ಮಹಿಳೆಯಿಂದ ಕಿರುಕುಳ ಆರೋಪ ಬೆನ್ನಲ್ಲೆ ಇಂದೋರ್ನ 'Dancing Cop' ರಂಜೀತ್ ಸಿಂಗ್ಗೆ ಹಿಂಬಡ್ತಿ

Photo credit: moneycontrol.com
ಇಂದೋರ್: ಮಹಿಳೆಯೋರ್ವರು ಕಿರುಕುಳ ಆರೋಪಿಸಿದ ಬಳಿಕ ಇಂದೋರ್ನ 'ಡ್ಯಾನ್ಸಿಂಗ್ ಕಾಪ್'(Dancing Cop) ಎಂದೇ ಖ್ಯಾತಿ ಪಡೆದಿದ್ದ ರಂಜೀತ್ ಸಿಂಗ್ಗೆ ಪೊಲೀಸ್ ಇಲಾಖೆ ಹೆಡ್ ಕಾನ್ಸ್ಟೇಬಲ್ ಹುದ್ದೆಯಿಂದ ಕಾನ್ಸ್ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡಿದೆ.
ಅನುಚಿತ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಇಂದೋರ್ಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ರಂಜೀತ್ ಸಿಂಗ್ ವಿರುದ್ಧ ಮುಂಬೈನ ಮಹಿಳೆಯೊಬ್ಬರು ಆರೋಪಗಳನ್ನು ಮಾಡಿದ ನಂತರ ಅವರ ವಿರುದ್ಧ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಮಹಿಳೆಯ ಆರೋಪದ ಬಳಿಕ ರಂಜೀತ್ ಸಿಂಗ್ ವರ್ತನೆಯ ಬಗ್ಗೆ ಸಾರ್ವಜನಿಕ ಟೀಕೆ ವ್ಯಕ್ತವಾಗಿತ್ತು.
ವಿವಾದದ ನಂತರ ಪೊಲೀಸ್ ಇಲಾಖೆ ರಂಜೀತ್ ಸಿಂಗ್ ಅವರಿಗೆ ಹಿಂಬಡ್ತಿ ನೀಡಿದೆ. ನಂತರ ಪ್ರಕರಣವನ್ನು ಇಲಾಖಾ ವಿಚಾರಣೆಗಾಗಿ ಡಿಸಿಪಿಗೆ ಹಸ್ತಾಂತರಿಸಲಾಗಿದೆ. ಆಂತರಿಕ ತನಿಖಾ ವರದಿಯ ಆಧಾರದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ.
ರಂಜೀತ್ ಸಿಂಗ್ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಆರೋಪವನ್ನು ಸುಳ್ಳು ಎಂದು ಹೇಳಿದ್ದು, ಪ್ರಚಾರ ಗಿಟ್ಟಿಸಿಕೊಳ್ಳಲು ಆರೋಪವನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ಇಂದೋರ್ನ ರಾಡ್ ಕ್ರಾಸಿಂಗ್ನಲ್ಲಿ ನೃತ್ಯ ಮಾಡುವ ಮೂಲಕ ಸಂಚಾರವನ್ನು ನಿರ್ವಹಿಸುವ ವಿಶಿಷ್ಟ ವಿಧಾನಕ್ಕೆ ರಂಜೀತ್ ಸಿಂಗ್ ಪ್ರಸಿದ್ಧರಾಗಿದ್ದರು.
ವಿಭಿನ್ನ ರೀತಿಯಲ್ಲಿ ಸಂಚಾರ ಜಾಗೃತಿ ಮೂಡಿಸುವ ಮೂಲಕ ಅವರು ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದರು.







