ಸಿಂಧೂ ಜಲ ಒಪ್ಪಂದ ಅಮಾನತು: ಪಾಕಿಸ್ತಾನದ ಮನವಿಗೆ ಸೊಪ್ಪು ಹಾಕದ ಭಾರತ, ಕಾಲುವೆ ಮೂಲಸೌಕರ್ಯ ಹೆಚ್ಚಿಸಲು ಒತ್ತು

PC : PTI
ಹೊಸದಿಲ್ಲಿ: 1960ರ ಸಿಂಧೂ ಜಲ ಒಪ್ಪಂದದ ಅಮಾನತಿನ ಕುರಿತು ಮರುಪರಿಶೀಲಿಸುವಂತೆ ಪಾಕಿಸ್ತಾನವು ಪದೇ ಪದೇ ಮನವಿಗಳನ್ನು ಮಾಡುತ್ತಿದ್ದರೂ ಭಾರತವು ಮೌನವಾಗಿದೆ. ಯಾವುದೇ ಮಾತುಕತೆಗೆ ಮುನ್ನ ಸಿಂಧೂ ಜಲಾನಯನ ಪ್ರದೇಶದಿಂದ ನೀರನ್ನು ಬೇರೆಡೆ ತಿರುಗಿಸಲು ವ್ಯೆಹಾತ್ಮಕವಾಗಿ ಸಜ್ಜಾಗಿರುವ ಅದು ತನ್ನ ನೀರು ಸಂಗ್ರಹ ಸಾಮರ್ಥ್ಯ ಮತ್ತು ಕಾಲುವೆ ಮೂಲಸೌಕರ್ಯವನ್ನು ಬಲಗೊಳಿಸುತ್ತಿದೆ.
ಒಪ್ಪಂದವನ್ನು ಅಮಾನತುಗೊಳಿಸಿದ ಬಳಿಕ ಪಾಕಿಸ್ತಾನದಿಂದ ನಾಲ್ಕು ಮನವಿ ಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು ಜಲಶಕ್ತಿ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಪಾಕಿಸ್ತಾನದ ಜಲ ಸಂಪನ್ಮೂಲ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಅವರು ಕಳುಹಿಸಿರುವ ಪತ್ರಗಳಲ್ಲಿ ಸಿಂಧೂ ಜಪ ಒಪ್ಪಂದದ ಅಮಾನತನ್ನು ರದ್ದುಗೊಳಿಸುವಂತೆ ಮತ್ತು ಜಲ ಸಂಪನ್ಮೂಲಗಳ ಹರಿವನ್ನು ನಿಯಂತ್ರಿಸುವ ಸಹಕಾರಿ ಚೌಕಟ್ಟನ್ನು ಮರುಸ್ಥಾಪಿಸುವಂತೆ ಅಲವತ್ತುಕೊಳ್ಳಲಾಗಿದೆ.
ಎ.22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರ ಹತ್ಯೆ ನಡೆದ ಮರುದಿನವೇ ಭಾರತವು ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಒಪ್ಪಂದವನ್ನು ಅಮಾನತುಗೊಳಿಸಿದೆ.
ಪಾಕಿಸ್ತಾನವು ಪ್ರಸ್ತುತ ತೀವ್ರ ಬೇಸಿಗೆ ಬಿಸಿ ಮತ್ತು ಸಿಂಧೂ ನದಿ ನೀರಿನ ಮೇಲೆ ಭಾರತದ ನಿಯಂತ್ರಣದ ನಡುವೆ ಗಂಭೀರ ಜಲ ಬಿಕ್ಕಟ್ಟನ್ನು ಎದುರಿಸುತ್ತಿದ್ದು,ಅದರ ಮುಂಗಾರು ಬೆಳೆಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿದೆ. ವಿಶ್ವಬ್ಯಾಂಕಿನ ಹಸ್ತಕ್ಷೇಪಕ್ಕಾಗಿ ಪಾಕಿಸ್ತಾನವು ಮನವಿ ಮಾಡಿಕೊಂಡಿದ್ದರೂ,ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಅದು ನಿರಾಕರಿಸಿದೆ ಎಂದು ವರದಿಗಳು ಸೂಚಿಸಿವೆ.
ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಳ್ಳಲು ನೀರು ಸಂಗ್ರಹ ಮತ್ತು ನದಿ ಹರಿವು ಯೋಜನೆಗಳಿಗೆ ವೇಗ ನೀಡಿದ ಬಳಿಕ ಭಾರತವು ಚಿನಾಬ್-ರಾವಿ-ಬಿಯಾಸ್-ಸತ್ಲೆಜ್ ಲಿಂಕ್ ಕೆನಾಲ್ ಯೋಜನೆಗಾಗಿ ಪೂರ್ವ ಕಾರ್ಯಸಾಧ್ಯತೆ ಅಧ್ಯಯನವನ್ನು ಆರಂಭಿಸಿದೆ. ಲಿಂಕ್ ಕೆನಾಲ್ ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನದ ನೀರಾವರಿ ಕಾಲುವೆಗಳಿಗೆ ನೀರನ್ನು ಉಣಿಸಲಿದೆ.