ತಾಂತ್ರಿಕ ದೋಷ; ಇಂದೋರ್ ಗೆ ವಿಮಾನ ನಿಲ್ದಾಣಕ್ಕೆ ಮರಳಿದ ಇಂಡಿಗೋ ವಿಮಾನ

ಇಂಡಿಗೋ ವಿಮಾನ | PTI
ಇಂದೋರ್: ಐವತ್ತೊಂದು ಪ್ರಯಾಣಿಕರನ್ನು ಹೊತ್ತ ಇಂದೋರ್-ರಾಯಪುರ ಇಂಡಿಗೋ ವಿಮಾನ ಮಂಗಳವಾರ ಹಾರಾಟ ಆರಂಭಿಸಿದ ಸ್ಪಲ್ಪ ಸಮಯದ ಬಳಿಕ ತಾಂತ್ರಿಕ ದೋಷದಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಹಿಂದಿರುಗಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದೋರ್ನಿಂದ ಹಾರಾಟ ಆರಂಭಿಸಿದ ಹಾಗೂ ಸುಮಾರು 60 ನಾಟಿಕಲ್ ಮೈಲ್ ಗಳನ್ನು ದಾಟಿದ ಬಳಿಕ ಇಂಡಿಗೊ ವಿಮಾನ ಯಾನ ಸಂಸ್ಥೆಯ 6ಇ-7295 ಸಂಖ್ಯೆಯ ವಿಮಾನದಲ್ಲಿ ತಾಂತ್ರಿಕ ದೋಷ ಇರುವುದು ಪೈಲಟ್ಗೆ ಅರಿವಾಯಿತು ಎಂದು ಇಂದೋರ್ ನ ದೇವಿ ಅಹಿಲ್ಯಾಭಾ ಹೋಲ್ಕರ್ ವಿಮಾನ ನಿಲ್ದಾಣದ ನಿರ್ದೇಶಕ ವಿಪಿನ್ ಕಾಂತ್ ಸೇಥ್ ತಿಳಿಸಿದ್ದಾರೆ.
ವಿಮಾನ ಇಂದೋರ್ ವಿಮಾನ ನಿಲ್ದಾಣದಿಂದ ಮಂಗಳವಾರ ಬೆಳಗ್ಗೆ 6.35ಕ್ಕೆ ಹಾರಾಟ ಆರಂಭಿಸಿತು. ಕೆಲವು ನಿಮಿಷಗಳ ಬಳಿಕ ಪೈಲಟ್ ವಾಯು ಸಂಚಾರ ನಿಯಂತ್ರಣ (ಎಟಿಸಿ)ಕ್ಕೆ ಮಾಹಿತಿ ನೀಡಿದರು. ಅನಂತರ ತಾಂತ್ರಿಕ ಕಾರಣದಿಂದ ವಿಮಾನ ಹಿಂದಿರುಗಿತು ಎಂದು ಅವರು ತಿಳಿಸಿದ್ದಾರೆ.
ವಿಮಾನ ‘‘ತುರ್ತು ಭೂಸ್ಪರ್ಶ’’ ಮಾಡಿಲ್ಲ ಎಂದು ತಾಂತ್ರಿಕ ದೋಷದ ವಿವರಗಳನ್ನು ನೀಡದೆ ವಿಮಾನ ನಿಲ್ದಾಣದ ನಿರ್ದೇಶಕರು ಪ್ರತಿಪಾದಿಸಿದ್ದಾರೆ.
ಈ ವಿಮಾನದಲ್ಲಿ 51 ಪ್ರಯಾಣಿಕರು ಇದ್ದರು ಎಂದು ಅವರು ತಿಳಿಸಿದ್ದಾರೆ.







