ಐಎನ್ಎಸ್ ವಿಕ್ರಾಂತ ನಿಧಿ ದುರುಪಯೋಗ | ಬಿಜೆಪಿ ನಾಯಕ ಕಿರೀಟ್ ಸೋಮೈಯಾ, ಪುತ್ರನ ವಿರುದ್ಧ ಪ್ರಕರಣ ಮುಚ್ಚಲು ಮುಂಬೈ ನ್ಯಾಯಾಲಯದ ನಕಾರ

PC : PTI
ಮುಂಬೈ : ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ನ ನವೀಕರಣಕ್ಕಾಗಿ ಸಾರ್ವಜನಿಕರಿಂದ ಸಂಗ್ರಹಿಸಿದ್ದ 57 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಬಿಜೆಪಿ ನಾಯಕ ಕಿರೀಟ್ ಸೋಮೈಯಾ ಮತ್ತು ಅವರ ಪುತ್ರ ನೀಲ್ ವಿರುದ್ಧದ ಪ್ರಕರಣವನ್ನು ಮುಚ್ಚಲು ಮುಂಬೈ ನ್ಯಾಯಾಲಯವು ನಿರಾಕರಿಸಿದೆ.
ಮುಂಬೈ ಪೋಲಿಸ್ನ ಆರ್ಥಿಕ ಅಪರಾಧ ಘಟಕವು ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಸ್.ಪಿ.ಶಿಂದೆಯವರು ಆ.8ರಂದು ತಿರಸ್ಕರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ನಿಧಿ ಸಂಗ್ರಹಕ್ಕಾಗಿ ವಿವಿಧ ಸ್ಥಳಗಳಲ್ಲಿ ಅಭಿಯಾನ ನಡೆಸಲಾಗಿತ್ತಾದರೂ ತನಿಖಾಧಿಕಾರಿ ಚರ್ಚ್ಗೇಟ್ ರೈಲ್ವೆ ನಿಲ್ದಾಣದ ಹೊರಗೆ ನಡೆದಿದ್ದ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಮಾತ್ರ ಪರಿಶೀಲಿಸಿದ್ದಾರೆ ಎನ್ನುವುದನ್ನು ಗಮನಿಸಿದ ಬಳಿಕ ನ್ಯಾಯಾಲಯವು ಮುಕ್ತಾಯ ವರದಿಯನ್ನು ತಿರಸ್ಕರಿಸಿತು.
ಸಂಗ್ರಹಿಸಿದ್ದ ಹಣ ಏನಾಯಿತು ಎನ್ನುವುದನ್ನೂ ತನಿಖಾಧಿಕಾರಿ ಖಚಿತಪಡಿಸಿಲ್ಲ ಎಂದು ಬೆಟ್ಟು ಮಾಡಿದ ನ್ಯಾಯಾಲಯವು, ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಆದೇಶಿಸಿತು. ನಿವೃತ್ತ ಸೇನಾಧಿಕಾರಿ ಬಬನ್ ಭೋಸ್ಲೆ ಸಲ್ಲಿಸಿದ್ದ ದೂರಿನ ಮೇರೆಗೆ 2022ರಲ್ಲಿ ಮುಂಬೈ ಈಶಾನ್ಯ ಕ್ಷೇತ್ರದ ಮಾಜಿ ಬಿಜೆಪಿ ಸಂಸದ ಸೋಮೈಯಾ ಮತ್ತು ಅವರ ಪುತ್ರನ ವಿರುದ್ಧ ಐಪಿಸಿಯ ವಿವಿಧ ಕಲಮ್ ಗಳಡಿ ಎಫ್ಐಆರ್ ದಾಖಲಾಗಿತ್ತು.
ಭಾರತದ ಮೊದಲ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ (1961)ನ್ನು 1997ರಲ್ಲಿ ಸೇವೆಯಿಂದ ಹಿಂದೆಗೆದುಕೊಳ್ಳಲಾಗಿದ್ದು, 2012ರವರೆಗೆ ಅದನ್ನು ಮ್ಯೂಝಿಯಂ ಆಗಿ ಮುಂಬೈನ ನೇವಲ್ ಡಾಕ್ಸ್ನಲ್ಲಿ ಲಂಗರು ಹಾಕಲಾಗಿತ್ತು. ನವಂಬರ್, 2014ರಲ್ಲಿ ಈ ಐತಿಹಾಸಿಕ ನೌಕೆಯನ್ನು ಗುಜರಿಗೆ ಹಾಕಲು ಸರ್ವೋಚ್ಚ ನ್ಯಾಯಾಲಯವು ತನ್ನ ಅಂತಿಮ ಒಪ್ಪಿಗೆಯನ್ನು ನೀಡಿತ್ತು.
ಯುದ್ಧನೌಕೆ ಗುಜರಿಯಾಗುವುದನ್ನು ತಪ್ಪಿಸಲು 2013ರಲ್ಲಿ ತಾನು ಸೋಮೈಯಾರ ನಿಧಿ ಸಂಗ್ರಹ ಅಭಿಯಾನದಲ್ಲಿ 2,000 ರೂ.ಗಳ ದೇಣಿಗೆಯನ್ನು ನೀಡಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದ ಭೋಸ್ಲೆ, ಸಂಗ್ರಹವಾದ ಹಣವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಲಾಗಿದೆ ಎಂದು ಸೋಮೈಯಾ ಹೇಳಿಕೊಂಡಿದ್ದರು. ಆದರೆ ಆರ್ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ರಾಜಭವನವು ತಾನು ಯಾವುದೇ ಹಣವನ್ನು ಸ್ವೀಕರಿಸಿಲ್ಲ ಎಂದು ತಿಳಿಸಿದೆ ಎಂದು ಆರೋಪಿಸಿದ್ದರು.
ಸೋಮೈಯಾ ಮತ್ತು ಅವರ ಪುತ್ರ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.







