ಒತ್ತಡ ಅಥವಾ ಬೆದರಿಕೆ ತಂತ್ರಗಳನ್ನು ಬಳಸಿ ಉದ್ಯೋಗಿಗಳನ್ನು ವಜಾಗೊಳಿಸಿಲ್ಲ: ಇನ್ಫೋಸಿಸ್ ಸ್ಪಷ್ಟನೆ

ಇನ್ಫೋಸಿಸ್ | PC :infosys.com
ಹೊಸದಿಲ್ಲಿ: ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಮೈಸೂರು ಕ್ಯಾಂಪಸ್ ನ ತರಬೇತಿ ನಿರತ ಉದ್ಯೋಗಿಗಳನ್ನು ವಜಾಗೊಳಿಸುವಾಗ ಯಾವುದೇ ಒತ್ತಡ ಅಥವಾ ಬೆದರಿಕೆ ತಂತ್ರಗಳನ್ನು ಬಳಸಿಲ್ಲ ಎಂದು ಬುಧವಾರ ಸ್ಪಷ್ಟನೆ ನೀಡಿರುವ ಐಟಿ ವಲಯದ ದೈತ್ಯ ಸಂಸ್ಥೆ ಇನ್ಫೋಸಿಸ್, ಅಂತಹ ಕ್ರಮಕ್ಕೆ ಕಾರಣವಾದ ಸನ್ನಿವೇಶಗಳ ಕುರಿತು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ವಿವರಿಸಲಾಗುತ್ತಿದೆ ಎಂದು ಹೇಳಿದೆ.
ಆದರೆ, ಈ ಹಿಂದಿಗಿಂತ ಈ ಬಾರಿ ಮೌಲ್ಯಮಾಪನ ಪರೀಕ್ಷೆಯಲ್ಲಿನ ಅನುತ್ತೀರ್ಣತೆಯ ಶೇಕಡಾವಾರು ಪ್ರಮಾಣ ಕೊಂಚ ಹೆಚ್ಚಿತ್ತು ಎಂದು PTI ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಇನ್ಫೋಸಿಸ್ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಶಾಜಿ ಮ್ಯಾಥ್ಯೂ ಒಪ್ಪಿಕೊಂಡಿದ್ದಾರೆ. ಆದರೆ, ಪರೀಕ್ಷೆಗಳನ್ನು ಅನುತ್ತೀರ್ಣಗೊಳಿಸಲೆಂದೇ ವಿನ್ಯಾಸಗೊಳಿಸಲಾಗಿತ್ತು ಎಂಬ ಆರೋಪಗಳನ್ನು ಅವರು ಅಲ್ಲಗಳೆದಿದ್ದಾರೆ.
2026ನೇ ಹಣಕಾಸು ವರ್ಷದಲ್ಲಿ ಕ್ಯಾಂಪಸ್ ನೇಮಕಾತಿಗೆ ತೆರಳಲಿರುವ ಇನ್ಫೋಸಿಸ್ ನ ಬ್ರ್ಯಾಂಡ್ ಖ್ಯಾತಿಗೆ ಈ ವಜಾಗಳೇನಾದರೂ ಚ್ಯುತಿ ತರಲಿವೆಯೆ ಎಂಬ ಪ್ರಶ್ನೆಕಗೆ ಉತ್ತರಿಸಿರುವ ಶಾಜಿ ಮ್ಯಾಥ್ಯೂ, ನಾವು ಮುಂದಿನ ಹಣಕಾಸು ವರ್ಷದಲ್ಲಿ 20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜಿಸುತ್ತಿದ್ದು, ಅವರು ಅತ್ಯುತ್ತಮ ಕಾರ್ಪೊರೇಟ್ ತರಬೇತಿ ಪಡೆಯಲಿರುವುದರಿಂದ, ಅವರು ಕಳವಳ ಪಡಬೇಕಾದ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಮೈಸೂರು ಕ್ಯಾಂಪಸ್ ನಲ್ಲಿ 300ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವಾಗ ಪರೀಕ್ಷಾ ಮಾನದಂಡಗಳು, ಮೌಲ್ಯಮಾಪನ ಮಾನದಂಡ ಹಾಗೂ ಪಠ್ಯಕ್ರಮವನ್ನು ಬದಲಿಸಲಾಗಿತ್ತು ಹಾಗೂ ಬೆದರಿಕೆ ತಂತ್ರಗಳನ್ನು ಅನುಸರಿಸಲಾಗಿತ್ತು ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಅವರು, “ತರಬೇತಿ ನಿರತ ಉದ್ಯೋಗಿಗಳನ್ನು ಆಯ್ಕೆ ಮಾಡಲು ಹಾಗೂ ಅವರನ್ನು ತರಬೇತಿ ಕಾರ್ಯಕ್ರಮದಲ್ಲಿ ತೊಡಗಿಸಲು ಕಂಪನಿಯು ಹಣ ಹಾಗೂ ಶ್ರಮವನ್ನು ವ್ಯಯಿಸುವುದರಿಂದ, ಇನ್ಫೋಸಿಸ್ ಹಿತದೃಷ್ಟಿಯಿಂದ ಈ ಎಲ್ಲ ಉದ್ಯೋಗಿಗಳೂ ಯಶಸ್ವಿಯಾಗುವುದನ್ನು ಕಾಣಲು ಬಯಸುತ್ತೇವೆ. ಆಗ ಮಾತ್ರ, ಅವರನ್ನೆಲ್ಲ ನಮ್ಮ ಯೋಜನೆಗಳಲ್ಲಿ ತೊಡಗಿಸಲು ಸಾಧ್ಯ” ಎಂದು ಸ್ಪಷ್ಟನೆ ನೀಡಿದ್ದಾರೆ.







