ರಿಲಯನ್ಸ್ ಮಾಲಕತ್ವದ ವಂತಾರಾಗೆ ವಿದೇಶಿ ಪ್ರಾಣಿಗಳ ವರ್ಗಾವಣೆ : ಹಲವು ಪ್ರಶ್ನೆಗಳನ್ನೆತ್ತಿದ ತನಿಖೆ

ಅನಂತ್ ಅಂಬಾನಿ | PC: thenewsminute.com
ಹೊಸದಿಲ್ಲಿ: ಈಶಾನ್ಯ ಪ್ರಾಂತ್ಯದ ದುರ್ಬಲ ಗಡಿಗಳಿಂದ ಭಾರತಕ್ಕೆ ವಿದೇಶಿ ವನ್ಯಜೀವಿಗಳನ್ನು ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂಬುದರ ಮೇಲೆ ‘Himal Southasian’ ನಿಯತಕಾಲಿಕದಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ತನಿಖಾ ವರದಿಯೊಂದು ಬೆಳಕು ಚೆಲ್ಲಿದೆ. ಎಂ.ರಾಜಶೇಖರ್ ಮಾಡಿರುವ ಈ ವರದಿಯಲ್ಲಿ ವನ್ಯಜೀವಿ ಕಳ್ಳ ಸಾಗಣೆಯ ಹಲವಾರು ರವಾನೆಗಳನ್ನು ಕಾನೂನು ಜಾರಿ ಪ್ರಾಧಿಕಾರಿಗಳು ತಡೆದು, ಅವುಗಳಿಗೆ ಮೃಗಾಲಯಗಳಲ್ಲಿ ಮರು ಆಶ್ರಯ ಒದಗಿಸಿದ್ದರೂ, ಗಮನಾರ್ಹ ಸಂಖ್ಯೆಯ ವನ್ಯಜೀವಿಗಳು, ವನ್ಯಜೀವಿಗಳ ರಕ್ಷಣೆ ಹಾಗೂ ಆಶ್ರಯಕ್ಕಾಗಿ ರಿಲಯನ್ಸ್ ಇಂಡಸ್ಟ್ರೀಸ್ ನ ಯೋಜನೆಯಾದ ವಂತಾರಾಗೆ ರವಾನೆಯಾಗಿರುವುದು ಕಂಡು ಬಂದಿದೆ.
ಜಾಮ್ ನಗರದ ಪೆಟ್ರೊಕೆಮಿಕಲ್ಸ್ ಸಂಕೀರ್ಣದ ಆವರಣದಲ್ಲಿರುವ ವಂತಾರಾ, ಮಾರ್ಚ್ 2024ರ ಆರಂಭದಲ್ಲಿ ನಡೆದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಾಧ್ಯಮಗಳ ಗಮನ ಸೆಳೆದಿತ್ತು.
ವರದಿಯ ಪ್ರಕಾರ, ದಿನ ಕಳೆದಂತೆ ವನ್ಯಜೀವಿ ವ್ಯವಹಾರವು ಚುರುಕುಗೊಂಡಿದೆ. 2018ರವರೆಗೆ ಇವುಗಳ ಬಹುತೇಕ ವ್ಯವಹಾರವು ಭಾರತದ ಮೂಲದ್ದಾಗಿತ್ತು ಹಾಗೂ ಅವನ್ನು ಮಯನ್ಮಾರ್, ಚೀನಾ ಹಾಗೂ ವಿಯೆಟ್ನಾಂನಂತಹ ದೇಶಗಳಿವೆ ಸಾಗಾಟ ಮಾಡಲಾಗುತ್ತಿತ್ತು. ಈಗ ಈ ಪ್ರವೃತ್ತಿಯು ತಿರುವುಮುರುವಾಗಿದೆ. ಸದ್ಯ, ಆಗ್ನೇಯ ಏಶ್ಯಾ ಮತ್ತು ಲ್ಯಾಟಿನ್ ಅಮೆರಿಕಾದಿಂದ ಕಾಂಗರೂಗಳು, ಸರೀಸೃಪಗಳು, ಪಕ್ಷಿಗಳು ಹಾಗೂ ಸಸ್ತನಿಗಳಂಥ ವಿದೇಶಿ ವನ್ಯಜೀವಿಗಳನ್ನು ಹೊಸ ಸರಬರಾಜು ಜಾಲವು ಭಾರತದೊಳಕ್ಕೆ ತಂದು ಬಿಡುತ್ತಿದೆ.
ಈ ಕಳ್ಳ ಸಾಗಣೆಯನ್ನು ಮಧ್ಯದಲ್ಲೇ ಭೇದಿಸಿದಾಗ, ಕಳ್ಳ ಸಾಗಣೆ ಮಾಡಿದ ಪಕ್ಷಿಗಳು ಹಾಗೂ ಪ್ರಾಣಿಗಳನ್ನು ಸಮೀಪದ ರಾಜ್ಯ ಮಾಲಕತ್ವದ ಗುವಾಹಟಿ ಅಥವಾ ಐಝ್ವಲ್ ನಂತಹ ನಗರಗಳಲ್ಲಿರುವ ಮೃಗಾಲಯಗಳಿಗೆ ವರ್ಗಾಯಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಈ ಪ್ರವೃತ್ತಿಯಲ್ಲಿ ಬದಲಾವಣೆಯಾಗಿರುವುದು ಕಂಡು ಬಂದಿದ್ದು, ಗಮನಾರ್ಹ ಸಂಖ್ಯೆಯ ರಕ್ಷಿಸಲ್ಪಟ್ಟ ಪ್ರಾಣಿಗಳನ್ನು ಅಸ್ಸಾಂನಲ್ಲಿರುವ ಮೃಗಾಲಯಗಳಿಂದ ಜಾಮ್ ನಗರ್ ಗೆ ಸ್ಥಳಾಂತರಿಸಲಾಗಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ವಂತಾರಾ ತೀವ್ರ ಸ್ವರೂಪದಲ್ಲಿ ಬೆಳವಣಿಗೆಯಾಗಿರುವುದನ್ನು ಎತ್ತಿ ತೋರಿಸಿರುವ ವರದಿಯು, ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಗಮನಾರ್ಹ ಸಂಗ್ರಹಣೆ ಹಾಗೂ ಈ ಸೌಕರ್ಯವನ್ನು ನಿರ್ವಹಿಸಲು 2,700ರಷ್ಟು ಸಿಬ್ಬಂದಿಗಳಿರುವುದರತ್ತಲೂ ಬೊಟ್ಟು ಮಾಡಿದೆ. Greens Zoological, Rescue and Rehabilitation Centreನ 2022-23ರ ವಾರ್ಷಿಕ ವರದಿಯ ಪ್ರಕಾರ, ವಂತಾರವು 134 ಪ್ರಭೇದಗಳ 3,889 ಪಕ್ಷಿಗಳು ಹಾಗೂ ಪ್ರಾಣಿಗಳನ್ನು ಹೊಂದಿದೆ. ಈ ಸಂಸ್ಥೆಯು ರಾಧೆಕೃಷ್ಣ ದೇವಾಲಯ ಗಜ ಕಲ್ಯಾಣ ಟ್ರಸ್ಟ್ ನ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ.
‘Himal’ ವರದಿಯಲ್ಲಿ ಇತರ ಮೃಗಾಲಯಗಳಿಂದ ವಂತಾರಾಗೆ ವನ್ಯಜೀವಿಗಳನ್ನು ಸ್ಥಳಾಂತರಿಸಿರುವುದರ ಕುರಿತೂ ಪ್ರಶ್ನೆರಗಳನ್ನು ಎತ್ತಲಾಗಿದೆ. ಉದಾಹರಣೆಗೆ, ಮಾರ್ಚ್ 2021ರಿಂದ ಮಾರ್ಚ್ 2023ರ ನಡುವೆ ಗುಜರಾತ್ ನ ಜುನಾಗಢ್ ನಲ್ಲಿರುವ ಸಕ್ಕರ್ ಬಾಗ್ ಮೃಗಾಲಯದಿಂದ ಜಾಮ್ ನಗರ್ ಗೆ 101 ಚಿರತೆಗಳನ್ನು ಸ್ಥಳಾಂತರಿಸಲಾಗಿದೆ. ಆದರೆ, ಇಂತಹ ಗಮನಾರ್ಹ ಸಂಖ್ಯೆಯ ಸ್ಥಳಾಂತರಕ್ಕೆ ಯಾವುದೇ ಸಮರ್ಥನೀಯ ಕಾರಣಗಳನ್ನು ನೀಡಲಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2022-23ನೇ ಆರ್ಥಿಕ ವರ್ಷದಲ್ಲಿ Greens ಸಂಸ್ಥೆಯು ಒಟ್ಟು 160 ವನ್ಯಜೀವಿಗಳ ಸ್ವೀಕಾರದ ವಹಿವಾಟನ್ನು ದಾಖಲಿಸಿದೆ. ಈ ಪೈಕಿ ಕೆಲವು ಪ್ರಭೇದದ ಪಕ್ಷಿಗಳು ತಮಿಳುನಾಡು, ಗುಜರಾತ್, ಉತ್ತರಾಖಂಡ, ಮಧ್ಯಪ್ರದೇಶ, ದಿಲ್ಲಿ, ಅಸ್ಸಾಂ, ಉತ್ತರ ಪ್ರದೇಶ, ಮಣಿಪುರ, ಕರ್ನಾಟಕ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ನಾಗಾಲ್ಯಾಂಡ್ ರಾಜ್ಯ ಮಾಲಕತ್ವದ ಮೃಗಾಲಯಗಳ ಮೂಲದ್ದಾಗಿವೆ.