ಗುಂಪು ಹಿಂಸಾಚಾರವನ್ನು ಭಾರತವು ನಿರ್ವಹಿಸುತ್ತಿರುವ ರೀತಿಯನ್ನು ಪ್ರಶ್ನಿಸಿದ ಐರಿಷ್ ಹೈಕೋರ್ಟ್
ಆಶ್ರಯ ಕೋರಿ ಮುಂಬೈನ ಮಾಂಸ ವ್ಯಾಪಾರಿಯ ಅರ್ಜಿ ವಿಚಾರಣೆ

photo credit : Darragh Sherwin
ಲಂಡನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬೈನ ಶ್ರೀಮಂತ ಮಾಂಸ ವ್ಯಾಪಾರಿಯೋರ್ವರು ಭಾರತದಲ್ಲಿ ಗೋರಕ್ಷಕರಿಂದ ದಾಳಿಗಳು ಮತ್ತು ಬೆದರಿಕೆಗಳನ್ನು ಉಲ್ಲೇಖಿಸಿ ಐರ್ಲಂಡ್ನಲ್ಲಿ ಆಶ್ರಯವನ್ನು ಕೋರಿದ್ದಾರೆ. ಐರ್ಲಂಡ್ನ ಉಚ್ಚ ನ್ಯಾಯಾಲಯವು ಅಕ್ಟೋಬರ್ 2022ರಲ್ಲಿ ನೀಡಿದ ತೀರ್ಪಿನಿಂದ ಬೆಳಕಿಗೆ ಬಂದಿರುವ ಈ ಪ್ರಕರಣವು ಭಾರತದಲ್ಲಿ ಗುಂಪು ಹಿಂಸಾಚಾರದ ಘಟನೆಗಳ ಕುರಿತು ಹೆಚ್ಚುತ್ತಿರುವ ಕಳವಳ ಮತ್ತು ಆಡಳಿತ ಯಂತ್ರದ ಪ್ರತಿಕ್ರಿಯೆಗಳನ್ನು ಎತ್ತಿ ತೋರಿಸುತ್ತದೆ ಎಂದು Newslaundry ವರದಿ ಮಾಡಿದೆ.
ಅಂತರರಾಷ್ಟ್ರೀಯ ರಕ್ಷಣೆಗಾಗಿ ಅರ್ಜಿ ಸಲ್ಲಿಸಿರುವುದರಿಂದ ನಿಯಮದಂತೆ ಅರ್ಜಿದಾರನ ಗುರುತನ್ನು ಬಹಿರಂಗಗೊಳಿಸಲಾಗಿಲ್ಲ. ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಿರುವಂತೆ 40ರ ಹರೆಯದ ಅರ್ಜಿದಾರ ತನ್ನಿಬ್ಬರು ಪುತ್ರರ ಜೊತೆ ಒಟ್ಟು 40 ಲಕ್ಷ ಯುರೋ ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ. 2017ರಲ್ಲಿ ವ್ಯಕ್ತಿಯ ಮೇಲೆ ಆರೆಸ್ಸೆಸ್ಗೆ ಸೇರಿದವರು ಎನ್ನಲಾಗಿರುವ ಅಪರಿಚಿತ ಸ್ವಘೋಷಿತ ಗೋರಕ್ಷಕರು ದಾಳಿಯನ್ನು ನಡೆಸಿದ್ದರು. ಅವರ ವ್ಯವಹಾರವನ್ನು ಮುಚ್ಚಿಸಿದ್ದ ತಥಾಕಥಿತ ಗೋರಕ್ಷಕರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆದೇಶಿಸಿದ್ದರು ಎಂದು ವರದಿಯಾಗಿದೆ.
ಆರಂಭದಲ್ಲಿ ಅಂತರರಾಷ್ಟ್ರೀಯ ರಕ್ಷಣೆ ಮೇಲ್ಮನವಿಗಳ ನ್ಯಾಯಮಂಡಳಿ (ಐಪಿಎಟಿ)ಯು ಆಶ್ರಯ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿತ್ತಾದರೂ ನ್ಯಾ.ಸಿಯೋಭನ್ ಫೆಲನ್ ಅವರು, ಈ ನಿರ್ಧಾರವನ್ನು ರದ್ದುಗೊಳಿಸಿದ್ದರು ಮತ್ತು ನೂತನ ನ್ಯಾಯಮಂಡಳಿ ಸದಸ್ಯರಿಂದ ಪುನರ್ಪರಿಶೀಲನೆಗೆ ಆದೇಶಿಸಿದ್ದರು.
ಪುನರ್ಪರಿಶೀಲನೆ ಇನ್ನೂ ನಡೆದಿಲ್ಲ ಎಂದು ಮಾಂಸ ವ್ಯಾಪಾರಿಯನ್ನು ಪ್ರತಿನಿಧಿಸುತ್ತಿರುವ ಕಾನೂನು ಸಂಸ್ಥೆ Abbey Law ಸುದ್ದಿಸಂಸ್ಥೆಗೆ ತಿಳಿಸಿದೆ.
ಅಂತಿಮ ನಿರ್ಧಾರವು ಇನ್ನೂ ಬಾಕಿಯುಳಿದಿದ್ದರೂ, ಭಾರತೀಯರು ಆಶ್ರಯ ಪಡೆದಿರುವ ಪ್ರಕರಣಗಳು ತುಲನಾತ್ಮಕವಾಗಿ ಅಪರೂಪ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಆದಾಗ್ಯೂ ಈ ನಿರ್ದಿಷ್ಟ ಪ್ರಕರಣದಲ್ಲಿ ನ್ಯಾಯಾಲಯದ ಅವಲೋಕನಗಳು, ಅದರ ಐತಿಹಾಸಿಕ ಸಂದರ್ಭದ ಜೊತೆ, ಭಾರತದಲ್ಲಿ ‘ಹಿಂದು ರಾಷ್ಟ್ರವಾದಿಗಳಿಂದ ಧಾರ್ಮಿಕ ಕಿರುಕುಳಗಳ’ ಆರೋಪಗಳಿಗೆ ಪಾಶ್ಚಾತ್ಯ ಪ್ರಜಾಪ್ರಭುತ್ವಗಳಲ್ಲಿನ ನ್ಯಾಯಾಂಗ ವ್ಯವಸ್ಥೆಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ನೀಲನಕ್ಷೆಯನ್ನು ಒದಗಿಸುತ್ತವೆ.
ಆಶ್ರಯ ಕೋರಿಕೆ ಅರ್ಜಿಗಳ ಮೌಲ್ಯಮಾಪನ ನಡೆಸುವ ಅಂತರರಾಷ್ಟ್ರಿಯ ರಕ್ಷಣೆ ಕಚೇರಿ (ಐಪಿಒ) 2019ರಲ್ಲಿ ಭಾರತೀಯ ಮಾಂಸ ವ್ಯಾಪಾರಿಗೆ ಆಶ್ರಯವನ್ನು ನಿರಾಕರಿಸಿತ್ತು ಮತ್ತು ಭಾರತದಲ್ಲಿ ಸರಕಾರದಿಂದ ರಕ್ಷಣೆ ಲಭ್ಯವಿದೆ ಎಂದು ಪ್ರತಿಪಾದಿಸಿತ್ತು. ನಂತರ ಮೇಲ್ಮನವಿಗಳಿಂದಾಗಿ ಐಪಿಎಟಿ ಸರಕಾರದ ರಕ್ಷಣೆಯ ಕೊರತೆಯಿದೆ ಮತ್ತು ವ್ಯಾಪಾರಿಯ ಮೇಲೆ ದಾಳಿ ನಡೆಸಿದ್ದವರನ್ನು ಕಾನೂನು ಕ್ರಮಕ್ಕೊಳಪಡಿಸಲು ಪೊಲೀಸರು ಹಿಂಜರಿಯುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಂಡಿತ್ತು,ಆದರೆ ವ್ಯಾಪಾರಿಯು ಭಾರತದೊಳಗೆ ಬೇರೆಡೆಗೆ ಸ್ಥಳಾಂತರಗೊಳ್ಳಬಹುದು. ಅವರಿಗೆ ದೇಶದಲ್ಲಿ ಪರ್ಯಾಯ ಆಂತರಿಕ ರಕ್ಷಣೆಯು ಲಭ್ಯವಿದೆ ಎಂದು ಅದು ವಾದಿಸಿತ್ತು.
ಐಪಿಎಟಿ ತೀರ್ಪಿನಿಂದ ಅತೃಪ್ತಗೊಂಡಿದ್ದ ವ್ಯಾಪಾರಿ ಮತ್ತೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. 2021ರಲ್ಲಿ ನ್ಯಾ.ಬರ್ನ್ಸ್ ಅವರು ನ್ಯಾಯಾಂಗ ಪುನರ್ಪರಿಶೀಲನೆಗೆ ಒಪ್ಪಿಗೆ ನೀಡಿದ್ದರು. ಪ್ರಕರಣದ ಅರ್ಹತೆಯನ್ನು ಗುರುತಿಸಿದ್ದ ಅವರು ಪುನರ್ಪರಿಶೀಲನೆಗಾಗಿ ಅದನ್ನು ಐಪಿಎಟಿಗೆ ರವಾನಿಸಿದ್ದರು. ಆದರೆ ಐಪಿಎಟಿ ಮತ್ತು ನ್ಯಾಯ ಸಚಿವಾಲಯ ಎರಡೂ ನ್ಯಾಯಾಧೀಶರ ನಿರ್ಧಾರವನ್ನು ವಿರೋಧಿಸಿದ್ದವು ಮತ್ತು ವ್ಯಾಪಾರಿಗೆ ‘ಆಂತರಿಕ ರಕ್ಷಣೆ ಪರ್ಯಾಯ’ ಲಭ್ಯವಿದೆ ಎಂಬ ಅಭಿಪ್ರಾಯವನ್ನು ಬದಲಿಸುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದವು. ನಂತರ ನ್ಯಾ.ಬರ್ನ್ಸ್ ಅವರ ಸ್ಥಾನಕ್ಕೆ ಬಂದಿದ್ದ ನ್ಯಾ.ಫೆಲನ್ ಮಾಂಸ ವ್ಯಾಪಾರಿಯ ವಾದಗಳನ್ನು ಪರಿಗಣಿಸಿದ್ದರು. ತನ್ನ ಚರ್ಚೆಯಲ್ಲಿ ಅವರು ಕೆನಡಾದಲ್ಲಿಯ ಇನ್ನೋರ್ವ ಮುಂಬೈ ಮಾಂಸ ವ್ಯಾಪಾರಿಯನ್ನು ಒಳಗೊಂಡಿದ್ದ ಇಂತಹುದೇ ಪ್ರಕರಣವನ್ನು ಉಲ್ಲೇಖಿಸಿದ್ದರು ಮತ್ತು ಭಾರತದಲ್ಲಿ ಮುಸ್ಲಿಮರ ವಿರುದ್ಧ ಕಿರುಕುಳದ ಸಂಚಿತ ಸ್ವರೂಪವನ್ನು ನಿರ್ಧರಿಸುವ ಮಹತ್ವಕ್ಕೆ ಒತ್ತು ನೀಡಿದ್ದರು.
ಐಪಿಎಟಿಯು ಆಂತರಿಕ ರಕ್ಷಣೆ ಪರ್ಯಾಯವನ್ನು ಪ್ರಸ್ತಾಪಿಸುವಾಗ ಭಾರತದಲ್ಲಿ ಗೋಮಾಂಸ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮುಸ್ಲಿಮರು ಎದುರಿಸುತ್ತಿರುವ ಅಪಾಯವನ್ನು ನಿರ್ಣಯಿಸುವಲ್ಲಿ ವಿಫಲಗೊಂಡಿದೆ ಎಂದು ಹೇಳಿರುವ ನ್ಯಾ.ಫೆಲನ್,‘ಐಪಿಎಟಿ ನಿರ್ಧಾರವು ಕಾನೂನಿನಲ್ಲಿ ಸಮರ್ಥನೀಯವಲ್ಲ ಎನ್ನುವುದನ್ನು ನನ್ನ ತೀರ್ಮಾನದಲ್ಲಿ ನಾನು ದೃಢಪಡಿಸಿದ್ದೇನೆ’ ಎಂದಿದ್ದಾರೆ.







