆಯನ್ನು ಆರರಿಂದ ಕೇವಲ ಎರಡಕ್ಕೆ ಇಳಿಸುತ್ತದೆ.
ಈ ಪ್ರಸ್ತಾವಗಳಿಗೆ ಆರಂಭದಲ್ಲಿ ಟಾಟಾ ಗುಂಪಿನ ಒಡೆತನದ ಇಂಡಿಯನ್ ಏರ್ಲೈನ್ಸ್ ಸೇರಿದಂತೆ ಇತರ ವಾಯುಯಾನ ಕಂಪೆನಿಗಳೂ ವಿರೋಧ ವ್ಯಕ್ತಪಡಿಸಿದ್ದವು.
ಆದರೆ, ದಿಲ್ಲಿ ಹೈಕೋರ್ಟ್ನ ನಿರ್ದೇಶನದಂತೆ ಅಂತಿಮವಾಗಿ ಒಂದು ವರ್ಷಕ್ಕೂ ಹೆಚ್ಚಿನ ವಿಳಂಬದ ಬಳಿಕ ನೂತನ ನಿಯಮಗಳನ್ನು ಡಿಜಿಸಿಎ ಹಂತಗಳಲ್ಲಿ ಜಾರಿಗೊಳಿಸಿತು.
ಮೊದಲ ಹಂತದಲ್ಲಿ ಜುಲೈ ಒಂದರಂದು ಪೈಲಟ್ ಗಳ ವಿಶ್ರಾಂತಿ ಹೆಚ್ಚಳದ ನಿಯಮವನ್ನು ಜಾರಿಗೊಳಿಸಲಾಯಿತು. ಬಳಿಕ, ನವೆಂಬರ್ ಒಂದರಂದು ರಾತ್ರಿ ಭೂಸ್ಪರ್ಶಗಳ ಸಂಖ್ಯೆಯನ್ನು ಎರಡಕ್ಕೆ ಇಳಿಸುವ ನಿಯಮವನ್ನು ಜಾರಿಗೆ ತರಲಾಯಿತು.
ಅವುಗಳು ಮೂಲತಃ 2024 ಮಾರ್ಚ್ ನಲ್ಲಿ ಜಾರಿಗೆ ಬರಬೇಕಾಗಿತ್ತು.







