ನಿರಂತರ ತೈಲ ಕಳ್ಳ ಸಾಗಾಣಿಕೆ: ಕುರ್ದಿಶ್ ಸರಕಾರ ಹೊಣೆ ಎಂದು ಇರಾಕ್ ಆರೋಪ

PC : freepik.com
ಬಾಗ್ದಾದ್: ಕುರ್ದಿಶ್ ಪ್ರಾಂತ್ಯದಿಂದ ಇರಾಕ್ ಹೊರಗೆ ನಡೆಯುತ್ತಿರುವ ನಿರಂತರ ತೈಲ ಕಳ್ಳ ಸಾಗಾಣಿಕೆಗೆ ಕುರ್ದಿಶ್ ಪ್ರಾಂತೀಯ ಸರಕಾರ ಕಾನೂನಾತ್ಮಕ ಹೊಣೆಗಾರಿಕೆ ಹೊಂದಿದೆ ಎಂದು ಗುರುವಾರ ಇರಾಕ್ ನ ತೈಲ ಸಚಿವಾಲಯ ಆರೋಪಿಸಿದೆ.
ಇರಾಕ್ ತೈಲ ಸಚಿವಾಲಯವು ಈ ಕುರಿತು ಎಲ್ಲ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಿದೆ ಎಂದೂ ಅದು ಹೇಳಿದೆ. ಇರಾಕ್ ಹಾಗೂ ಕುರ್ದಿಶ್ ದೇಶಗಳ ನಡುವಿನ ಉದ್ವಿಗ್ನತೆಗೆ ತೈಲ ಮತ್ತು ಅನಿಲದ ಮೇಲಿನ ನಿಯಂತ್ರಣಕ್ಕಾಗಿನ ಪೈಪೋಟಿ ಕಾರಣವಾಗಿದೆ.
ಒಪ್ಪಂದವಾಗಿರುವ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ತೈಲಕ್ಕೆ ಬದಲಿಯಾಗಿ, ರಫ್ತಿನ ಪ್ರಮಾಣವನ್ನು ತಗ್ಗಿಸಬೇಕು ಎಂದು ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ(ಒಪೆಕ್) ಇರಾಕ್ ಮೇಲೆ ಒತ್ತಡ ಹೇರುತ್ತಿದೆ. ಅಲ್ಲದೆ, ಕುರ್ದಿಶ್ ನಿಂದ ಹೊರ ಹೋಗುವ ತೈಲವನ್ನೂ ಇರಾಕ್ ನ ಮೀಸಲು ಪ್ರಮಾಣ ಎಂದೇ ಒಪೆಕ್ ಲೆಕ್ಕ ಹಾಕುತ್ತಿದೆ.
ಈ ಸಂಬಂಧ 2022ರಲ್ಲಿ ತೀರ್ಪು ನೀಡಿದ್ದ ಇರಾಕ್ ಫೆಡರಲ್ ನ್ಯಾಯಾಲಯ, ಇರಾಕಿ ಕುರ್ದಿಸ್ತಾನದಲ್ಲಿನ ತೈಲ ಮತ್ತು ಅನಿಲ ಕಾನೂನು ಅಸಾಂವಿಧಾನಿಕವಾಗಿದ್ದು, ಕುರ್ದಿಶ್ ಪ್ರಾಧಿಕಾರಗಳು ತಮ್ಮ ಕಚ್ಚಾ ತೈಲ ಪೂರೈಕೆಯನ್ನು ಇರಾಕ್ ಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿತ್ತು.
ಕಾನೂನು ಪಾಲಿಸುವಲ್ಲಿ ಕುರ್ದಿಶ್ ಪ್ರಾಂತೀಯ ಸರಕಾರ ವಿಫಲವಾಗಿರುವುದರಿಂದ, ತೈಲ ರಫ್ತು ಹಾಗೂ ಸಾರ್ವಜನಿಕ ಆದಾಯವೆರಡಕ್ಕೂ ಧಕ್ಕೆಯಾಗಿದೆ. ಇದರಿಂದಾಗಿ, ಒಪೆಕ್ ಮೀಸಲು ಪ್ರಮಾಣವನ್ನು ಕಾಯ್ದುಕೊಳ್ಳಲು ಇತರ ತೈಲ ನಿಕ್ಷೇಪಗಳಿಂದ ತೈಲ ರಫ್ತನ್ನು ಇರಾಕ್ ಕಡಿತಗೊಳಿಸಬೇಕಾಗಿ ಬಂದಿದೆ ಎಂದೂ ಇರಾಕ್ ತೈಲ ಸಚಿವಾಲಯ ಆರೋಪಿಸಿದೆ.







