ಇಂದೋರ್ ದುರಂತ | 10 ವರ್ಷದ ಪ್ರಾರ್ಥನೆ, ಹರಕೆ ಬಳಿಕ ಜನಿಸಿದ ಮಗು ಮೃತ್ಯು

ಸಾಂದರ್ಭಿಕ ಚಿತ್ರ
ಇಂದೋರ್, ಜ. 2: ಮಧ್ಯಪ್ರದೇಶದ ಇಂದೋರ್ ನಲ್ಲಿ ಹತ್ತು ವರ್ಷಗಳ ಸತತ ಪ್ರಾರ್ಥನೆ ಹಾಗೂ ಹರಕೆಯ ಬಳಿಕ ಜನಿಸಿದ ಮಗುವೊಂದು ಕಲುಷಿತ ನೀರಿನಿಂದಾಗಿ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದೆ.
ಈ ಘಟನೆ ಭಗೀರಥಪುರ ಪ್ರದೇಶದ ಮರಾಠಿ ಮೊಹಲ್ಲಾದಲ್ಲಿ ಗಾಢ ಮೌನ ಆವರಿಸಿದೆ. ಆರು ತಿಂಗಳ ಶಿಶು ಅವ್ಯಾನ್ ಸಾಹು ತನ್ನ ಕುಟುಂಬದೊಂದಿಗೆ ಅಲ್ಲಿ ವಾಸಿಸುತ್ತಿದ್ದ. ಹಾಲಿಗೆ ಬೆರೆಸಿದ ನೀರು ಶಿಶುವಿನ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ ಎಂದು ಕುಟುಂಬ ಆರೋಪಿಸಿದೆ.
ಅವ್ಯಾನ್ ಸಾಹು ಡಿಸೆಂಬರ್ 29ರಂದು ಮೃತಪಟ್ಟಿದ್ದಾನೆ ಎಂದು ಕುಟುಂಬ ತಿಳಿಸಿದೆ. 10 ವರ್ಷಗಳ ಪ್ರಾರ್ಥನೆ ಮತ್ತು ಹರಕೆಯ ಬಳಿಕ ಜನಿಸಿದ ಶಿಶುವಿನ ಸಾವಿಗೆ ರಾಜ್ಯ ಸರಕಾರ ನೀಡಿದ ಪರಿಹಾರವನ್ನು ತಾವು ತಿರಸ್ಕರಿಸಿದ್ದೇವೆ ಎಂದು ಕುಟುಂಬ ಹೇಳಿದೆ.
‘‘ನಾವು ರಾಜ್ಯ ಸರಕಾರದಿಂದ ಯಾವುದೇ ಪರಿಹಾರ ಸ್ವೀಕರಿಸಿಲ್ಲ. ನಾವು ಮಗುವನ್ನು ಕಳೆದುಕೊಂಡಿದ್ದೇವೆ. ಪರಿಹಾರ ಮಗುವಿನ ಜೀವವನ್ನು ಹಿಂದಿರುಗಿಸಬಹುದೇ? ಹಣ ಮಗುವಿಗಿಂತ ದೊಡ್ಡದಲ್ಲ,’’ ಎಂದು ಅವ್ಯಾನ್ ಅಜ್ಜಿ ಕೃಷ್ಣ ಸಾಹು ಹೇಳಿದ್ದಾರೆ.
‘‘ಹತ್ತು ವರ್ಷಗಳ ಪ್ರಾರ್ಥನೆ, ಹರಕೆಗಳ ಬಳಿಕ ನನ್ನ ಪುತ್ರಿಗೆ ಮಗು ಜನಿಸಿತ್ತು. ಈ ಮಗುವಿಗಾಗಿ ನಮ್ಮ ಕುಟುಂಬ ಹುಸೈನ್ ತೆಕ್ರಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿತ್ತು. ಆದರೆ, ಆತ ಇಷ್ಟು ಬೇಗ ನಮ್ಮಿಂದ ದೂರವಾಗುತ್ತಾನೆ ಎಂದು ಊಹಿಸಿರಲಿಲ್ಲ,’’ ಎಂದು ಅವರು ಕಣ್ಣೀರಿನಿಂದ ಹೇಳಿದರು.
‘‘ಮಗು ಸಂಪೂರ್ಣ ಆರೋಗ್ಯವಾಗಿತ್ತು. ಐದು ಕಿಲೋಗ್ರಾಂ ತೂಕವಿತ್ತು. ಅಮ್ಮನ ಮಡಿಲಲ್ಲಿ ಆಟ ಆಡುತ್ತಿದ್ದ. ಏಕಾಏಕಿ ಅತಿಸಾರ ಆರಂಭವಾಯಿತು. ವೈದ್ಯರ ಸಲಹೆಯಂತೆ ಮನೆಯಲ್ಲೇ ಔಷಧ ನೀಡಿದೆವು. ಆದರೆ ಸ್ಥಿತಿ ಹದಗೆಟ್ಟಿತು. ಆಸ್ಪತ್ರೆಗೆ ಕರೆದೊಯ್ದಾಗ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು,’’ ಎಂದು ಅವರು ವಿವರಿಸಿದರು.
ತಾಯಿಗೆ ಸಾಕಷ್ಟು ಎದೆಹಾಲು ಇಲ್ಲದ ಕಾರಣ ಪ್ಯಾಕ್ ಮಾಡಿದ ಹಾಲಿನ ಪುಡಿಯನ್ನು ಮಹಾನಗರ ಪಾಲಿಕೆಯ ನಳ್ಳಿ ನೀರಿನಲ್ಲಿ ಬೆರೆಸಿ ಮಗುವಿಗೆ ನೀಡಲಾಗಿತ್ತು. ನೀರು ಕಲುಷಿತವಾಗಿದ್ದುದೇ ಮಗುವಿನ ಸಾವಿಗೆ ಕಾರಣವಾಗಿದೆ ಎಂದು ಕೃಷ್ಣ ಸಾಹು ತಿಳಿಸಿದ್ದಾರೆ.







