ಶೇ.0.25ಕ್ಕೆ ಇಳಿದ ಹಣದುಬ್ಬರ; 10 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿತ!

ಸಾಂದರ್ಭಿಕ ಚಿತ್ರ | Photo Credit : PTI
ಚೆನ್ನೈ,ನ.12: 2025ರ ಆಕ್ಟೋಬರ್ ನಲ್ಲಿ ಹಣದುಬ್ಬರ ಶೇ.0.25ಕ್ಕೆ ಇಳಿಕೆಯಾಗಿದ್ದು, ಇದು ದಶಕದಲ್ಲೇ ಅತ್ಯಧಿಕ ಕುಸಿತವಾಗಿದೆ. ಆಹಾರ ದರಗಳಲ್ಲಿ ಇಳಿಕೆ, ಪೂರೈಕೆ ವ್ಯವಸ್ಥೆಯ ಸರಳೀಕರಣ ಹಾಗೂ ಜಿಎಸ್ಟಿದರ ಕಡಿತ, ಹಲವಾರು ಅವಶ್ಯಕ ವಸ್ತುಗಳ ಇಳಿಕೆಗೆ ಪ್ರಮುಖ ಕಾರಣಗಳೆಂದು ಅಂದಾಜಿಸಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಶೇ.1.54ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಆಕ್ಟೋಬರ್ ನಲ್ಲಿ ಶೇ.0.25ರಷ್ಟು ದಾಖಲಾಗಿದೆ. ಅನುಕೂಲಕರ ಹವಾಮಾನದಿಂದಾಗಿ ತರಕಾರಿಗಳು, ದ್ವಿದಳ ಧಾನ್ಯಗಳು ಹಾಗೂ ಬೇಳೆಕಾಳುಗಳ ದರದಲ್ಲಿ ಗಣನೀಯ ಇಳಿಕೆಗೆ ಕಾರಣವಾಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಜಾರಿಗೊಳಿಸಲಾದ ಜಿಎಸ್ಟಿ ದರ ಕಡಿತವು ಕೂಡಾ ಹಣದುಬ್ಬರ ಇಳಿಕೆಗೆ ಗಣನೀಯ ಕೊಡುಗೆ ನೀಡಿದೆ.
ಆಹಾರ ಹಣದುಬ್ಬರವು ಸೆಪ್ಟೆಂಬರ್ ನಲ್ಲಿ -2.28 ಶೇ. ಇದ್ದುದು ಈಗ -5.02 ಶೇ.ಕ್ಕೆ ಕುಸಿದಿದೆ. ಸತತ ಐದು ತಿಂಗಳುಗಳಿಂದ ಆಹಾರ ಹಣದುಬ್ಬರವು ಇಳಿಮುಖ ಪ್ರವೃತ್ತಿಯನ್ನು ಪ್ರದರ್ಶಿಸಿರುವುದು ಶ್ರೀಸಾಮಾನ್ಯರಿಗೆ ನಿರಾಳವನ್ನುಂಟು ಮಾಡಿದೆ.
ರಾಜ್ಯವಾರು ಮಟ್ಟದಲ್ಲಿ ಕೇರಳದಲ್ಲಿ ದೇಶದಲ್ಲೇ ಗರಿಷ್ಠ ಶೇ.8.56 ಹಣದುಬ್ಬರ ದಾಖಲಾಗಿದೆ. ಶೇ.2.95 ಹಣದುಬ್ಬರೊಂದಿಗೆ ಜಮ್ಮುಕಾಶ್ಮೀರ ದ್ವಿತೀಯ ಸ್ಥಾನದಲ್ಲಿದ್ದರೆ, ಶೇ.2.34 ಹಣದುಬ್ಬರ ದಾಖಲಾಗಿರುವ ಕರ್ನಾಟಕ ತೃತೀಯ ಸ್ಥಾನದಲ್ಲಿದೆ.





