11,000ಕ್ಕೂ ಅಧಿಕ ರೈಲು ಬೋಗಿಗಳಲ್ಲಿ ಕ್ಯಾಮೆರಾಗಳ ಅಳವಡಿಕೆ: ಅಶ್ವಿನಿ ವೈಷ್ಣವ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಆ.6: ಭಾರತೀಯ ರೈಲ್ವೆಯು ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ವಿವಿಧ ವಲಯಗಳಲ್ಲಿ ಈವರೆಗೆ 11,535 ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಲೋಕಸಭೆಯಲ್ಲಿ ತಿಳಿಸಿದರು.
ವೈಷ್ಣವ್ ಅವರ ಪ್ರಕಾರ,ಸುಮಾರು 74,000 ಬೋಗಿಗಳು ಮತ್ತು 15,000 ರೈಲು ಇಂಜಿನ್ ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು.
ಪ್ರತಿ ಪ್ರವೇಶದ್ವಾರದಲ್ಲಿ ತಲಾ ಎರಡರಂತೆ ಪ್ರತಿ ಬೋಗಿಯಲ್ಲಿ ನಾಲ್ಕು ಸಿಸಿಟಿವಿ ಕ್ಯಾಮೆರಾಗಳನ್ನು ಒದಗಿಸಲಾಗುವುದು. ಪ್ರತಿ ಇಂಜಿನ್ ಆರು ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿರಲಿದ್ದು, ಮುಂದೆ, ಹಿಂದೆ ಮತ್ತು ಇಂಜಿನ್ ನ ಎರಡೂ ಪಾರ್ಶ್ವಗಳಲ್ಲಿ ತಲಾ ಒಂದು ಹಾಗೂ ಕ್ಯಾಬಿನ್ ಗಳಲ್ಲಿ ತಲಾ ಒಂದು ಕ್ಯಾಮೆರಾಗಳ ಜೊತೆಗೆ ಎರಡು ಡೆಸ್ಕ್-ಮೌಂಟೆಡ್ ಮೈಕ್ರೋಫೋನ್ ಗಳನ್ನು ಅಳವಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದರು.
ಈ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳು ರೈಲು ಪ್ರತಿಗಂಟೆಗೆ 100 ಕಿ.ಮೀ.ಅಥವಾ ಹೆಚ್ಚಿನ ವೇಗದಲ್ಲಿ ಓಡುತ್ತಿರುವಾಗಲೂ ಉತ್ತಮ ಗುಣಮಟ್ಟದ ದೃಶ್ಯಾವಳಿಗಳನ್ನು ಒದಗಿಸಲಿವೆ ಎಂದ ಅವರು,ಸಂಬಂಧಿತ ಎಲ್ಲ ಕೆಲಸಗಳು ಪೂರ್ಣಗೊಂಡ ಬಳಿಕ ಸಿಸಿಟಿವಿಗಳಿಗಾಗಿ ವೆಚ್ಚವು ನಿರ್ಧಾರಗೊಳ್ಳಲಿದೆ ಎಂದು ತಿಳಿಸಿದರು.
ಸಿಸಿಟಿವಿ ಕ್ಯಾಮೆರಾಗಳನ್ನು ಬಾಗಿಲುಗಳ ಬಳಿ ಅಳವಡಿಸಲಾಗುವುದರಿಂದ ಪ್ರಯಾಣಿಕರ ಖಾಸಗಿತನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದರು.





