ಇಂಟರ್ ನೆಟ್ ಸ್ಥಗಿತ: 2024ರಲ್ಲಿ ಇಡೀ ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ

Photo : Chat GPT
ಹೊಸದಿಲ್ಲಿ: 2024ರಲ್ಲಿ ಭಾರತದಲ್ಲಿ 84 ಬಾರಿ ಇಂಟರ್ ನೆಟ್ ಸೇವೆ ಸ್ಥಗಿತಗೊಂಡಿದ್ದು, ಇದು ಇಡೀ ವಿಶ್ವದಲ್ಲೇ ಎರಡನೇ ಅತ್ಯಧಿಕ ಸಂಖ್ಯೆಯಾಗಿದೆ ಎಂದು ಡಿಜಿಟಲ್ ಹಕ್ಕುಗಳ ಸಂಘಟನೆ Access Now ಹೇಳಿದೆ.
ಮ್ಯಾನ್ಮಾರ್ ನಲ್ಲಿ ಸೇನಾಧಿಕಾರಿ ಜುಂಟಾ 85 ಬಾರಿ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದು, ಇದು ಇಡೀ ವಿಶ್ವದಲ್ಲೇ ಅತ್ಯಧಿಕವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕಳೆದ ಆರು ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಅತ್ಯಧಿಕ ಬಾರಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಿದ ಜಾಗತಿಕ ಪಟ್ಟಿಯಲ್ಲಿ ಭಾರತದ ಹೆಸರನ್ನು ಉಲ್ಲೇಖಿಸಲಾಗಿಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.
“2023ಕ್ಕೆ ಹೋಲಿಸಿದರೆ (116 ಬಾರಿ ಇಂಟರ್ ನೆಟ್ ಸೇವೆ ಸ್ಥಗಿತ) 2024ರಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತ ಸಂಖ್ಯೆಗಳಲ್ಲಿ ಸಾಧಾರಣ ಮಟ್ಟದ ಇಳಿಕೆಯಾಗಿದ್ದರೂ, ಆ ವರ್ಷದಲ್ಲಿ ಪ್ರಜಾತಂತ್ರ ದೇಶವಾದ ಭಾರತದಲ್ಲಿ 84 ಬಾರಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು” ಎಂದು ಸೋಮವಾರ ಪ್ರಕಟವಾಗಿರುವ ವರದಿಯಲ್ಲಿ ಹೇಳಲಾಗಿದೆ.
ಭಾರತದಲ್ಲಿ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇಂಟರ್ ನೆಟ್ ಸೇವೆ ಸ್ಥಗಿತವನ್ನು ಅನುಭವಿಸಿದ್ದು, ಮಣಿಪುರ (21) ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಹರ್ಯಾಣ (12) ಹಾಗೂ ಜಮ್ಮು ಮತ್ತು ಕಾಶ್ಮೀರ (12) ಇವೆ. 85 ಇಂಟರ್ ನೆಟ್ ಸೇವೆ ಸ್ಥಗಿತ ಪ್ರಕರಣಗಳ ಪೈಕಿ 41 ಪ್ರಕರಣಗಳು ಪ್ರತಿಭಟನೆಗಳಿಗೆ ಸಂಬಂಧಿಸಿದ್ದಾಗಿದ್ದು, 21 ಪ್ರಕರಣಗಳು ಕೋಮುಗಲಭೆಗಳಿಗೆ ಸಂಬಂಧಿಸಿವೆ.
ಕಳೆದ ವರ್ಷ ನಡೆದಿದ್ದ ಸರಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳ ಸಂದರ್ಭದಲ್ಲಿ ಪ್ರಾಧಿಕಾರಗಳು ಐದು ಬಾರಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.
2024ರಲ್ಲಿ ವಿಶ್ವದ 54 ದೇಶಗಳಲ್ಲಿ ಒಟ್ಟು 296 ಇಂಟರ್ ನೆಟ್ ಸೇವೆ ಸ್ಥಗಿತ ಪ್ರಕರಣಗಳು ದಾಖಲಾಗಿವೆ. ಈ ಸಂಖ್ಯೆ 2023ಕ್ಕೆ ಹೋಲಿಸಿದರೆ ತೀವ್ರ ಸ್ವರೂಪದ ಏರಿಕೆಯಾಗಿದ್ದು, 2023ರಲ್ಲಿ ಒಟ್ಟು 283 ಇಂಟರ್ ನೆಟ್ ಸೇವೆ ಸ್ಥಗಿತ ಪ್ರಕರಣಗಳು ದಾಖಲಾಗಿದ್ದವು.
“ವರ್ಷದಿಂದ ವರ್ಷಕ್ಕೆ ಗಲಭೆ, ಪ್ರತಿಭಟನೆಗಳು, ಚುನಾವಣೆಗಳು ಹಾಗೂ ಪರೀಕ್ಷೆಗಳು ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲು ಪ್ರಾಧಿಕಾರಗಳ ಪಾಲಿಗೆ ಸ್ಥಿರ ಕಾರಣಗಳಾಗಿ ಹೊರ ಹೊಮ್ಮಿವೆ” ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
2024ರಲ್ಲಿ ವಿಶ್ವಾದ್ಯಂತ ಇಂಟರ್ ನೆಟ್ ಸೇವೆ ಸ್ಥಗಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, 2023ರಲ್ಲಿ 39 ದೇಶಗಳಲ್ಲಿ 283 ಇಂಟರ್ ನೆಟ್ ಸೇವೆ ಸ್ಥಗಿತ ಪ್ರಕರಣಗಳಿದ್ದದ್ದು, 2024ರಲ್ಲಿ 54 ದೇಶಗಳಲ್ಲಿ 296ಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇಂಟರ್ ನೆಟ್ ಸೇವೆ ಸ್ಥಗಿತದಲ್ಲಿ ಪಾಕಿಸ್ತಾನ ಮೂರನೆಯ ಸ್ಥಾನದಲ್ಲಿದ್ದು, ಅಲ್ಲಿ ಒಟ್ಟು 21 ಬಾರಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಂತರದ ಸ್ಥಾನದಲ್ಲಿರುವ ರಶ್ಯದಲ್ಲಿ 13 ಬಾರಿ, ಉಕ್ರೇನ್ ನಲ್ಲಿ 7 ಬಾರಿ ಫೆಲೆಸ್ತೀನ್ ನಲ್ಲಿ ಆರು ಬಾರಿ ಹಾಗೂ ಬಾಂಗ್ಲಾದೇಶದಲ್ಲಿ ಐದು ಬಾರಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಸೌಜನ್ಯ:deccanherald.co.in







