ಉತ್ತರ ಪ್ರದೇಶ | 17 ನವಜಾತ ಹೆಣ್ಣು ಶಿಶುಗಳಿಗೆ ʼಸಿಂಧೂರ್ʼ ಎಂದು ನಾಮಕರಣ: ಇದು ನಮ್ಮ ಪಾಲಿಗೆ ಗೌರವ ಎಂದ ಪೋಷಕರು

ಸಾಂದರ್ಭಿಕ ಚಿತ್ರ | PC : freepik.com
ಲಕ್ನೋ: ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಮೇ 7ರ ಮುಂಜಾನೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಿಂದ ಸ್ಫೂರ್ತಿಗೊಂಡು, ಉತ್ತರ ಪ್ರದೇಶದ ಖುಷಿನಗರದಲ್ಲಿ ಜನಿಸಿರುವ 17 ನವಜಾತ ಹೆಣ್ಣು ಶಿಶುಗಳಿಗೆ ಅವುಗಳ ಕುಟುಂಬದ ಸದಸ್ಯರು ‘ಸಿಂಧೂರ್’ ಎಂದು ನಾಮಕರಣ ಮಾಡಿದ್ದಾರೆ.
“ಮೇ 10 ಹಾಗೂ ಮೇ 11ರಂದು ಕೇವಲ ಎರಡು ದಿನಗಳೊಳಗಾಗಿ ಖುಷಿನಗರ ವೈದ್ಯಕೀಯ ಕಾಲೇಜಿನಲ್ಲಿ ಜನಿಸಿದ ಸುಮಾರು 17 ನವಜಾತ ಹೆಣ್ಣು ಶಿಶುಗಳಿಗೆ ಅವುಗಳ ಕುಟುಂಬದ ಸದಸ್ಯರು ‘ಸಿಂಧೂರ್’ ಎಂದು ನಾಮಕರಣ ಮಾಡಿದ್ದಾರೆ” ಎಂದು ಖುಷಿನಗರ ವೈದ್ಯಕೀಯ ಕಾಲೇಜು ತಿಳಿಸಿದೆ.
ಭಾರತೀಯ ಸೇನಾ ಪಡೆಗಳು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿವೆ ಎಂದು ಶ್ಲಾಘಿಸಿದ ಇತ್ತೀಚೆಗಷ್ಟೆ ಹೆಣ್ಣು ಶಿಶುವಿಗೆ ಜನ್ಮ ನೀಡಿರುವ ಖುಷಿನಗರ ನಿವಾಸಿ ಅರ್ಚನಾ ಶಾಹಿ, ತಮ್ಮ ಪುತ್ರಿಗೆ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಹೆಸರನ್ನು ನಾಮಕರಣ ಮಾಡಿದ್ದಾರೆ.
“ಪಹಲ್ಗಾಮ್ ದಾಳಿಯ ಬೆನ್ನಿಗೇ, ಇತ್ತೀಚೆಗಷ್ಟೆ ವಿವಾಹಿತರಾಗಿದ್ದ ಮಹಿಳೆಯರು ತಮ್ಮ ಪತಿಯಂದಿರನ್ನು ಕಳೆದುಕೊಂಡು, ಅವರ ಜೀವನದಲ್ಲಿ ಆಘಾತ ಎದುರಿಸಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ನಡೆಸಿತ್ತು. ಇದೀಗ ಸಿಂಧೂರ್ ಕೇವಲ ಒಂದು ಪದವಲ್ಲ; ಬದಲಿಗೆ ಒಂದು ಭಾವನೆ. ಹೀಗಾಗಿ, ನಾವು ನಮ್ಮ ಪುತ್ರಿಗೆ ಸಿಂಧೂರ್ ಎಂದು ನಾಮಕರಣ ಮಾಡಲು ನಿರ್ಧರಿಸಿದೆವು” ಎಂದು ಅವರು ತಿಳಿಸಿದ್ದಾರೆ.
ಇದೇ ರೀತಿ, ಭಾರತೀಯ ಸೇನೆಯು ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದರಿಂದ ಸ್ಫೂರ್ತಿಗೊಂಡು, ಪದ್ರೌನ್ ನ ನಿವಾಸಿಯಾದ ಮದನ್ ಗುಪ್ತ ಎಂಬುವವರೂ ಕೂಡಾ ತಮ್ಮ ಸೊಸೆ ಕಾಜಲ್ ಗುಪ್ತ ಜನ್ಮ ನೀಡಿರುವ ನವಜಾತ ಹೆಣ್ಣು ಶಿಶುವಿಗೆ ಸಿಂಧೂರ್ ಎಂದೇ ನಾಮಕರಣ ಮಾಡಲು ಬಯಸಿದ್ದಾರೆ. ಇದೇ ಬಗೆಯ ಅಭಿಪ್ರಾಯಗಳನ್ನು ಭಾರತಿ ಬಾಬು ಗ್ರಾಮದ ನಿವಾಸಿಯಾದ ವ್ಯಾಸಮುನಿ ಹಾಗೂ ಪದ್ರೌನ್ ನ ಮತ್ತೋರ್ವ ನಿವಾಸಿಯಾದ ಪ್ರಿಯಾಂಕಾ ದೇವಿ ಕೂಡಾ ವ್ಯಕ್ತಪಡಿಸಿದ್ದಾರೆ.







