ಇಂದೋರ್ ದುರಂತ | ಸಚಿವ ಕೈಲಾಶ್ ವಿಜಯವರ್ಗಿಯಾ ಅವರ 'ಘಂಟಾ' ಹೇಳಿಕೆಯನ್ನು ಸರ್ವಾಧಿಕಾರಿ ವರ್ತನೆ ಎಂದು ಸರಕಾರಿ ಆದೇಶದಲ್ಲಿ ಉಲ್ಲೇಖಿಸಿದ ಅಧಿಕಾರಿ ಅಮಾನತು

ಕೈಲಾಶ್ ವಿಜಯವರ್ಗಿಯ (Photo: PTI)
ಇಂದೋರ್: ಇಂದೋರ್ ನಲ್ಲಿ ಕಲುಷಿತ ನೀರು ಕುಡಿದು ಕನಿಷ್ಠ 10 ಮಂದಿ ಮೃತಪಟ್ಟ ಘಟನೆ ಮಧ್ಯೆ ಸಚಿವ ಕೈಲಾಶ್ ವಿಜಯವರ್ಗಿಯ ನೀಡಿರುವ ವಿವಾದಾತ್ಮಕ ಹೇಳಿಕೆ ಮತ್ತು ಕಾಂಗ್ರೆಸ್ ಆರೋಪಗಳನ್ನು ಅಧಿಕೃತ ಸರಕಾರಿ ಆದೇಶದಲ್ಲಿ ಸೇರಿಸಿದ ಆರೋಪದಲ್ಲಿ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರನ್ನು ಅಮಾನತುಗೊಳಿಸಲಾಗಿದೆ.
ದೇವಾಸ್ನಲ್ಲಿ ರವಿವಾರ ಆಯೋಜಿಸಲಾದ ಕಾಂಗ್ರೆಸ್ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಿಬ್ಬಂದಿಯನ್ನು ನಿಯೋಜಿಸುವಂತೆ ನಿರ್ದೇಶಿಸಿ ಎಸ್ಡಿಎಂ ಆನಂದ್ ಮಾಳವೀಯ ಶನಿವಾರ ಹೊರಡಿಸಿದ ಆದೇಶವನ್ನು ಪರಿಶೀಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಅಧಿಕೃತ ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ನಿರ್ಲಕ್ಷ್ಯ, ಉದಾಸೀನತೆ ಆರೋಪದ ಮೇಲೆ ದೇವಾಸ್ ಜಿಲ್ಲೆಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆನಂದ್ ಮಾಳವೀಯ ಅವರನ್ನು ಉಜ್ಜಯಿನಿ ವಿಭಾಗದ ಕಂದಾಯ ಆಯುಕ್ತ ಆಶಿಶ್ ಸಿಂಗ್ ಅವರು ಅಮಾನತುಗೊಳಿಸಿದ್ದಾರೆ.
ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚಿಸುವುದರಲ್ಲಿ ಸಮಸ್ಯೆಯಾಗಿಲ್ಲ. ಆದರೆ ಆದೇಶದಲ್ಲಿ ಬಳಸಿದ ಭಾಷೆ ಸರಿಯಾಗಿಲ್ಲ. ಪ್ರತಿಭಟನೆಗೆ ಮುಂಚಿತವಾಗಿ ಸಲ್ಲಿಸಿದ ಕಾಂಗ್ರೆಸ್ ಜ್ಞಾಪಕ ಪತ್ರದ ಒಂದು ಭಾಗವನ್ನು ಎಸ್ಡಿಎಂ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆಡಳಿತಾತ್ಮಕ ಆದೇಶದಲ್ಲಿ ರಾಜಕೀಯ ಆರೋಪಗಳು ಮತ್ತು ಆಪಾದಿತ ಭಾಷೆಯನ್ನು ಸೇರಿಸುವುದನ್ನು ಗಂಭೀರ ಲೋಪ ಎಂದು ಪರಿಗಣಿಸಲಾಗಿದೆ.
ಇಂದೋರ್ನ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಕಲುಷಿತಗೊಂಡಿದ್ದು, ಅತಿಸಾರದಿಂದ ಹಲವಾರು ಜನರ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಜ್ಞಾಪಕ ಪತ್ರವು ತೀವ್ರವಾಗಿ ಟೀಕಿಸಿತ್ತು. ಘಟನೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವಾಗ "ಘಂಟಾ" ಪದವನ್ನು ಬಳಸಿದ್ದಕ್ಕಾಗಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಕೈಲಾಶ್ ವಿಜಯವರ್ಗಿಯ ಅವರನ್ನು ಕೂಡ ಗುರಿಯಾಗಿಸಿಕೊಂಡಿತ್ತು. ಈ ಹೇಳಿಕೆ "ಅಮಾನವೀಯ ಮತ್ತು ಸರ್ವಾಧಿಕಾರಿ ವರ್ತನೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಕಾಂಗ್ರೆಸ್ ಹೇಳಿತ್ತು.







