ಪ್ರಾಡಾದ ಒಂದು ಸೇಫ್ಟಿಪಿನ್ಗೆ 69,000 ರೂ.!

Photo Credit :X\ fortuneindia.com
ಹೊಸದಿಲ್ಲಿ: ಐಷಾರಾಮಿ ಬ್ರ್ಯಾಂಡ್ಗಳು ದೈನಂದಿನ ಅಗತ್ಯದ ಸಾಮಗ್ರಿಗಳಿಗೆ ಹೊಸ ರೂಪ ನೀಡಿ ಅವುಗಳಿಗೆ ಬೆಚ್ಚಿ ಬೀಳಿಸುವಂತಹ ದುಬಾರಿ ಬೆಲೆಗಳನ್ನು ನಿಗದಿಗೊಳಿಸುವ ಹೊಸ ಗೀಳನ್ನು ಕಂಡುಕೊಂಡಿರುವಂತಿದೆ. ಪೇಪರ್ ಬ್ಯಾಗ್ಗಳು, ಚಪ್ಪಲಿಗಳು ಮತ್ತು ಊಟದ ಡಬ್ಬಿಗಳನ್ನು ಹೊಸ ವಿನ್ಯಾಸಗಳಲ್ಲಿ ಪ್ರಸ್ತುತ ಪಡಿಸಿದ ಬಳಿಕ ಈಗ ಐಷಾರಾಮಿ ಸೇಫ್ಟಿ ಪಿನ್ ಮಾರುಕಟ್ಟೆಯನ್ನು ಪ್ರವೇಶಿಸಿದೆ.
ಇಟಲಿಯ ಐಷಾರಾಮಿ ಫ್ಯಾಷನ್ ಸಂಸ್ಥೆ ಪ್ರಾಡಾ ಈ ‘ಕ್ರೋಷೆ ಸೇಫ್ಟಿ ಪಿನ್ ಬ್ರೂಚ್’ನ್ನು ಹೊರತಂದಿದೆ. ಇದು ವರ್ಣರಂಜಿತ ಕ್ರೋಷೆ ನೂಲಿನಿಂದ ಸುತ್ತಲಾಗಿರುವ ಚಿನ್ನದ ಬಣ್ಣದ ಮಾಮೂಲಿ ಸೇಫ್ಟಿ ಪಿನ್ ಆಗಿದ್ದು, ಪ್ರಾಡಾದ ತ್ರಿಕೋನ ಲೋಗೊವನ್ನು ಹೊಂದಿದೆ. ಬೆಲೆ ಕೇವಲ 775 ಡಾಲರ್ಗಳು(ಸುಮಾರು 68,758 ರೂ.)!
ಭಾರತದಲ್ಲಿ 20ರಿಂದ 30 ಸೇಫ್ಟಿಪಿನ್ಗಳ ಪ್ಯಾಕ್ನ ಬೆಲೆ ಅಬ್ಬಬ್ಬಾ ಎಂದರೆ 20 ರೂ.ಗಳಿಂದ 50 ರೂ.ಅಷ್ಟೇ. ಪ್ರತಿಯೊಬ್ಬ ಮಹಿಳೆಯ ಬ್ಯಾಗಿನಲ್ಲಿ ಇದು ಅನಿವಾರ್ಯ ವಸ್ತುವಾಗಿದ್ದು ಸಾಮಾನ್ಯವಾಗಿ ದುಪಟ್ಟಾ,ಸೀರೆ ಅಥವಾ ಕುರ್ತಾ ಜಾರದಿರಲು ಬಳಸಲಾಗುತ್ತದೆ. ಹೀಗಾಗಿ ಪ್ರಾಡಾ ಸೇಫ್ಟಿಪಿನ್ನ್ನು ಸುಮಾರು 69,000 ರೂ.ಗಳಿಗೆ ಮಾರಾಟ ಮಾಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಾಡಾದ ನೂತನ ಉತ್ಪನ್ನಕ್ಕೆ ಪ್ರತಿಕ್ರಿಯಿಸುತ್ತಿರುವ ಮಹಿಳೆಯ ವೀಡಿಯೊ ತುಣುಕನ್ನು ಬ್ಲ್ಯಾಕ್ಸ್ವಾನ್ಸೇಝಿ ಹೆಸರಿನ ಇನ್ಸ್ಟಾಗ್ರಾಂ ಪುಟವು ಹಂಚಿಕೊಂಡಿದೆ.
ಅದು 775 ಡಾ.ಗಳ ಸೇಫ್ಟಿ ಪಿನ್ ಎಂದು ಉದ್ಗರಿಸಿದ ಮಹಿಳೆ,ನೀವು ನಿಮ್ಮ ಹಣದೊಂದಿಗೆ ಏನು ಮಾಡುತ್ತೀರಿ ಎಂದು ಮತ್ತೊಮ್ಮೆ ಶ್ರೀಮಂತರನ್ನು ಕೇಳಬಯಸುತ್ತೇನೆ. ನಿಮಗೆ ಏನೂ ಹೊಳೆಯದಿದ್ದರೆ,ನಮಗಂತೂ ಖಂಡಿತ ಹೊಳೆಯುತ್ತದೆ’ ಎಂದಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳು ವ್ಯಂಗ್ಯಗಳಿಂದ ತುಂಬಿಹೋಗಿವೆ. ‘ಪ್ರಾಡಾದ ಕೀ ಇಲ್ಲದೆಯೂ ನಾನು ಅದನ್ನು ಮಾಡಬಲ್ಲೆ ಎಂದು ಓರ್ವ ಬಳಕೆದಾರ ಬರೆದಿದ್ದರೆ, ಐಷಾರಾಮಿ ಬ್ರ್ಯಾಂಡ್ಗಳು ನಮ್ಮನ್ನು ಟ್ರೋಲ್ ಮಾಡುತ್ತಿವೆಯೇ ಎಂದು ಇನ್ನೋರ್ವರು ಪ್ರಶ್ನಿಸಿದ್ದಾರೆ. ನನ್ನ ಅಜ್ಜಿ ಇದಕ್ಕಿಂತ ಸೊಗಸಾಗಿ ಮಾಡಬಲ್ಲರು ಎಂದು ಇನ್ನೋರ್ವರು ಕುಟುಕಿದ್ದಾರೆ.
775 ಡಾಲರ್ ಗಳಿಗೆ ಪ್ರಾಡಾದ ಸೇಫ್ಟಿಪಿನ್! ಅದು ಹಿತ್ತಾಳೆ ಮತ್ತು ಹತ್ತಿ. ಯಾರಾದರೂ ಖರೀದಿಸಲು ಬಯಸಿದ್ದೀರಾ? ನಾನಿದನ್ನು ನಿಮಗಾಗಿ ಚಿನ್ನ ಮತ್ತು ಬೆಳ್ಳಿಯಿಂದ ಮಾಡುತ್ತೇನೆ ಎಂದು ಇನ್ನೋರ್ವ ಬಳಕೆದಾರರು ಹೇಳಿದ್ದಾರೆ.
ಪ್ರಾಡಾಕ್ಕೆ ಇಂತಹ ವಿವಾದಗಳು ಹೊಸದಲ್ಲ. ಮಿಲಾನ್ ಫ್ಯಾಷನ್ ವೀಕ್ನಲ್ಲಿ ಭಾರತದ ಸಾಂಪ್ರದಾಯಿಕ ಕೊಲ್ಲಾಪುರಿ ಚಪ್ಪಲಿಯನ್ನೇ ಹೋಲುವ ಪಾದರಕ್ಷೆಯನ್ನು ಪರಿಚಯಿಸುವ ಮೂಲಕ ಅದು ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿತ್ತು. ಈ ವಿವಾದವು ಭಾರತದಲ್ಲಿ ಕೊಲ್ಲಾಪುರಿ ಚಪ್ಪಲಿಗಳ ಮಾರಾಟವನ್ನು ಹೆಚ್ಚಿಸಿತ್ತು.







