ಇನ್ನು ಮುಂದೆ ಇನ್ಸ್ಟಾಗ್ರಾಂನಲ್ಲಿ ಐದಕ್ಕಿಂತ ಹೆಚ್ಚು ಹ್ಯಾಶ್ ಟ್ಯಾಗ್ ಬಳಸಲು ಅವಕಾಶವಿಲ್ಲ!

ಸಾಂದರ್ಭಿಕ ಚಿತ್ರ | Photo Credit : FREEPIK
ಇನ್ಸ್ಟಾಗ್ರಾಂ ಇದೀಗ ಪೋಸ್ಟ್ಗಳಲ್ಲಿ ಐದೇ ಹ್ಯಾಶ್ ಟ್ಯಾಗ್ ಬಳಸುವಂತೆ ಮಿತಿ ಹೇರಿದೆ. ಅಪ್ರಸ್ತುತ ಮತ್ತು ವಿಷಯದ ಹೊರಗಿನ ಹ್ಯಾಶ್ ಟ್ಯಾಗ್ ಬಳಕೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ಸ್ಟಾಗ್ರಾಂ ಬಳಕೆದಾರರಿಗೆ ಒಂದು ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ ಇನ್ಸ್ಟಾಗ್ರಾಂ ಮುಖ್ಯಸ್ಥ ಆಡಂ ಮೊಸೆರಿ. ಅವರು ಇದೀಗ ಘೋಷಿಸಿರುವ ಪ್ರಕಾರ ವೇದಿಕೆಯು ಪ್ರತಿ ಪೋಸ್ಟ್ ಅಥವಾ ರೀಲ್ಗೆ ಐದು ಹ್ಯಾಶ್ ಟ್ಯಾಗ್ಗಳಷ್ಟೇ ಹಾಕಲು ಅನುಮತಿಸುವ ಹೊಸ ನಿಯಮವನ್ನು ತರಲಾಗಿದೆ. ಮೆಟಾ ಮಾಲೀಕತ್ವದ ವೇದಿಕೆಯಾಗಿರುವ ಇನ್ಸ್ಟಾಗ್ರಾಂ ಇತ್ತೀಚೆಗೆ ಬಳಕೆದಾರರು ಹ್ಯಾಶ್ ಟ್ಯಾಗ್ಗಳನ್ನು ಫಾಲೋ ಮಾಡುವುದನ್ನು ತೆಗೆದು ಹಾಕಿದೆ. ಆ ನಿರ್ಣಯ ಕೈಗೊಂಡು ತಿಂಗಳು ಕಳೆಯುವ ಮೊದಲು ಹ್ಯಾಶ್ ಟ್ಯಾಗ್ಗಳನ್ನು ಐದಕ್ಕೆ ಸೀಮಿತಗೊಳಿಸುವ ನಿಯಮ ತಂದಿದೆ.
ಐದು ಹ್ಯಾಶ್ ಟ್ಯಾಗ್ ಮಾತ್ರ ಬಳಕೆ
ಅನ್ವೇಷಣೆ ಮತ್ತು ಹುಡುಕಾಟದಲ್ಲಿ ಹ್ಯಾಶ್ ಟ್ಯಾಗ್ ಈಗಲೂ ಮುಖ್ಯ ಪಾತ್ರವಹಿಸುತ್ತದೆ. ಆದರೆ ಇನ್ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಅನೇಕ ಹ್ಯಾಶ್ ಟ್ಯಾಗ್ಗಳನ್ನು ಬಳಸುವುದು ರೂಢಿಯಾಗಿದೆ. ಕೆಲವೊಮ್ಮೆ ಪೋಸ್ಟ್ ಮಾಡಿರುವ ವಿಷಯಕ್ಕೆ ಸಂಬಂಧಿಸದ ಅಥವಾ ವೈರಲ್ ಆಗಿರುವ ಹ್ಯಾಶ್ ಟ್ಯಾಗ್ ಅನ್ನು ಬಳಸಿ ತಮ್ಮ ಪೋಸ್ಟ್ಗೆ ಜನಪ್ರಿಯತೆ ಪಡೆಯುವುದು ರೂಢಿಯಲ್ಲಿದೆ.
ಇನ್ಸ್ಟಾಗ್ರಾಂನ @creators ಖಾತೆ ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, “ವಿಷಯಕ್ಕೆ ಸಂಬಂಧಿಸಿರುವ ಕಡಿಮೆ (ಐದು) ಹ್ಯಾಶ್ ಟ್ಯಾಗ್ಗಳನ್ನು ಮಾತ್ರ ಬಳಸಲು ಅವಕಾಶ ಕೊಡಲಾಗುವುದು. ಇದರಿಂದ ನಿಮ್ಮ ವಿಷಯಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗಲಿದೆ ಮತ್ತು ಜನರು ಇನ್ಸ್ಟಾಗ್ರಾಂ ಬಳಸುವ ಅನುಭವವೂ ಉತ್ತಮವಾಗಲಿದೆ.”
ವಿಷಯಕ್ಕೆ ನೇರವಾಗಿ ಸಂಬಂಧಿಸಿದ ಟ್ಯಾಗ್
ಮೆಟಾ ಮಾಲೀಕತ್ವದ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಹ್ಯಾಶ್ ಟ್ಯಾಗ್ ಬಳಕೆಯನ್ನು ಅತ್ಯುನ್ನತೀಕರಿಸಲು ಸಲಹೆಗಳನ್ನು ಹಂಚಿಕೊಂಡಿದ್ದು, ವಿಷಯಕ್ಕೆ ನೇರವಾಗಿ ಸಂಬಂಧಿಸಿರುವ ಹ್ಯಾಶ್ ಟ್ಯಾಗ್ಗಳನ್ನು ಮಾತ್ರ ಬಳಸುವಂತೆ ಸೂಚಿಸಿದೆ. ಉದಾಹರಣೆಗೆ ಸೌಂದರ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಪೋಸ್ಟ್ ಮಾಡುವವರು ಸೌಂದರ್ಯಕ್ಕೆ ಸಂಬಂಧಿಸಿದ ಹ್ಯಾಶ್ ಟ್ಯಾಗ್ಗಳನ್ನು ಮಾತ್ರ ಪೋಸ್ಟ್ನಲ್ಲಿ ಬಳಸಬೇಕು. ಇದರಿಂದ ಅಂತಹ ವಿಷಯಗಳ ಮೇಲೆ ಆಸಕ್ತಿ ಇರುವವರು ಪೋಸ್ಟ್ ಹುಡುಕಲು ಸುಲಭವಾಗುತ್ತದೆ ಎಂದು ಇನ್ಸ್ಟಾಗ್ರಾಂ ಹೇಳಿದೆ.
ಸಾರ್ವತ್ರಿಕವಾಗಿ ಬಳಸುವ ಅಥವಾ ಅಪ್ರಸ್ತುತ ಹ್ಯಾಶ್ ಟ್ಯಾಗ್ಗಳಾದ #reels ಅಥವಾ #explore ಮೊದಲಾದ ವಿಷಯವನ್ನು ಜನಪ್ರಿಯಗೊಳಿಸಲು ಹೆಚ್ಚೇನೂ ಸಹಾಯ ಮಾಡುವುದಿಲ್ಲ. ಅವು ಪೋಸ್ಟ್ ಜನಪ್ರಿಯವಾಗುವುದರಲ್ಲಿ ನಕಾರಾತ್ಮಕ ಪರಿಣಾಮ ಬೀರುವ ಅವಕಾಶವೇ ಹೆಚ್ಚು ಎಂದು ಕಂಪೆನಿ ಹೇಳಿದೆ.
ನಿಮ್ಮದೇ ವೀಕ್ಷಕರನ್ನು ರೂಪಿಸುವ ಅವಕಾಶ
“ಹ್ಯಾಶ್ ಟ್ಯಾಗ್ಗಳು ಹುಡುಕಾಟದಲ್ಲಿ ನೆರವಾದರೂ ನಿಮ್ಮ ಪೋಸ್ಟ್ನ ಜನಪ್ರಿಯತೆ ಹೆಚ್ಚಿಸುವಲ್ಲಿ ನೆರವಾಗುವುದಿಲ್ಲ ಮತ್ತು ಕಂಟೆಂಟ್ ರಚಿಸುವವರು ತಮ್ಮದೇ ಆದ ವೀಕ್ಷಕರನ್ನು ಬೆಳೆಸುವತ್ತ ಗಮನಹರಿಸಬೇಕು ಮತ್ತು ಅದಕ್ಕೆ ಸಂಬಂಧಿಸಿದ ಹ್ಯಾಶ್ ಟ್ಯಾಗ್ ಹಾಕುವತ್ತ ಗಮನಹರಿಸಬೇಕು” ಎಂದು ಇನ್ಸ್ಟಾಗ್ರಾಂ ಮುಖ್ಯಸ್ಥ ಆಡಂ ಮಿಸೆರಿ ಇನ್ಸ್ಟಾಗ್ರಾಂ ಸಲಹಾ ಚಾನೆಲ್ನಲ್ಲಿ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಂ ಹೊಸ ವೈಶಿಷ್ಟ್ಯವೊಂದನ್ನು ಬಿಡುಗಡೆ ಮಾಡಿದೆ. ರೀಲ್ಸ್ ಟ್ಯಾಬ್ನಲ್ಲಿ ಏನು ಕಾಣಿಸಿಕೊಳ್ಳುತ್ತದೆ ಎನ್ನುವುದರ ಮೇಲೆ ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣವನ್ನು ಕೊಡುವ ಬದಲಾವಣೆ. “ನಿಮ್ಮ ಆಲ್ಗಾರಿದಂ” ಎಂದು ಹೇಳಲಾದ ಹೊಸ ಕಾರ್ಯದಲ್ಲಿ ಎರಡು ಗೆರೆಗಳಿರುವ ಸಣ್ಣ ಐಕಾನ್ ಕೊಡಲಾಗಿದೆ. ಬಳಕೆದಾರರಿಗೆ ಅತಿ ಮುಖ್ಯ ಎಂದು ಇನ್ಸ್ಟಾಗ್ರಾಂ ಯೋಚಿಸುವ ಪೋಸ್ಟ್ಗಳನ್ನು ಅದರಲ್ಲಿ ಕಾಣಬಹುದು. ಅದನ್ನು ಟ್ಯಾಪ್ ಮಾಡುವುದರಿಂದ ಹೊಸ ಪುಟ ತೆರೆದುಕೊಳ್ಳುತ್ತದೆ. ನಿಮಗೆ ಇಷ್ಟ ಇರುವವರಿಗೆ ಪೋಸ್ಟ್ಗಳನ್ನು ಬಹಿರಂಗವಾಗಿ ಟ್ಯಾಗ್ ಮಾಡುವ ಅವಕಾಶವನ್ನೂ ಅದರಲ್ಲಿ ನೀಡಲಾಗಿದೆ.







