Indore | ಕಲುಷಿತ ನೀರು ಸೇವನೆ; ಮತ್ತೊಬ್ಬರು ಮೃತ್ಯು, ಮೃತರ ಸಂಖ್ಯೆ 25ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ | Photo Credit : freepik
ಇಂದೋರ್ (ಮ.ಪ್ರ.), ಜ. 21: ಕಲುಷಿತ ನೀರು ಸೇವಿಸಿದ ಪರಿಣಾಮ ಅತಿಸಾರ ಬಾಧಿಸಿ 50 ವರ್ಷದ ರಿಕ್ಷಾ ಚಾಲಕರೊಬ್ಬರು ಮೃತಪಟ್ಟಿದ್ದು, ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಅತಿಸಾರದಿಂದ ಬಳಲುತ್ತಿದ್ದ ಭಗೀರಥಪುರ ನಿವಾಸಿ ಹೇಮಂತ್ ಗಾಯಕ್ವಾಡ್ ಅವರು ಕಳೆದ 15 ದಿನಗಳಿಂದ ಇಂದೋರ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲುಷಿತ ನೀರು ಸೇವಿಸಿದ ಬಳಿಕ ಡಿಸೆಂಬರ್ 22ರಂದು ಹೇಮಂತ್ ಗಾಯಕ್ವಾಡ್ ಅನಾರೋಗ್ಯಕ್ಕೀಡಾಗಿದ್ದರು. ಆರಂಭದಲ್ಲಿ ಅವರನ್ನು ಪರ್ದೇಶಿಪುರದಲ್ಲಿನ ಖಾಸಗಿ ನರ್ಸಿಂಗ್ ಹೋಮ್ಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಜನವರಿ 7ರಂದು ಅವರನ್ನು ಅರಬಿಂದೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರು ಹಲವು ದಿನಗಳ ಕಾಲ ಚಿಕಿತ್ಸೆ ಪಡೆದರು.
ವೈದ್ಯರ ಪ್ರಕಾರ, ಅವರು ಜೀವಕೋಶ ಕಾರ್ಸಿನೋಮಾ ಹಾಗೂ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ, ಅತಿಸಾರ ಮತ್ತು ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು ಎಂದು ಮೂಲಗಳು ತಿಳಿಸಿವೆ.
ಹೇಮಂತ್ ಅವರ ಕಿರಿಯ ಸಹೋದರ ಸಂಜಯ್ ಗಾಯಕ್ವಾಡ್, “ನನ್ನ ಸಹೋದರ ಕಲುಷಿತ ನೀರು ಸೇವಿಸಿರುವುದರಿಂದ ಮೃತಪಟ್ಟಿದ್ದಾರೆ. 15 ದಿನಗಳ ಅನಾರೋಗ್ಯದ ಬಳಿಕ ಅವರು ಸಾವನ್ನಪ್ಪಿದರು. ಅವರನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆರೋಗ್ಯ ಹದಗೆಟ್ಟಾಗ ಇನ್ನೊಂದು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು” ಎಂದು ಹೇಳಿದ್ದಾರೆ.
“ಭಗೀರಥಪುರದ ನಿವಾಸಿಗಳು ಕಳೆದ ಎರಡು ವರ್ಷಗಳಿಂದ ಕಲುಷಿತ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಗರಸಭೆಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ” ಎಂದು ಅವರು ಆರೋಪಿಸಿದ್ದಾರೆ.
ಹೇಮಂತ್ ಅವರ ಮಗಳು ರಿಯಾ, “ಕಲುಷಿತ ನೀರು ಸೇವಿಸಿದ ಬಳಿಕ ನನ್ನ ತಂದೆಗೆ ತೀವ್ರ ಅತಿಸಾರ ಕಾಣಿಸಿಕೊಂಡಿತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ಆರೋಗ್ಯ ಹದಗೆಟ್ಟಾಗ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಮೃತಪಟ್ಟರು” ಎಂದು ಹೇಳಿದ್ದಾರೆ.
ಕಲುಷಿತ ನೀರು ಸೇವನೆಯಿಂದ ಉಂಟಾದ ಅತಿಸಾರದಿಂದ ಈವರೆಗೆ 25 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಆದರೆ, ಮಧ್ಯಪ್ರದೇಶ ಸರ್ಕಾರ ಜನವರಿ 15ರಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ್ ಪೀಠಕ್ಕೆ ಸಲ್ಲಿಸಿದ ಸ್ಥಿತಿಗತಿ ವರದಿಯಲ್ಲಿ, ಐದು ತಿಂಗಳ ಮಗು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಿದೆ.







