Indore ದುರಂತ | ಮತ್ತಿಬ್ಬರು ಮೃತ್ಯು; 23ಕ್ಕೆ ಏರಿದ ಮೃತರ ಸಂಖ್ಯೆ

Photo Credit : indiatoday.in
ಇಂದೋರ್, ಜ. 13: ದೇಶದ ಅತ್ಯಂತ ಸ್ವಚ್ಛ ನಗರ ಇಂದೋರ್ನಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ಅತಿಸಾರ ಬಾಧಿಸಿ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
ಇಂದೋರ್ನ ಬಾಂಬೆ ಆಸ್ಪತ್ರೆಯಲ್ಲಿ ಸುಮಾರು 10 ದಿನಗಳಿಂದ ವೆಂಟಿಲೇಟರ್ ಬೆಂಬಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಗವಾನ್ದಾಸ್ ಭಾರ್ನೆ (64) ಮೃತಪಟ್ಟಿದ್ದಾರೆ. ಅತಿಸಾರದ ಲಕ್ಷಣಗಳ ಹಿನ್ನೆಲೆಯಲ್ಲಿ ಅವರನ್ನು ಆರಂಭದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಅನಂತರ 10 ದಿನಗಳ ಹಿಂದೆ ಅವರನ್ನು ಬಾಂಬೆ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಬಾಂಬೆ ಆಸ್ಪತ್ರೆಯ ಅಧಿಕೃತ ಮೂಲಗಳ ಪ್ರಕಾರ, ವೆಂಟಿಲೇಟರ್ ಬೆಂಬಲದಲ್ಲಿದ್ದ ಭಗವಾನ್ದಾಸ್ ಅವರು ಮಧುಮೇಹ ಪೀಡಿತ ಪಾದ, ಗ್ಯಾಂಗ್ರಿನ್, ಬಹು ಅಂಗಾಂಗ ವೈಫಲ್ಯ ಸೇರಿದಂತೆ ಹಲವು ಸಹವ್ಯಾಧಿಗಳಿಂದ ಬಳಲುತ್ತಿದ್ದರು. ತುರ್ತು ನಿಗಾ ಘಟಕದಲ್ಲಿ ವೈದ್ಯರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅವರು ಬದುಕುಳಿಯಲಿಲ್ಲ. ಅವರು ಸೋಮವಾರ ಮೃತಪಟ್ಟರು.
ಭಗವಾನ್ ದಾಸ್ ಸಾವನ್ನಪ್ಪಿದ ಬಳಿಕ ಬಾಂಬೆ ಆಸ್ಪತ್ರೆಯಲ್ಲಿ ಪ್ರಸಕ್ತ 9 ರೋಗಿಗಳು ದಾಖಲಾಗಿದ್ದಾರೆ. ಅವರಲ್ಲಿ ಮೂವರು ಇನ್ನೂ ತೀವ್ರ ನಿಗಾ ಘಟಕದಲ್ಲಿದ್ದಾರೆ. “ವೈದ್ಯರ ತಂಡದ ಚಿಕಿತ್ಸೆಗೆ ನಾಲ್ಕರಿಂದ ಐದು ರೋಗಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಗಮನಾರ್ಹ ಚೇತರಿಕೆಯ ಹಿನ್ನೆಲೆಯಲ್ಲಿ ಅವರನ್ನು ವಾರ್ಡ್ಗಳಿಗೆ ವರ್ಗಾಯಿಸಲಾಗಿದೆ” ಎಂದು ಬಾಂಬೆ ಆಸ್ಪತ್ರೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಭಗವಾನ್ದಾಸ್ ಅವರು ಸಾವನ್ನಪ್ಪುವುದಕ್ಕಿಂತ ಮೊದಲು, ಜನವರಿ 5–6ರಂದು ಅತಿಸಾರ ಹಾಗೂ ವಾಂತಿ ಬಾಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮೈ ಆಸ್ಪತ್ರೆಗೆ ದಾಖಲಾಗಿದ್ದ ಕಮಲಾ ಭಾಯಿ (59) ಎಂಬವರು ಜನವರಿ 9ರಂದು ಮೃತಪಟ್ಟಿದ್ದಾರೆ.
ಇಂದೋರ್ನ ಭಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಅತಿಸಾರ ಬಾಧಿಸಿ ಹಲವು ಸಾವುಗಳು ಸಂಭವಿಸಿದ ಬಳಿಕ ಈ ಸಾವುಗಳು ವರದಿಯಾಗಿವೆ. ಆದರೆ, ಇಂದೋರ್ ಅಧಿಕಾರಿಗಳು ಈ ಸಾವುಗಳನ್ನು ಇನ್ನೂ ದೃಢಪಡಿಸಿಲ್ಲ.







