ಐರ್ಲೆಂಡ್ನಲ್ಲಿ ಭಾರತೀಯನ ಬಟ್ಟೆ ಬಿಚ್ಚಿಸಿ ಗುಂಪು ಹಲ್ಲೆ

PC: x.com/manoramanews
ಡಬ್ಲೀನ್: ಐರ್ಲೆಂಡ್ ನ ಡಬ್ಲೀನ್ ನಲ್ಲಿ ಭಾರತೀಯರೊಬ್ಬರ ಬಟ್ಟೆ ಬಿಚ್ಚಿಸಿ ಗುಂಪು ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಇದು ವರ್ಣದ್ವೇಷದ ಪ್ರಕರಣ ಇರಬೇಕು ಎಂದು ಶಂಕಿಸಲಾಗಿದೆ. ಮಕ್ಕಳ ಜತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಆರೋಪದಲ್ಲಿ ಗುಂಪೊಂದು ಭಾರತೀಯನ ಮೇಲೆ ಹಲ್ಲೆ ನಡೆಸಿದೆ.
ಹಲ್ಲೆಗೊಳಗಾದ ಭಾರತೀಯ ವ್ಯಕ್ತಿಯ ಗುರುತು ಬಹಿರಂಗಪಡಿಸಿಲ್ಲ. ಆದರೆ 40 ವರ್ಷದ ವ್ಯಕ್ತಿ ಎಂದು ಹೇಳಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಇದು ದ್ವೇಷಾಪರಾಧವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಐರಿಷ್ ಟೈಮ್ಸ್ ವರದಿ ಮಾಡಿದೆ.
ಈ ಘಟನೆ ಜುಲೈ 19ರಂದು ಡಬ್ಲೀನ್ ನ ಟಲ್ಲಗ್ಟ್ ನಲ್ಲಿ ನಡೆದಿದೆ. ಭಾರತೀಯ ವ್ಯಕ್ತಿಯ ಮೇಲೆ ಗುಂಪು ಹಲ್ಲೆ ನಡೆಸಿದ್ದು, ಅವರ ಪ್ಯಾಂಟ್ ಬಿಚ್ಚಿಸಿದೆ. ಸ್ಥಳೀಯರು ಮಧ್ಯಪ್ರವೇಶಿಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಅವರ ಮುಖ, ಕೈ ಮತ್ತು ಕಾಲುಗಳಿಂದ ರಕ್ತ ಸೋರುತ್ತಿದ್ದು, ಹಲವು ಕಡೆಗಳಲ್ಲಿ ಗಾಯಗಳಾಗಿವೆ. ಟಲ್ಲಗ್ಟ್ ವಿಶ್ವವಿದ್ಯಾನಿಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಐರ್ಲೆಂಡ್ ನ ರಾಷ್ಟ್ರೀಯ ಪೊಲೀಸರ ಪ್ರಕಾರ, ಮಕ್ಕಳ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂಬ ಸುಳ್ಳು ಆರೋಪ ಮಾಡಿ ಈ ಹಲ್ಲೆ ನಡೆಸಲಾಗಿದೆ. ಬಲಪಂಥೀಯ ಸಂಘಟನೆಗಳು ಮತ್ತು ವಲಸೆ ವಿರೋಧಿ ಮನೋಭಾವದವರು ಸಾಮಾಜಿಕ ಜಾಲತಾಣಗಳಲ್ಲೂ ಈ ಪ್ರಚಾರ ನಡೆಸುತ್ತಿದ್ದಾರೆ. ವಾಸ್ತವವಾಗಿ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ.







